Iran conflict: ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ಘೋಷಿಸಿದ ಅಮೆರಿಕ
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇಂಧನ ನೀತಿಯ ಪರಿಣಾಮವಾಗಿ ತೈಲ ಮತ್ತು ಅನಿಲ ಉತ್ಪಾದನೆ ಇತಿಹಾಸದಲ್ಲೇ ಅತಿ ಗರಿಷ್ಠ ಮಟ್ಟ ತಲುಪಿದೆ.

ಇರಾನ್‌ನೊಂದಿಗೆ ಹೆಚ್ಚುತ್ತಿರುವ ಸಂಘರ್ಷದ ನಡುವೆ, ಅಮೆರಿಕಾ ಭಾರತಕ್ಕೆ ತಾತ್ಕಾಲಿಕವಾಗಿ 30 ದಿನಗಳ ವಿನಾಯಿತಿ ನೀಡುವುದಾಗಿ ಘೋಷಿಸಿದೆ. ಈ ವಿನಾಯಿತಿಯ ಮೂಲಕ ಭಾರತೀಯ ಶುದ್ಧೀಕರಣ ಸಂಸ್ಥೆಗಳು ರಷ್ಯಾದ ತೈಲವನ್ನು ಖರೀದಿಸಲು ಅವಕಾಶ ಪಡೆಯಲಿವೆ.
ಅಮೆರಿಕಾ ಸರ್ಕಾರ ರಷ್ಯಾ ಮೇಲಿನ ಆರ್ಥಿಕ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿ, ಸಮುದ್ರ ಮಧ್ಯೆ ಸಿಕ್ಕಿಹಾಕಿಕೊಂಡಿರುವ ರಷ್ಯಾದ ತೈಲವನ್ನು ಭಾರತಕ್ಕೆ ಮಾರಾಟ ಮಾಡಲು ಅನುಮತಿ ನೀಡಿತು.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇಂಧನ ನೀತಿಯ ಪರಿಣಾಮವಾಗಿ ತೈಲ ಮತ್ತು ಅನಿಲ ಉತ್ಪಾದನೆ ಇತಿಹಾಸದಲ್ಲೇ ಅತಿ ಗರಿಷ್ಠ ಮಟ್ಟ ತಲುಪಿದೆ. ಜಾಗತಿಕ ಮಾರುಕಟ್ಟೆಗೆ ತೈಲ ಸರಬರಾಜು ನಿರಂತರವಾಗಿ ಸಾಗಲು ಅವಕಾಶ ನೀಡಲು, ಖಜಾನೆ ಇಲಾಖೆ ಭಾರತೀಯ ರಿಫೈನರಿಗಳಿಗೆ ರಷ್ಯಾದ ತೈಲವನ್ನು ಖರೀದಿಸಲು 30 ದಿನಗಳ ತಾತ್ಕಾಲಿಕ ವಿನಾಯಿತಿಯನ್ನು ನೀಡುತ್ತಿದೆ ಎಂದರು.
ಇದು ಉದ್ದೇಶಪೂರ್ವಕವಾಗಿ ಕೇವಲ ಸ್ವಲ್ಪಕಾಲದ ಕ್ರಮವಾಗಿದ್ದು, ರಷ್ಯಾ ಸರ್ಕಾರಕ್ಕೆ ದೊಡ್ಡ ಆರ್ಥಿಕ ಲಾಭವಾಗುವುದಿಲ್ಲ. ಏಕೆಂದರೆ ಈ ವಿನಾಯಿತಿ ಈಗಾಗಲೇ ಸಮುದ್ರದಲ್ಲಿ ಸಿಲುಕಿರುವ ತೈಲಕ್ಕೆ ಸಂಬಂಧಿಸಿದ ವ್ಯವಹಾರಗಳಿಗೆ ಮಾತ್ರ ಅನುಮತಿ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು.
ಭಾರತ ಅಮೆರಿಕದ ಪ್ರಮುಖ ಪಾಲುದಾರ ದೇಶವಾಗಿದೆ. ಭಾರತ ಮುಂದಿನ ದಿನಗಳಲ್ಲಿ ಅಮೆರಿಕದ ತೈಲ ಖರೀದಿಯನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆ ನಮಗಿದೆ. ಇರಾನ್ ಜಾಗತಿಕ ಇಂಧನ ಸರಬರಾಜನ್ನು ಒತ್ತೆಯಿಡಲು ಮಾಡುವ ಪ್ರಯತ್ನಗಳಿಂದ ಉಂಟಾಗಿರುವ ಒತ್ತಡವನ್ನು ಕಡಿಮೆ ಮಾಡಲು ಈ ತಾತ್ಕಾಲಿಕ ಕ್ರಮ ಸಹಾಯಕವಾಗುತ್ತದೆ ಎಂದು ಬೆಸೆಂಟ್ ಅವರು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ Donald Trump ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ 25 ಶೇಕಡಾ ದಂಡಾತ್ಮಕ ಸುಂಕವನ್ನು ವಿಧಿಸಿದ್ದರು. ಅಮೆರಿಕಾ ಆಡಳಿತದ ಪ್ರಕಾರ, ಭಾರತದ ಈ ಖರೀದಿಗಳು ರಷ್ಯಾ–ಉಕ್ರೇನ್ ಯುದ್ಧಕ್ಕೆ ಹಣಕಾಸು ಸಹಾಯವಾಗುತ್ತಿದೆ ಎಂಬ ಆರೋಪ ಮಾಡಲಾಗಿತ್ತು.
ಕಳೆದ ತಿಂಗಳು ಅಮೆರಿಕಾ ಮತ್ತು ಭಾರತ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟಿಗೆ ಒಪ್ಪಿಕೊಂಡಿರುವುದಾಗಿ ಘೋಷಿಸಲಾಯಿತು. ಅದರ ನಂತರ ಡೊನಾಲ್ಡ್ ಟ್ರಂಪ್ 25 ಶೇಕಡಾ ದಂಡಾತ್ಮಕ ಸುಂಕವನ್ನು ರದ್ದುಗೊಳಿಸುವ ಕಾರ್ಯನಿರ್ವಹಣಾ ಆದೇಶ ಹೊರಡಿಸಿದರು. ಭಾರತ ರಷ್ಯಾದಿಂದ ಇಂಧನ ಆಮದುಗಳನ್ನು ನಿಲ್ಲಿಸಿ ಅಮೆರಿಕಾದ ಇಂಧನ ಉತ್ಪನ್ನಗಳನ್ನು ಹೆಚ್ಚು ಖರೀದಿಸುವುದಾಗಿ ಬದ್ಧತೆ ವ್ಯಕ್ತಪಡಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಸರ್ಕಾರದ ಖಜಾನೆ ಇಲಾಖೆ ಪ್ರಕಟಿಸಿದ ‘Authorizing the Delivery and Sale of Crude Oil and Petroleum Products of Russian Federation Origin Loaded on Vessels as of March 5, 2026 to India’ ಎಂಬ ಹೇಳಿಕೆಯಲ್ಲಿ, ನಿನ್ನೆ ವೇಳೆಗೆ ಅಥವಾ ಅದಕ್ಕಿಂತ ಮುಂಚೆ ಹಡಗುಗಳಲ್ಲಿ ತುಂಬಲಾಗಿರುವ ರಷ್ಯಾ ಮೂಲದ ಕಚ್ಚಾ ತೈಲ ಅಥವಾ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ, ವಿತರಣೆ ಅಥವಾ ಇಳಿಸುವಿಕೆಗೆ ಸಂಬಂಧಿಸಿದ ವ್ಯವಹಾರಗಳನ್ನುಏಪ್ರಿಲ್ 4ರ ತನಕ ಅನುಮತಿಸಲಾಗಿದೆ ಎಂದು ತಿಳಿಸಿದೆ.
ಈ ತೈಲವನ್ನು ಭಾರತದಲ್ಲಿನ ಬಂದರುಗಳಲ್ಲಿ ಇಳಿಸುವುದು ಹಾಗೂ ಅದನ್ನು ಖರೀದಿಸುವ ಸಂಸ್ಥೆಗಳು ಭಾರತದ ಕಾನೂನುಗಳ ಅಡಿಯಲ್ಲಿ ಸ್ಥಾಪಿತವಾಗಿರಬೇಕು ಎಂಬ ಷರತ್ತು ಕೂಡ ಇದೆ.
ಖಜಾನೆ ಇಲಾಖೆಯ ಸಾಮಾನ್ಯ ಪರವಾನಗಿಯಲ್ಲಿ, ಈ ವಿನಾಯಿತಿ ಇತರ ಯಾವುದೇ ಕಾರ್ಯನಿರ್ವಹಣಾ ಆದೇಶಗಳಿಂದ ನಿಷೇಧಿಸಲಾದ ವ್ಯವಹಾರಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಿಶೇಷವಾಗಿ ಇರಾನ್ ಸರ್ಕಾರ ಅಥವಾ ಇರಾನ್ ಮೂಲದ ವಸ್ತುಗಳು ಮತ್ತು ಸೇವೆಗಳೊಂದಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಇರಾನ್ ಸಂಬಂಧ ವ್ಯವಹಾರ ಮತ್ತು ಅನುಮೋದನೆ ನಿಯಂತ್ರಕಗಳ ಪ್ರಕಾರ ಇನ್ನೂ ನಿಷೇಧ ಮುಂದುವರಿಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



