ಅಮೆರಿಕಕ್ಕೆ ದುಬಾರಿಯಾದ Iran ಕದನ: ಬಿಲಿಯನ್ ಗಟ್ಟಲೆ ಡಾಲರ್ ನಷ್ಟ, ಹೆಚ್ಚುವರಿ ಅನುದಾನಕ್ಕೆ Trump ಮೊರೆ..!
ಯುದ್ಧ ಮತ್ತೆ ತೀವ್ರಗೊಂಡ ನಂತರ ಮೊದಲ ಬಾರಿಗೆ ಅವರು ಅಮೆರಿಕ ಕಾಂಗ್ರೆಸ್‌ನ ಶಾಸಕರ ಮುಂದೆ ಹಾಜರಾಗಿ, ಸಂಘರ್ಷ ಮುಂದುವರಿಸಲು ತುರ್ತು ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದರು.

ವಾಷಿಂಗ್ಟನ್: ಇರಾನ್ ವಿರುದ್ಧದ ನಿರಂತರ ಸೇನಾ ಕಾರ್ಯಾಚರಣೆ ಅಮೆರಿಕದ ಖಜಾನೆಗೆ ದೊಡ್ಡ ಹೊಡೆತ ನೀಡುತ್ತಿದೆ. ಯುದ್ಧ ದೀರ್ಘಗೊಳ್ಳುತ್ತಿರುವ ಬೆನ್ನಲ್ಲೇ ಹೆಚ್ಚುವರಿ ಹಣಕಾಸಿನ ಅಗತ್ಯ ಎದುರಾಗಿದ್ದು, ಟ್ರಂಪ್ ಆಡಳಿತ ತುರ್ತು ಅನುದಾನಕ್ಕೆ ಒತ್ತಾಯಿಸಿದೆ. ಈ ನಡುವೆ ಯುದ್ಧದ ವೆಚ್ಚದ ಕುರಿತು ಪೆಂಟಗನ್ ಮೊದಲ ಬಾರಿಗೆ ವಿವರಗಳನ್ನು ಹಂಚಿಕೊಂಡಿದೆ.
ಇರಾನ್ ವಿರುದ್ಧದ ಯುದ್ಧಕ್ಕಾಗಿ ಅಮೆರಿಕ ಇದೂವರೆಗೆ 37.5 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 3.2 ಲಕ್ಷ ರೂ. ಕೋಟಿ) ವೆಚ್ಚ ಮಾಡಿದೆ ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಮಂಗಳವಾರ ಬಹಿರಂಗಪಡಿಸಿದ್ದಾರೆ.
ಯುದ್ಧ ಮತ್ತೆ ತೀವ್ರಗೊಂಡ ನಂತರ ಮೊದಲ ಬಾರಿಗೆ ಅವರು ಅಮೆರಿಕ ಕಾಂಗ್ರೆಸ್‌ನ ಶಾಸಕರ ಮುಂದೆ ಹಾಜರಾಗಿ, ಸಂಘರ್ಷ ಮುಂದುವರಿಸಲು ತುರ್ತು ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದರು.
ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗಳಿಗೆ ಕೇವಲ ಆರು ತಿಂಗಳು ಬಾಕಿ ಇರುವ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷವು ಪ್ರತಿನಿಧಿಗಳ ಸಭೆ ಮತ್ತು ಸೆನೆಟ್‌ನಲ್ಲಿ ತನ್ನ ಬಹುಮತ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದೆ.
ಇದೇ ವೇಳೆ, ದುಬಾರಿ ಜೀವನ ವೆಚ್ಚ ಮತ್ತು ಇರಾನ್ ಯುದ್ಧದ ಖರ್ಚನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿರುವ ಡೆಮಾಕ್ರಾಟ್‌ಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ನಡೆದ ವಿಚಾರಣೆಯ ವೇಳೆ ಮಾತನಾಡಿದ ಹೆಗ್ಸೆತ್, 37.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಈಗಾಗಲೇ ನಡೆದ ಯುದ್ಧ ಕಾರ್ಯಾಚರಣೆಗಳ ಜೊತೆಗೆ ಸೆಪ್ಟೆಂಬರ್ 30ರವರೆಗಿನ ನಿರೀಕ್ಷಿತ ವೆಚ್ಚವೂ ಸೇರಿದೆ ಎಂದು ಹೇಳಿದರು. ಆದರೆ, ಈ ಲೆಕ್ಕಾಚಾರವನ್ನು ಪೆಂಟಗನ್ ಯಾವ ಆಧಾರದ ಮೇಲೆ ಮಾಡಿದೆ ಎಂಬುದನ್ನು ಅವರು ವಿವರಿಸಲಿಲ್ಲ.
ಈ ವರ್ಷದ ಮಾರ್ಚ್‌ನಲ್ಲಿ ಟ್ರಂಪ್ ಆಡಳಿತದ ಮೂಲಗಳು, ಯುದ್ಧ ಆರಂಭವಾದ ಮೊದಲ ಆರು ದಿನಗಳಲ್ಲೇ ಕನಿಷ್ಠ 11.3 ಬಿಲಿಯನ್ ಡಾಲರ್ ವೆಚ್ಚವಾಗಿದೆ ಎಂದು ಅಂದಾಜಿಸಿದ್ದವು.
ಕಳೆದ ತಿಂಗಳು ಅಧ್ಯಕ್ಷ ಟ್ರಂಪ್, ಕಾಂಗ್ರೆಸ್‌ಗೆ ಸುಮಾರು 90 ಬಿಲಿಯನ್ ಡಾಲರ್ ಹೆಚ್ಚುವರಿ ಅನುದಾನ ಕೇಳಿದ್ದರು. ಇದರಲ್ಲಿ ಬಹುಪಾಲು ಹಣವನ್ನು ಇರಾನ್ ವಿರುದ್ಧದ ಯುದ್ಧಕ್ಕಾಗಿ ಮೀಸಲಿಡಲು ಉದ್ದೇಶಿಸಲಾಗಿದೆ. ಆದರೆ, ಯುದ್ಧದ ವಿರುದ್ಧ ಜನಾಭಿಪ್ರಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕದಿಂದ ಟ್ರಂಪ್ ಆಡಳಿತ ಯುದ್ಧದ ಯೋಜನೆಗಳು ಮತ್ತು ಮುಂದಿನ ಕ್ರಮಗಳ ಕುರಿತು ಕಾಂಗ್ರೆಸ್‌ಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಪಕ್ಷಗಳ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೆನೆಟ್‌ನ ಅನುದಾನ ಸಮಿತಿಯ ಹಿರಿಯ ಡೆಮಾಕ್ರಾಟ್ ಸದಸ್ಯೆ ಪ್ಯಾಟಿ ಮರೆ, "ಅಧ್ಯಕ್ಷ ಟ್ರಂಪ್ ಯುದ್ಧವನ್ನು ಮತ್ತಷ್ಟು ವಿಸ್ತರಿಸುವ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ. ಇದು ಮತ್ತೊಂದು ಅಂತ್ಯವಿಲ್ಲದ ಯುದ್ಧವಾಗಿ ಪರಿಣಮಿಸುವ ಆತಂಕವಿದೆ" ಎಂದು ಟೀಕಿಸಿದರು.
ಇದೇ ವೇಳೆ ಡೆಮಾಕ್ರಾಟ್ ಸೆನೆಟರ್ ಕಿರ್ಸ್ಟನ್ ಗಿಲ್ಲಿಬ್ರ್ಯಾಂಡ್, "ಸರ್ಕಾರದ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ. ಯುದ್ಧ ಮುಗಿದಿದೆಯೇ ಅಥವಾ ಮುಂದುವರಿದಿದೆಯೇ? ಎರಡು ವಾರಗಳಲ್ಲಿ ಅಂತ್ಯವಾಗುತ್ತದೆಯೇ ಅಥವಾ ಇಲ್ಲವೇ? ಕ್ಷಿಪಣಿಗಳು ನಿಲ್ಲುತ್ತವೆಯೇ ಅಥವಾ ಮುಂದುವರಿಯುತ್ತವೆಯೇ? ಜನರ ಗೊಂದಲಕ್ಕೆ ಇದೇ ಕಾರಣ" ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಈ ನಡುವೆ ಹೆಚ್ಚುವರಿ ಅನುದಾನ ಸಿಗದಿದ್ದರೆ ಸೇನಾ ತರಬೇತಿ ಕಾರ್ಯಕ್ರಮಗಳನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಹೆಗ್ಸೆತ್ ಎಚ್ಚರಿಸಿದ್ದಾರೆ.
ಸುಮಾರು 1 ಟ್ರಿಲಿಯನ್ ಡಾಲರ್ ವಾರ್ಷಿಕ ಬಜೆಟ್ ಹೊಂದಿರುವ ಪೆಂಟಗನ್ ಮೇಲೂ ಯುದ್ಧದ ಭಾರ ಹೆಚ್ಚಾಗಿದ್ದು, ಸೇನಾ ನಿರ್ವಹಣೆ, ಶಸ್ತ್ರಾಸ್ತ್ರಗಳ ನಿರ್ವಹಣೆ ಮತ್ತು ಭವಿಷ್ಯದ ರಕ್ಷಣಾ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇರಾನ್ ಯುದ್ಧಕ್ಕೆ ಬೇಕಾದ ಹೆಚ್ಚುವರಿ ಅನುದಾನದ ಜೊತೆಗೆ 2027ನೇ ಹಣಕಾಸು ವರ್ಷಕ್ಕೆ 1.5 ಟ್ರಿಲಿಯನ್ ಡಾಲರ್ ರಕ್ಷಣಾ ಬಜೆಟ್ ಅನ್ನು ಅನುಮೋದಿಸುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದರು.
"ರಕ್ಷಣಾ ಇಲಾಖೆಗೆ 1.5 ಟ್ರಿಲಿಯನ್ ಡಾಲರ್ ಅನುದಾನ ನೀಡದಿರುವುದೇ ದೇಶದ ಭದ್ರತೆಗೆ ಅತಿದೊಡ್ಡ ಅಪಾಯ" ಎಂದು ತಿಳಿಸಿದರು.
ಜಂಟಿ ಸೇನಾ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಡ್ಯಾನ್ ಕೇನ್ ಕೂಡ ಇದನ್ನು ಒಪ್ಪಿಕೊಂಡು, ಯೋಧರಿಗೆ ವೇತನ ನೀಡಲು ಸಾಧ್ಯವಾದರೂ, ಸೇನಾ ಉಪಕರಣಗಳ ನಿರ್ವಹಣೆ ಮತ್ತು ಹೊಸ ಸಾಮರ್ಥ್ಯಗಳ ಅಭಿವೃದ್ಧಿಗೆ ಹಣಕಾಸಿನ ಒತ್ತಡ ಉಂಟಾಗಬಹುದು ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಸಂಪೂರ್ಣವಾಗಿ ಕುಸಿದಿದ್ದು, ಎರಡೂ ದೇಶಗಳು ಪ್ರತಿದಿನ ಪರಸ್ಪರ ದಾಳಿಗಳನ್ನು ಮುಂದುವರಿಸುತ್ತಿವೆ.
ವಾರಾಂತ್ಯದಲ್ಲಿ ಇರಾನ್ ಸಂಘರ್ಷದಲ್ಲಿ ಮೃತಪಟ್ಟ ಅಮೆರಿಕದ ಯೋಧರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸುಮಾರು 430ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಜುಲೈ 7ರಿಂದ 100 ಯೋಧರು ಗಾಯಗೊಂಡಿದ್ದರೂ, ಅವರಲ್ಲಿ 96 ಶೇಕಡಾ ಮಂದಿ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಪೆಂಟಗನ್ ತಿಳಿಸಿದೆ.
ಇದರ ನಡುವೆ ಅಧ್ಯಕ್ಷ ಟ್ರಂಪ್ ಇತ್ತೀಚಿನ ದಿನಗಳಲ್ಲಿ ಇರಾನ್‌ನ ಇಂಧನ ಘಟಕಗಳು, ಸೇತುವೆಗಳು, ಖಾರ್ಗ್ ದ್ವೀಪದ ತೈಲ ಕೇಂದ್ರ ಹಾಗೂ 'ಪಿಕ್‌ಆಕ್ಸ್ ಮೌಂಟನ್' ಎನ್ನಲಾಗುವ ಭೂಗತ ಅಣು ಸಂಬಂಧಿತ ತಾಣಗಳನ್ನು ಗುರಿಯಾಗಿಸುವ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರವೂ ಮಾತನಾಡಿದ ಅವರು, "ಪಿಕ್‌ಆಕ್ಸ್ ಮೌಂಟನ್ ತಾಣವನ್ನು ಶೀಘ್ರದಲ್ಲೇ ಹೊಡೆದುರುಳಿಸಲಾಗುವುದು" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




