West asia war: ಸೈನಿಕರ ಸಾವಿಗೆ ಹಲವು ಪಟ್ಟು ಬೆಲೆ ತೆರುತ್ತೀರಿ; Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ..!
ಇರಾನ್ ಪ್ರತಿ ಬಾರಿ ಒಬ್ಬ ಅಮೆರಿಕನ್ ಯೋಧನನ್ನು ಕೊಂದರೆ, ಅದಕ್ಕೆ ಹಲವು ಪಟ್ಟು ಬೆಲೆ ತೆರಬೇಕಾಗುತ್ತದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ ನಡೆಸಿದೆ.

ದುಬೈ: ಇರಾನ್ ವಿರುದ್ಧ ಅಮೆರಿಕ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಸತತ 10ನೇ ರಾತ್ರಿ ವೈಮಾನಿಕ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ಪುನಃ ಮುಕ್ತಗೊಳಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.
ಈ ದಾಳಿಗಳು ಇರಾನ್ ಕುವೈತ್, ಜೋರ್ಡಾನ್ ಹಾಗೂ ಬಹ್ರೈನ್ನಂತಹ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ನಡೆದಿವೆ.
ಜೋರ್ಡಾನ್ ಹಾಗೂ ಇರಾಕ್ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಅಮೆರಿಕದ ಯೋಧರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕದ ಯೋಧರ ಸಾವಿಗೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
"ಇರಾನ್ ಪ್ರತಿ ಬಾರಿ ಒಬ್ಬ ಅಮೆರಿಕನ್ ಯೋಧನನ್ನು ಕೊಂದರೆ, ಅದಕ್ಕೆ ಹಲವು ಪಟ್ಟು ಬೆಲೆ ತೆರಬೇಕಾಗುತ್ತದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ ನಡೆಸಿದೆ.
CENTCOM ಮಾಹಿತಿ ಪ್ರಕಾರ, ಇತ್ತೀಚಿನ ದಾಳಿಯಲ್ಲಿ ಇರಾನ್ನ ಮಿಲಿಟರಿ ಕಮಾಂಡ್ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ನಿಗಾ ಕೇಂದ್ರಗಳು, ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ತಾಣಗಳು, ಸಂಪರ್ಕ ಜಾಲ ಹಾಗೂ ಸಮುದ್ರ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ ನೆಲೆಗಳನ್ನು ಗುರಿಯಾಗಿಸಲಾಗಿದ ಎಂದು ತಿಳಿಸಿದ.
ಇರಾನ್ ಸರ್ಕಾರಿ ಸುದ್ದಿ ಸಂಸ್ಥೆ IRNA ಪ್ರಕಾರ, ತಬ್ರೀಜ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಮೆರಿಕದ ದಾಳಿಯಿಂದ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ತಬ್ರೀಜ್ನಲ್ಲಿ ಇರಾನ್ನ ರೆವಲ್ಯೂಷನರಿ ಗಾರ್ಡ್ನ ಭೂಗತ ಕ್ಷಿಪಣಿ ನೆಲೆಗಳಿವೆ ಎಂದು ತಿಳಿಸಿದೆ.
ಬ್ರಿಟನ್ನ ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದೆ.
ಒಮಾನ್ ಕರಾವಳಿಯ ಸಮೀಪ ಹಡಗಿಗೆ ಉತ್ಕ್ಷೇಪಕ ಅಪ್ಪಳಿಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ಹಡಗನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಮಧ್ಯಪ್ರಾಚ್ಯ ಮಿತ್ರ ರಾಷ್ಟ್ರಗಳ ಮೇಲೂ ಇರಾನ್ ದಾಳಿ
ಈ ನಡುವೆ ಇರಾನ್ ಕುವೈತ್, ಜೋರ್ಡಾನ್ ಮತ್ತು ಬಹರೇನ್ ಮೇಲೂ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ದಾಳಿಯನ್ನು ತಡೆದಿದ್ದು, ಜೋರ್ಡಾನ್ ಮೂರು ಇರಾನಿನ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.ಏತನ್ಮಧ್ಯೆ ಬಹ್ರೈನ್ ತನ್ನ ವಿಮಾನ ಸಂಚಾರ ವ್ಯವಸ್ಥೆಯನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯನ್ನು ಖಂಡಿಸಿದೆ.
ಜುಲೈ ಬಳಿಕ ಸುಮಾರು 100 ಅಮೆರಿಕನ್ ಯೋಧರಿಗೆ ಗಾಯ
ಪೆಂಟಗನ್ ಮಾಹಿತಿ ಪ್ರಕಾರ, ಜುಲೈ 7ರಿಂದ ಅಮೆರಿಕ ಮತ್ತೆ ದಾಳಿ ಆರಂಭಿಸಿದ ಬಳಿಕ ಸುಮಾರು 100 ಅಮೆರಿಕನ್ ಯೋಧರು ಗಾಯಗೊಂಡಿದ್ದಾರೆ. ಅವರಲ್ಲಿ ಶೇ.96ರಷ್ಟು ಮಂದಿ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ಬಹುತೇಕ ಗಾಯಗಳು ಸಣ್ಣ ಪ್ರಮಾಣದ ಮೆದುಳು ಆಘಾತ (Concussion) ಸ್ವರೂಪದವು ಎಂದು ಪೆಂಟಗನ್ ತಿಳಿಸಿದೆ.
ತೈಲ ಮಾರುಕಟ್ಟೆಗೆ ಮತ್ತಷ್ಟು ಆತಂಕ
ಹಾರ್ಮುಜ್ ಜಲಸಂಧಿ ಮುಚ್ಚಿರುವ ಕಾರಣ ಜಾಗತಿಕ ತೈಲ ಸಾಗಣೆ ತೀವ್ರವಾಗಿ ಕುಂಠಿತಗೊಂಡಿದೆ. ಇದರ ಪರಿಣಾಮ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 88 ಡಾಲರ್ಗಿಂತ ಹೆಚ್ಚಾಗಿದೆ.
ಇದಕ್ಕೆ ಮತ್ತಷ್ಟು ಆತಂಕ ಮೂಡಿಸಿರುವ ಯೆಮೆನ್ನ ಹೌತಿ ಬಂಡುಕೋರರು, ಸೌದಿ ಅರೇಬಿಯಾದ ಕೆಂಪು ಸಮುದ್ರ ಮಾರ್ಗದ ತೈಲ ಸಾಗಣೆಯನ್ನೂ ತಡೆಯುವುದಾಗಿ ಘೋಷಿಸಿದ್ದಾರೆ.
ಮುಂದುವರೆದ ರಾಜತಾಂತ್ರಿಕ ಪ್ರಯತ್ನ
ಯುದ್ಧ ಮತ್ತಷ್ಟು ತೀವ್ರವಾಗುತ್ತಿದ್ದರೂ ರಾಜತಾಂತ್ರಿಕ ಮಾತುಕತೆಗಳ ಪ್ರಯತ್ನ ಮುಂದುವರಿದಿದೆ. ಇರಾನ್ನ ಗೃಹ ಸಚಿವ ಎಸ್ಕಂದರ್ ಮೊಮೇನಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ನಡೆದ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಮರುಜೀವಗೊಳಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ.
ಇತ್ತ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, "ಇರಾನ್ ಪ್ರಾಮಾಣಿಕವಾಗಿ ಮಾತುಕತೆಗೆ ಬಂದರೆ ಅಮೆರಿಕ ಇನ್ನೂ ರಾಜತಾಂತ್ರಿಕ ಪರಿಹಾರಕ್ಕೆ ಸಿದ್ಧವಿದೆ" ಎಂದು ತಿಳಿಸಿದ್ದಾರೆ.
ಇರಾನ್ ಅಧಿಕಾರಿಗಳ ಪ್ರಕಾರ, ಇತ್ತೀಚಿನ ಅಮೆರಿಕದ ದಾಳಿಗಳಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 517ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಫೆಬ್ರವರಿ 28ರಿಂದ ಆರಂಭವಾದ ಸಂಘರ್ಷದಲ್ಲಿ ಇದುವರೆಗೆ 17 ಅಮೆರಿಕನ್ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



