US-Iran war: ಅಮೆರಿಕಾ ದಾಳಿಗೆ ಇರಾನ್ ತಿರುಗೇಟು; ಬಹ್ರೇನ್-ಕುವೈತ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ; ಯುದ್ಧ ಪುನರಾರಂಭ?
ಇರಾನ್ ಮೂಲಗಳ ಪ್ರಕಾರ, ಅಮೆರಿಕದ ಇತ್ತೀಚಿನ ದಾಳಿಗೆ ಪ್ರತಿಯಾಗಿ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ತೆಹ್ರಾನ್/ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ಪುನರಾರಂಭಗೊಂಡಿದೆ, ಅಮೆರಿಕ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಮಾತುಕತೆ ವಿಫಲವಾಗಿದ್ದು, ಇದಕ್ಕೆ ಬೆಲೆ ಇರಾನ್ ಕಟ್ಟಲೇಬೇಕು" ಎಂದು ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಅಮೆರಿಕ ಸೇನೆ ಇರಾನ್‌ನ ಹಲವು ನೆಲೆಗಳನ್ನು ಗುರಿಯಾಗಿಸಿಕೊಂಡು ಹೊಸ ದಾಳಿಗಳನ್ನು ನಡೆಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ನ ಸೇನಾ ನಾಯಕತ್ವ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ.
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿಯ ಬಂದ್ ನಿರ್ಧಾರವು ವಿಶ್ವದ ಇಂಧನ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.
ಬಹ್ರೇನ್ ಮತ್ತು ಕುವೈತ್‌ನಲ್ಲಿನ ಅಮೆರಿಕ ನೆಲೆಗಳ ಮೇಲೆ ದಾಳಿ
ಇರಾನ್ ಮೂಲಗಳ ಪ್ರಕಾರ, ಅಮೆರಿಕದ ಇತ್ತೀಚಿನ ದಾಳಿಗೆ ಪ್ರತಿಯಾಗಿ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ದಾಳಿಯ ಪ್ರಮಾಣ ಹಾಗೂ ಹಾನಿಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಜಾಗತಿಕ ಆರ್ಥಿಕತೆಗೆ ಅಪಾಯ ಎಂದ ಹೌತಿ ಬಂಡುಕೋರರು
ಯೆಮೆನ್‌ನ ಹೌತಿ ಬಂಡುಕೋರರು ಇರಾನ್ ವಿರುದ್ಧದ ಅಮೆರಿಕಾ ದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದು, ಈ ಕ್ರಮ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ದಾಳಿಗಳು ಇರಾನ್ ಜನರ ಸಂಕಲ್ಪವನ್ನು ಕುಗ್ಗಿಸಲು ಸಾಧ್ಯವಿಲ್ಲ. ಬದಲಾಗಿ ಈ ಯುದ್ಧ ಜಾಗತಿಕ ಪೂರೈಕೆ ಸರಪಳಿ, ಅಂತರರಾಷ್ಟ್ರೀಯ ವ್ಯಾಪಾರ, ತೈಲ ಮತ್ತು ಇಂಧನ ಮಾರುಕಟ್ಟೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ" ಎಂದು ಹೇಳಿದ್ದಾರೆ.
ಈ ನಡುವೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು, ಮಧ್ಯಪ್ರಾಚ್ಯ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
"ಮಧ್ಯಪ್ರಾಚ್ಯ ಮತ್ತಷ್ಟು ಆಳವಾದ ಬಿಕ್ಕಟ್ಟಿನತ್ತ ಎಳೆಯಲ್ಪಡುತ್ತಿದೆ. ಇದರ ಪರಿಣಾಮಗಳು ಈ ಪ್ರದೇಶವನ್ನು ಮೀರಿ ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿವೆ. ಸೀಮಿತ ಮಟ್ಟದ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವ ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ಎಚ್ಚರಿಸಿದ್ದಾರೆ.
ಜೋರ್ಡನ್‌ನಲ್ಲಿ ತುರ್ತು ಎಚ್ಚರಿಕೆ
ಸಂಘರ್ಷದ ಪರಿಣಾಮ ನೆರೆಯ ರಾಷ್ಟ್ರಗಳ ಮೇಲೂ ಬೀಳತೊಡಗಿದೆ. ಜೋರ್ಡನ್ ವಾಯುಪ್ರದೇಶದಲ್ಲಿ ಕ್ಷಿಪಣಿಗಳು, ಡ್ರೋನ್‌ಗಳು ಹಾಗೂ ರಾಕೆಟ್‌ಗಳು ಸಂಚರಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಇಲಾಖೆ ಅಲ್ಲಿರುವ ನಾಗರಿಕರಿಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಅಮೆರಿಕ-ಇರಾನ್ ಸಂಘರ್ಷವು ಪ್ರಾದೇಶಿಕ ಯುದ್ಧದ ಸ್ವರೂಪ ಪಡೆಯುವ ಆತಂಕ ಹೆಚ್ಚಾಗಿದೆ. ಇದರ ಪರಿಣಾಮ ಜಾಗತಿಕ ವ್ಯಾಪಾರ, ಇಂಧನ ಭದ್ರತೆ ಹಾಗೂ ವಿಶ್ವ ಆರ್ಥಿಕತೆಯ ಮೇಲೂ ಗಂಭೀರವಾಗಿ ಬೀಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



