ಇರಾನ್ ಅಣ್ವಸ್ತ್ರ ಹೊಂದಿದ್ದರೆ ಮಧ್ಯಪ್ರಾಚ್ಯವನ್ನೇ ನಾಶ ಮಾಡುತ್ತಿತ್ತು, ಇಸ್ರೇಲ್ ಅಸ್ತಿತ್ವವೇ ಇರುತ್ತಿರಲಿಲ್ಲ: ಟ್ರಂಪ್
ಇರಾನ್ ಬಳಿ ಅಣ್ವಸ್ತ್ರ ಇದ್ದಿದ್ದರೆ ಇಂದು ಇಸ್ರೇಲ್ ಎಂಬ ದೇಶವೇ ಇರುತ್ತಿರಲಿಲ್ಲ. ಮಧ್ಯಪ್ರಾಚ್ಯವೂ ಸುರಕ್ಷಿತವಾಗಿರುತ್ತಿರಲಿಲ್ಲ. ಅವರು ನಮ್ಮ ಮೇಲೂ ದಾಳಿ ನಡೆಸುತ್ತಿದ್ದರು.

ವಾಷಿಂಗ್ಟನ್: ಅಮೆರಿಕ-ಇರಾನ್ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ನಡುವೆಯೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
"ಇರಾನ್ ಬಳಿ ಅಣ್ವಸ್ತ್ರ ಇದ್ದಿದ್ದರೆ ಇಸ್ರೇಲ್ ಎಂಬ ರಾಷ್ಟ್ರವೇ ಉಳಿಯುತ್ತಿರಲಿಲ್ಲ" ಎಂದು ಹೇಳಿರುವ ಅವರು, ಟೆಹ್ರಾನ್ ವಿರುದ್ಧ ಅಮೆರಿಕದ ಸೇನಾ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾತನಾಡಿದ ಟ್ರಂಪ್, "ಇರಾನ್ ಬಳಿ ಅಣ್ವಸ್ತ್ರ ಇದ್ದಿದ್ದರೆ ಇಂದು ಇಸ್ರೇಲ್ ಎಂಬ ದೇಶವೇ ಇರುತ್ತಿರಲಿಲ್ಲ. ಮಧ್ಯಪ್ರಾಚ್ಯವೂ ಸುರಕ್ಷಿತವಾಗಿರುತ್ತಿರಲಿಲ್ಲ. ಅವರು ನಮ್ಮ ಮೇಲೂ ದಾಳಿ ನಡೆಸುತ್ತಿದ್ದರು. ನಾವು ನಿನ್ನೆ ಅವರಿಗೆ ದೊಡ್ಡ ಮಟ್ಟಜಲ್ಲೇ ಬಿಸಿ ಮುಟ್ಟಿಸಿದ್ದೇವೆ, ಇಂದೂ ದೊಡ್ಡ ಮಟ್ಟದಲ್ಲೇ ಹೊಡೆತ ಬೀಳಲಿದೆ. ಮುಂದೇನಾಗುತ್ತದೆ ನೋಡೋಣ" ಎಂದು ಹೇಳಿದ್ದಾರೆ.
ಇದೇ ವೇಳೆ ಇರಾನ್ ಜೊತೆಗಿನ ಅಣು ಒಪ್ಪಂದದ ಮಾತುಕತೆಗಳು ಅಂತಿಮ ಹಂತ ತಲುಪಿದ್ದರೂ, ಟೆಹ್ರಾನ್ ನಿರಂತರವಾಗಿ ಕಾಲಹರಣ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ.
"ನಾವು ಒಪ್ಪಂದಕ್ಕೆ ಬಹಳ ಹತ್ತಿರದಲ್ಲಿದ್ದೆವು. ಆದರೆ, ಅವರು ನಮ್ಮನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೆ ಕೆಲ ಅಸಮರ್ಥ ನಾಯಕರು ಅಧಿಕಾರದಲ್ಲಿದ್ದ ಕಾರಣ ಇರಾನ್ ಈ ರೀತಿ ವರ್ತಿಸಿತು" ಎಂದು ಟೀಕಿಸಿದರು.
ಇದೇ ವೇಳೆ ಅಮೆರಿಕವು ಇರಾನ್ ವಿರುದ್ಧ ತನ್ನ ಸೇನಾ ಕಾರ್ಯಾಚರಣೆ ಮುಂದುವರಿಸಲಿದೆ ಎಂಬ ಸ್ಪಷ್ಟ ಸಂದೇಶವನ್ನೂ ಟ್ರಂಪ್ ನೀಡಿದ್ದಾರೆ. "ನಾವು ನಿನ್ನೆ ದಾಳಿ ನಡೆಸಿದ್ದೇವೆ, ಇಂದು ಮತ್ತೆ ಕಠಿಣ ದಾಳಿ ನಡೆಸಲಿದ್ದೇವೆ. ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದನ್ನು ನೋಡೋಣ" ಎಂದು ಅವರು ಹೇಳಿದರು.
ಇತ್ತೀಚೆಗೆ ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಅನ್ನು ಇರಾನ್ ಹೊಡೆದುರುಳಿಸಿದ ಘಟನೆಯೂ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಘಟನೆಯನ್ನು ಉಲ್ಲೇಖಿಸಿದ ಟ್ರಂಪ್, "ಆ ಹೆಲಿಕಾಪ್ಟರ್ ಘಟನೆಯ ನಂತರ ನಮಗೆ ಪ್ರತಿದಾಳಿ ನಡೆಸುವ ಸಂಪೂರ್ಣ ಹಕ್ಕಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



