"ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಿರಿ": ಅಮೆರಿಕಾ ನೇರ ಮಾತುಕತೆ ಪ್ರಸ್ತಾಪ ತಳ್ಳಿ ಹಾಕಿದ ಇರಾನ್; ಟ್ರಂಪ್‌ಗೆ ಭಾರೀ ಮುಖಭಂಗ..!
ಟ್ರಂಪ್ ಅವರು ಖಮೇನಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ ಅಥವಾ ಭೇಟಿ ಸಾಧ್ಯ ಎಂದು ಹೇಳಿರುವ ವರದಿಗಳನ್ನು ನೋಡಿದ್ದೇನೆ. ಆದರೆ, ಅವರು, ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಯನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು.

ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ತಾರಕಕ್ಕೇರಿರುವ ಸಂದರ್ಭದಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೆ ಭವಿಷ್ಯದಲ್ಲಿ ಮಾತುಕತೆ ಅಥವಾ ಭೇಟಿ ಸಾಧ್ಯವೆಂದು ಟ್ರಂಪ್ ನೀಡಿದ್ದ ಹೇಳಿಕೆಯನ್ನು ಇರಾನ್ ನಿರಾಕರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು, ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.
ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅರಾಘ್ಚಿ, “ಟ್ರಂಪ್ ಅವರು ಖಮೇನಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ ಅಥವಾ ಭೇಟಿ ಸಾಧ್ಯ ಎಂದು ಹೇಳಿರುವ ವರದಿಗಳನ್ನು ನೋಡಿದ್ದೇನೆ. ಆದರೆ, ಅವರು, ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಯನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ 'ನ್ಯೂಯಾರ್ಕ್ ಪೋಸ್ಟ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್, ಪರಮಾಣು ಒಪ್ಪಂದ ಮತ್ತು ಪ್ರಾದೇಶಿಕ ಭದ್ರತೆಯ ಕುರಿತು ಮಾತುಕತೆಗಳು ಮುಂದುವರಿದರೆ ಇರಾನ್‌ನ ಪರಮೋಚ್ಛ ನಾಯಕನನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅರಾಘ್ಚಿ, ನಾವು ವಾಸ್ತವಿಕ ಜಗತ್ತಿನಲ್ಲಿ ಬದುಕಬೇಕು. ಇಂತಹ ಹೇಳಿಕೆಗಳು ರಾಜಕೀಯ ಪ್ರಚಾರಕ್ಕೆ ಸರಿಹೊಂದುತ್ತವೆ ಹೊರತು ನೆಲದ ವಾಸ್ತವಕ್ಕೆ ಅಲ್ಲ ಎಂದು ಕಿಡಿಕಾರಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ನಂತರ ಯಾವುದೇ ನೇರ ಮಾತುಕತೆಗೆ ಅವಕಾಶ ಇಲ್ಲ ಎಂಬುದು ಟೆಹ್ರಾನ್‌ನ ಸ್ಪಷ್ಟ ನಿಲುವಾಗಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ನಡೆಸಿದ ಸೈನಿಕ ದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿದೆ.
ಇರಾನ್‌ನ ಅಣು ಮತ್ತು ರಕ್ಷಣಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಗೆ ಪ್ರತಿಯಾಗಿ ಟೆಹ್ರಾನ್ ಕೂಡ ತೀವ್ರ ಎಚ್ಚರಿಕೆ ನೀಡಿದೆ.
ಟ್ರಂಪ್ ಆಡಳಿತ ಈ ಕಾರ್ಯಾಚರಣೆಯನ್ನು “ಯಶಸ್ವಿ ದಾಳಿ” ಎಂದು ಘೋಷಿಸಿದ್ದು, ಇರಾನ್‌ನ ರಕ್ಷಣಾ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ನೀಡಲಾಗಿದೆ ಎಂದು ಹೇಳಿದೆ. ಆದರೆ, ಇರಾನ್ ಇದನ್ನು ಯುದ್ಧ ಪ್ರಚೋದನೆ ಎಂದು ಆರೋಪಿಸಿದೆ.
ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲೂ ಭಾರೀ ಅಸ್ಥಿರತೆ ಉಂಟಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿರುವ ಕಾರಣ ಕಚ್ಚಾತೈಲ ಸಾಗಣೆಗೆ ಅಡ್ಡಿಯಾಗುವ ಭೀತಿ ಎದುರಾಗಿದೆ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದೆ.
ಈ ನುಡುವೆ ಇರಾನ್ ವಿರುದ್ಧದ ಸೈನಿಕ ಕ್ರಮ ಹಾಗೂ ಟ್ರಂಪ್‌ನ ಹೇಳಿಕೆಗಳಿಗೆ ಅಮೆರಿಕದೊಳಗೇ ವಿರೋಧ ವ್ಯಕ್ತವಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯುದ್ಧ ರಾಜಕೀಯವಾಗಿ ಟ್ರಂಪ್‌ಗೆ ಹಿನ್ನಡೆಯಾಗಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಒಟ್ಟಾರೆ, ಟ್ರಂಪ್ ಮಾತುಕತೆ ಕುರಿತು ಆಶಾವಾದ ವ್ಯಕ್ತಪಡಿಸಿದ್ದರೂ, ಇರಾನ್‌ನ ನೇರ ನಿರಾಕರಣೆ ಅಮೆರಿಕ-ಇರಾನ್ ಸಂಬಂಧಗಳು ಇನ್ನಷ್ಟು ಹದಗೆಡುವ ಸೂಚನೆ ನೀಡಿದೆ. ಮಧ್ಯಪ್ರಾಚ್ಯದ ಮುಂದಿನ ಬೆಳವಣಿಗೆಗಳ ಮೇಲೆ ಈಗ ಜಗತ್ತಿನ ಗಮನ ನೆಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



