ವಿದೇಶ

ಸೈನಿಕರ ಸಾವಿಗೆ ಅಮೆರಿಕಾ ಪ್ರತೀಕಾರ: Swiftly punish ಹೆಸರಿನಲ್ಲಿ ಇರಾನ್ ಮೇಲೆ ಭಾರೀ ವೈಮಾನಿಕ ದಾಳಿ!

ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಇಬ್ಬರು ಅಮೆರಿಕದ ಸೈನಿಕರು ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿ ಹಾಗೂ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯ ಬೆನ್ನಲ್ಲೇ ಅಮೆರಿಕ ಇರಾನ್ ವಿರುದ್ಧ ಭಾರೀ ವೈಮಾನಿಕ ದಾಳಿ ನಡೆಸಿದೆ.

ಸೈನಿಕರ ಸಾವಿಗೆ ಅಮೆರಿಕಾ ಪ್ರತೀಕಾರ: Swiftly punish ಹೆಸರಿನಲ್ಲಿ ಇರಾನ್ ಮೇಲೆ  ಭಾರೀ ವೈಮಾನಿಕ ದಾಳಿ!
ಅಮೆರಿಕದ ದಾಳಿಯಿಂದ ಹಾನಿಗೊಳಗಾದ ಸೇತುವೆಯ ಚಿತ್ರ.
Published On :

ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಬ್ಬರು ಸೈನಿಕರ ಸಾವಿಗೆ ಪ್ರತೀಕಾರವಾಗಿ ಅಮೆರಿಕ ಮತ್ತೆ ಇರಾನ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.

ಹಾರ್ಮುಜ್ ಜಲಸಂಧಿ ಸುತ್ತಲಿನ ಸೇನಾ ನೆಲೆಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರಗಳು ಹಾಗೂ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಿಂದ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ.

ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಇಬ್ಬರು ಅಮೆರಿಕದ ಸೈನಿಕರು ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿ ಹಾಗೂ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯ ಬೆನ್ನಲ್ಲೇ ಅಮೆರಿಕ ಇರಾನ್ ವಿರುದ್ಧ ಭಾರೀ ವೈಮಾನಿಕ ದಾಳಿ ನಡೆಸಿದೆ.

ಭಾನುವಾರ ಮುಂಜಾನೆ ನಡೆದ ಈ ದಾಳಿಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) "ಸೈನಿಕರ ಸಾವಿಗೆ ತ್ವರಿತ ಶಿಕ್ಷೆ" ಎಂದು ಬಣ್ಣಿಸಿದ್ದು, ಇರಾನ್‌ನ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಹಲವು ಪ್ರಮುಖ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.

ಈ ದಾಳಿಯ ಮುಖ್ಯ ಉದ್ದೇಶ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳ ಸಂಚಾರವನ್ನು ತಡೆಯುವ ಇರಾನ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಾಗಿದೆ.

ವಿಶ್ವದ ಒಟ್ಟು ಕಚ್ಚಾ ತೈಲ ಪೂರೈಕೆಯ ಸುಮಾರು 20 ಪ್ರತಿಶತ ಭಾಗ ಹೋರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದು, ಈ ಮಾರ್ಗದ ಮೇಲಿನ ನಿಯಂತ್ರಣಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಇರಾನ್‌ನ ಸರ್ಕಾರಿ ಸುದ್ದಿಸಂಸ್ಥೆ ಐಆರ್‌ಎನ್‌ಎ (IRNA) ವರದಿ ಪ್ರಕಾರ, ಹಾರ್ಮೊಜ್ಗಾನ್ ಪ್ರಾಂತ್ಯದ ಸಿರಿಕ್ ಪ್ರದೇಶದ ಮೇಲೆ ಸ್ಥಳೀಯ ಕಾಲಮಾನ ರಾತ್ರಿ ಸುಮಾರು 1.30ರ ವೇಳೆಗೆ ಭಾರೀ ವೈಮಾನಿಕ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಅದೇ ಪ್ರಾಂತ್ಯದ ಹಾಜಿಯಾಬಾದ್ ಪ್ರದೇಶವೂ ದಾಳಿಗೆ ಗುರಿಯಾಗಿದ್ದು, ಪ್ರಮುಖ ಬಂದರು ನಗರವಾದ ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ.

ಹಾರ್ಮುಜ್ ಜಲಸಂಧಿಯಲ್ಲಿರುವ ಖೆಷ್ಮ್ ದ್ವೀಪದ ಸಮೀಪದ ಪ್ರದೇಶಗಳ ಮೇಲೂ ಅಮೆರಿಕ ದಾಳಿ ನಡೆಸಿದೆ ಎಂದು ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ವರದಿ ಮಾಡಿದೆ.

ಇದರ ನಡುವೆ ನೆರೆಯ ಇರಾಕ್‌ನಲ್ಲೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಇರ್ಬಿಲ್ ಸಮೀಪದಲ್ಲಿರುವ ಇರಾನ್ ವಿರೋಧಿ ಕುರ್ಡಿಸ್ತಾನ್ ಫ್ರೀಡಂ ಪಾರ್ಟಿಯ ಸೇನಾ ನೆಲೆಯ ಮೇಲೆ ಡ್ರೋನ್ ದಾಳಿ ನಡೆದಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಇರ್ಬಿಲ್ ನಗರವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಈ ದಾಳಿಗಳ ಹಿಂದೆ ಇರಾನ್ ಅಥವಾ ಅದರ ಬೆಂಬಲಿತ ಮಿಲಿಷಿಯಾ ಸಂಘಟನೆಗಳ ಕೈವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದರೂ, ಇದುವರೆಗೆ ಯಾವುದೇ ಸಂಘಟನೆ ಹೊಣೆ ಹೊತ್ತಿಲ್ಲ.

ಅಮೆರಿಕದ ಸೆಂಟ್ರಲ್ ಕಮಾಂಡ್ ಮಾಹಿತಿ ಪ್ರಕಾರ, ಜೋರ್ಡನ್‌ನಲ್ಲಿರುವ ಸೇನಾ ನೆಲೆಯ ಮೇಲೆ ಶುಕ್ರವಾರ ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಇಬ್ಬರು ಅಮೆರಿಕದ ಸೈನಿಕರು ಮೃತಪಟ್ಟಿದ್ದಾರೆ. ಒಬ್ಬ ಸೈನಿಕ ನಾಪತ್ತೆಯಾಗಿದ್ದು, ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಸೈನಿಕರ ಹೆಸರುಗಳನ್ನು ಅಮೆರಿಕ ಬಹಿರಂಗಪಡಿಸಿಲ್ಲ. ಯುದ್ಧ ಆರಂಭವಾದ ಬಳಿಕ ಇರಾನ್‌ನ ನೇರ ದಾಳಿಯಿಂದ ಅಮೆರಿಕದ ಸೈನಿಕರು ಸಾವನ್ನಪ್ಪಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.

ಯುದ್ಧ ಆರಂಭವಾದ ದಿನದಿಂದ ಇದುವರೆಗೆ ಒಟ್ಟು 16 ಅಮೆರಿಕದ ಸೈನಿಕರು ಪ್ರಾಣ ಕಳೆದುಕೊಂಡಿದ್ದು, 430ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಕುವೈತ್‌ನಲ್ಲಿರುವ ಕಮಾಂಡ್ ಕೇಂದ್ರದ ಮೇಲೆ ನಡೆದ ಇರಾನ್ ಡ್ರೋನ್ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದರು. ನಂತರ ಸೌದಿ ಅರೇಬಿಯಾದ ಸೇನಾ ನೆಲೆಯ ಮೇಲಿನ ದಾಳಿಯಲ್ಲಿ ಒಬ್ಬ ಸೈನಿಕ ಮೃತಪಟ್ಟಿದ್ದರೆ, ಇರಾಕ್‌ನಲ್ಲಿ ಇಂಧನ ತುಂಬುವ ಸೇನಾ ವಿಮಾನ ಪತನಗೊಂಡ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದರು.

ಅಮೆರಿಕದ ಸೈನಿಕರ ಸಾವಿನ ಮಾಹಿತಿ ಬಹಿರಂಗವಾಗುವ ಕೆಲವೇ ಕ್ಷಣಗಳ ಮೊದಲು ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪರವಾಗಿ ಸರ್ಕಾರಿ ದೂರದರ್ಶನದಲ್ಲಿ ಸಂದೇಶ ಪ್ರಸಾರವಾಗಿತ್ತು.

ಅಮೆರಿಕ ತನ್ನ ದಾಳಿಗಳನ್ನು ಮುಂದುವರಿಸಿದರೆ "ಮರೆಯಲಾಗದ ಪಾಠ" ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು "ಅರ್ಥಹೀನ ಮತ್ತು ಅಮಾನ್ಯ" ಎಂದು ಟೀಕಿಸಲಾಗಿತ್ತು.

ಇದರ ಜೊತೆಗೆ, ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಸುಮಾರು ಒಂದು ತಿಂಗಳ ಹಿಂದೆ ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್, ಆ ಒಪ್ಪಂದದ ಬದ್ಧತೆಗಳನ್ನು ಇನ್ನು ಮುಂದೆ ಪಾಲಿಸುವುದಿಲ್ಲ ಎಂದು ಘೋಷಿಸಿದೆ.

ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ಈ ಕುರಿತು ಸರ್ಕಾರಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ, "ಅಮೆರಿಕ ತನ್ನ ವಾಗ್ದಾನಗಳನ್ನು ಮೀರಿ ನಡೆದುಕೊಂಡಿರುವುದರಿಂದ ನಾವು ಕೂಡ ಆ ಒಪ್ಪಂದವನ್ನು ಜಾರಿಗೆ ತರುವುದಿಲ್ಲ" ಎಂದು ಹೇಳಿದ್ದಾರೆ.

ಈ ಮಧ್ಯೆ ಶನಿವಾರ ಇರಾನ್ ನಡೆಸಿದ ದಾಳಿಯಲ್ಲಿ ಕುವೈತ್‌ನ ಪ್ರಮುಖ ಉಪ್ಪುನೀರು ಶುದ್ಧೀಕರಣ ಘಟಕ ಹಾಗೂ ತೈಲ ಸಂಗ್ರಹ ಕೇಂದ್ರಗಳಿಗೆ ಹಾನಿಯಾಗಿದೆ. ಎರಡು ದಿನಗಳಲ್ಲಿ ಉಪ್ಪುನೀರು ಶುದ್ಧೀಕರಣ ಘಟಕದ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.

ಈ ಘಟಕದಿಂದ ದೇಶದ ಸುಮಾರು 90 ಪ್ರತಿಶತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಮತ್ತು ನೀರಿನ ಸರಬರಾಜಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದು, ಕ್ಷಿಪಣಿ ದಾಳಿಯ ಭೀತಿಯಿಂದ ಕುವೈತ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿ ವಿಮಾನಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ.

ಇದಕ್ಕೆ ಪ್ರತಿಯಾಗಿ ಅಮೆರಿಕ ಕಳೆದ ಏಳು ದಿನಗಳಿಂದ ನಿರಂತರವಾಗಿ ಇರಾನ್‌ನ ಸೇನಾ ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿದೆ. ನಿಗಾ ವ್ಯವಸ್ಥೆಗಳು, ಸೇನಾ ಲಾಜಿಸ್ಟಿಕ್ಸ್ ಕೇಂದ್ರಗಳು, ಭೂಗತ ಶಸ್ತ್ರಾಸ್ತ್ರ ಸಂಗ್ರಹಾಗಾರಗಳು, ಸಮುದ್ರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಸೌಲಭ್ಯಗಳು ಸೇರಿದಂತೆ ಹಲವು ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಇರಾನ್‌ನ ಹಾರ್ಮೊಜ್ಗಾನ್ ಪ್ರಾಂತ್ಯದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕ ಮತ್ತು ಉಪ್ಪುನೀರು ಶುದ್ಧೀಕರಣ ಘಟಕಗಳು ಅಮೆರಿಕದ ದಾಳಿಯಿಂದ ತೀವ್ರ ಹಾನಿಗೊಳಗಾಗಿವೆ. ಬೋಂಜಿ ಉಪ್ಪುನೀರು ಶುದ್ಧೀಕರಣ ಘಟಕ ಸಂಪೂರ್ಣ ನಾಶವಾಗಿದ್ದು, ಸುಮಾರು 10 ಸಾವಿರ ಜನರಿಗೆ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಖೆಷ್ಮ್ ದ್ವೀಪದಲ್ಲಿರುವ ಮತ್ತೊಂದು ಘಟಕಕ್ಕೂ ಹಾನಿಯಾಗಿದೆ. ಬಂದರ್ ಅಬ್ಬಾಸ್‌ಗೆ ಸಂಪರ್ಕ ಕಲ್ಪಿಸುವ ಎರಡು ಸುರಂಗಗಳು ಹಾಗೂ ಮೂರು ಸೇತುವೆಗಳು ದಾಳಿಯಲ್ಲಿ ಹಾನಿಗೊಳಗಾಗಿರುವುದರಿಂದ ಪ್ರಮುಖ ಹೆದ್ದಾರಿಗಳ ಸಂಚಾರ ವ್ಯತ್ಯಯಗೊಂಡಿದೆ.

ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ ಇರಾನ್ ಹೋರ್ಮುಜ್ ಜಲಸಂಧಿಯ ಹಡಗು ಸಂಚಾರವನ್ನು ಬಹುತೇಕ ಸ್ಥಗಿತಗೊಳಿಸಿದೆ. ಈ ಜಲಸಂಧಿ ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿರಬೇಕು ಮತ್ತು ಇಲ್ಲಿ ಸಂಚರಿಸುವ ಹಡಗುಗಳು ಇರಾನ್‌ಗೆ ಶುಲ್ಕ ಪಾವತಿಸಬೇಕು ಎಂದು ತೆಹ್ರಾನ್ ವಾದಿಸುತ್ತಿದೆ.

ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ ಬಂದರುಗಳ ಮೇಲೆ ಮತ್ತೆ ನೌಕಾ ನಿರ್ಬಂಧ ಹೇರಿದ್ದು, ಕಚ್ಚಾತೈಲ ಸಾಗಣೆಯನ್ನು ತಡೆಯುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಕಳೆದ ವಾರ ಐದು ಹಡಗುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಒಂದು ಹಡಗನ್ನು ಕಾರ್ಯನಿರ್ವಹಿಸದಂತೆ ಮಾಡಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.

ಯುದ್ಧ ಆರಂಭಕ್ಕೂ ಮುನ್ನ ಅಮೆರಿಕ ಮತ್ತು ಇರಾನ್ ನಡುವೆ ಅಣು ಕಾರ್ಯಕ್ರಮ ಕುರಿತ ಮಾತುಕತೆಗಳು ನಡೆಯುತ್ತಿದವು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ವಿಸ್ತರಿಸುವ ಆತಂಕ ಹೆಚ್ಚಾಗಿದೆ. ಇದೇ ವೇಳೆ ದೀರ್ಘಕಾಲದ ಮಧ್ಯಪ್ರಾಚ್ಯ ಯುದ್ಧವನ್ನು ತಪ್ಪಿಸುವ ಭರವಸೆ ನೀಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೂ ದೇಶೀಯ ರಾಜಕೀಯ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.