ವಿದೇಶ

ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಬಂದರೆ ಶಾಂತಿ ಸಾಧ್ಯ- ಇರಾನ್

ಅಮೆರಿಕಾವನ್ನು ನಂಬದಿರಲು ಇರಾನ್‌ಗೆ ಸಾಕಷ್ಟು ಕಾರಣಗಳಿವೆ. ಆದರೆ, ಅಮೆರಿಕ ನಮ್ಮನ್ನು ನಂಬಲು ಕಾರಣಗಳಿವೆ. ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ವಿಶ್ವಾಸದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ.

ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಬಂದರೆ ಶಾಂತಿ ಸಾಧ್ಯ- ಇರಾನ್
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ
Published On :

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗೆ ಸೈನಿಕ ಪರಿಹಾರ ಸಾಧ್ಯವಿಲ್ಲ ಎಂದು ಹೇಳಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಹೇಳಿದ್ದು, ಶಾಂತಿ ಸ್ಥಾಪನೆಗೆ ಭಾರತ ಇನ್ನಷ್ಟು ದೊಡ್ಡ ಪಾತ್ರ ವಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾದ ಮೇಲೆ ಇರಾನ್‌ಗೆ ಯಾವುದೇ ವಿಶ್ವಾಸ ಇಲ್ಲ. ಅಮೆರಿಕದಿಂದ ಬರುತ್ತಿರುವ ಪರಸ್ಪರ ವಿರುದ್ಧದ ಸಂದೇಶಗಳಿಂದ ಮಾತುಕತೆಗಳಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.

ಅಮೆರಿಕಾವನ್ನು ನಂಬದಿರಲು ಇರಾನ್‌ಗೆ ಸಾಕಷ್ಟು ಕಾರಣಗಳಿವೆ. ಆದರೆ, ಅಮೆರಿಕ ನಮ್ಮನ್ನು ನಂಬಲು ಕಾರಣಗಳಿವೆ. ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ವಿಶ್ವಾಸದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಿದರು.

ಇದೇ ವೇಳೆ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಹಾರಕ್ಕಾಗಿ ಭಾರತ ಯಾವುದೇ ರಚನಾತ್ಮಕ ಪಾತ್ರ ವಹಿಸಿದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು. “ಈ ಬಿಕ್ಕಟ್ಟಿಗೆ ಮಾತುಕತೆಯ ಹೊರತಾಗಿ ಬೇರೆ ಪರಿಹಾರವೇ ಇಲ್ಲ,” ಎಂದೂ ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ಇರಾನ್ ಯಾವತ್ತೂ ಅಣ್ವಸ್ತ್ರಗಳನ್ನು ನಿರ್ಮಿಸಲು ಯತ್ನಿಸಿಲ್ಲ ಎಂದು ಪುನರುಚ್ಚರಿಸಿದ ಅವರು, ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳು ವಿಫಲವಾಗಿಲ್ಲ, ಆದರೆ, ಸವಾಲುಗಳು ಎದುರಾಗುತ್ತಿವೆ ಎಂದರು.

ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಇತ್ತೀಚಿನ ಸಂಘರ್ಷದ ಬಳಿಕ ಕಳೆದ ತಿಂಗಳು ಜಾರಿಗೆ ಬಂದಿದ್ದ ಕದನ ವಿರಾಮವನ್ನು ಉಳಿಸಿಕೊಳ್ಳಲು ಇರಾನ್ ಪ್ರಯತ್ನಿಸುತ್ತಿದೆ. ಆದರೆಕ ಮಾತುಕತೆಗಳು ವಿಫಲವಾದರೆ ಮತ್ತೆ ಯುದ್ಧ ಆರಂಭವಾಗುವ ಸಾಧ್ಯತೆಗೂ ಸಿದ್ಧರಾಗಿದ್ದೇವೆ ಎಂದು ಎಚ್ಚರಿಸಿದರು.

ಇದೇ ವೇಳೆ ಹಾರ್ಮುಜ್ ಜಲಸಂಧಿ ಕುರಿತಂತೆಯೂ ಅವರು ಮಹತ್ವದ ಹೇಳಿಕೆ ನೀಡಿದರು. ಜಾಗತಿಕ ಇಂಧನ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿಯ ಪರಿಸ್ಥಿತಿ “ಅತ್ಯಂತ ಸಂಕೀರ್ಣ”ವಾಗಿದೆ ಎಂದು ಹೇಳಿದ ಅವರು, ಕೆಲವು ಷರತ್ತುಗಳಡಿ ವ್ಯಾಪಾರ ಹಡಗುಗಳ ಸಂಚಾರಕ್ಕೆ ಇರಾನ್ ಸಹಕರಿಸಲು ಸಿದ್ಧವಿದೆ ಎಂದರು.

ಹಾರ್ಮುಜ್ ಜಲಸಂಧಿ ಮೂಲಕ ಎಲ್ಲಾ ಹಡಗುಗಳು ಸುರಕ್ಷಿತವಾಗಿ ಸಾಗಲು ನಾವು ಸಹಾಯ ಮಾಡಲು ಸಿದ್ಧ. ಆದರೆ, ಇರಾನ್ ವಿರುದ್ಧ ಯುದ್ಧ ನಡೆಸುತ್ತಿರುವ ರಾಷ್ಟ್ರಗಳ ಹಡಗುಗಳಿಗೆ ಮಾತ್ರ ನಮ್ಮ ನಿರ್ಬಂಧ ಇರಲಿದೆ ಎಂದು ಅವರು ಹೇಳಿದರು. ಸುರಕ್ಷಿತ ಸಂಚಾರಕ್ಕಾಗಿ ಇರಾನ್ ನೌಕಾಪಡೆಯೊಂದಿಗೆ ಸಮನ್ವಯ ಅಗತ್ಯ ಎಂದೂ ತಿಳಿಸಿದರು.

ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಇರಾನ್ ಕುರಿತು ತಮ್ಮ ಸಹನೆ ಮುಗಿಯುತ್ತಿದೆ ಎಂದು ಹೇಳಿದ್ದು, ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ತೆರೆಯಬೇಕೆಂದು ಆಗ್ರಹಿಸಿದ್ದಾರೆ.

ಜಾಗತಿಕ ಇಂಧನ ಭದ್ರತೆ ಕುರಿತು ಆತಂಕ ಹೆಚ್ಚುತ್ತಿರುವ ನಡುವೆಯೂ, ರಾಜತಾಂತ್ರಿಕ ಮಾತುಕತೆಯೇ ಈ ಬಿಕ್ಕಟ್ಟಿಗೆ ಏಕೈಕ ಪರಿಹಾರ ಎಂದು ಇರಾನ್ ಮತ್ತೊಮ್ಮೆ ಒತ್ತಿಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.