ವಿದೇಶ

ಅಮೆರಿಕದ ದಾಳಿಯಿಂದ ಇರಾನ್‌ನ ಚಬಹಾರ್ ಬಂದರಿಗೆ ಹಾನಿ; ಕುಸಿಯುತ್ತಿರುವ ಕಣ್ಗಾವಲು ಟವರ್; ಫೋಟೋ ಹಂಚಿಕೊಂಡ ಪೀಟ್ ಹೆಗ್ಸೆತ್!

ಇರಾನ್‌ನ ಆಗ್ನೇಯ ಭಾಗದಲ್ಲಿರುವ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಚಬಹಾರ್, ಒಮನ್ ಕೊಲ್ಲಿಯಲ್ಲಿರುವ ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖ ಬಂದರಾಗಿದೆ.

ಅಮೆರಿಕದ ದಾಳಿಯಿಂದ ಇರಾನ್‌ನ ಚಬಹಾರ್ ಬಂದರಿಗೆ ಹಾನಿ; ಕುಸಿಯುತ್ತಿರುವ ಕಣ್ಗಾವಲು ಟವರ್; ಫೋಟೋ ಹಂಚಿಕೊಂಡ ಪೀಟ್ ಹೆಗ್ಸೆತ್!
ಕಣ್ಗಾವಲು ಟವರ್
Published On :

ವಾಷಿಂಗ್ಟನ್: ಅಮೆರಿಕ ನಡೆಸಿದ ಹೊಸ ವೈಮಾನಿಕ ದಾಳಿಗಳ ಪರಿಣಾಮವಾಗಿ ಒಮನ್ ಕೊಲ್ಲಿಯಲ್ಲಿರುವ ಇರಾನ್‌ನ ಆಯಕಟ್ಟಿನ ಪ್ರಮುಖ ಬಂದರಾದ ಚಬಹಾರ್‌ಗೆ ಹಾನಿಯಾಗಿದೆ. ದಾಳಿಯ ವೇಳೆ ಕಣ್ಗಾವಲು ಟವರ್ ಕುಸಿಯುತ್ತಿರುವ ದೃಶ್ಯವಿರುವ ಫೋಟೋವೊಂದನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಂಚಿಕೊಂಡಿದ್ದಾರೆ.

ಧೂಳು ಮತ್ತು ದಟ್ಟ ಹೊಗೆಯ ಮೋಡಗಳ ನಡುವೆ ಟವರ್ ಕುಸಿಯುತ್ತಿರುವ ದೃಶ್ಯವು ಆ ಚಿತ್ರದಲ್ಲಿ ಕಂಡುಬಂದಿದ್ದು, ಬಂದರಿನಲ್ಲಿ ಸಂಭವಿಸಿದ ಹಾನಿಯ ಬಗ್ಗೆ ಹೆಚ್ಚಿನ ಗಮನ ಸೆಳೆಯುವಂತಿದೆ. ಅಸೋಸಿಯೇಟೆಡ್ ಪ್ರೆಸ್' ಸುದ್ದಿ ಸಂಸ್ಥೆಯು ಇದು ಚಬಹಾರ್ ಬಂದರಿನ ಚಿತ್ರವೆಂದು ತಿಳಿಸಿದೆ.

ಚಬಹಾರ್ ಬಂದರು ಅಮೆರಿಕದ ಮೂರನೇ ಸುತ್ತಿನ ದಾಳಿಗೆ ಒಳಗಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರಿ ಮಾಧ್ಯಮಗಳು ಈ ಬಂದರಿನ ಮೇಲಿನ ಹೊಸ ದಾಳಿಗಳನ್ನು ದೃಢಪಡಿಸಿದರೂ, ಕಣ್ಗಾವಲು ಗೋಪುರ ಕುಸಿದಿದೆ ಎಂಬ ವರದಿಗಳನ್ನು ತಕ್ಷಣಕ್ಕೆ ಒಪ್ಪಿಕೊಂಡಿಲ್ಲ. ಬಂದರಿನಲ್ಲಿ ಆಗಿರುವ ಹಾನಿಯ ಪ್ರಮಾಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ಇರಾನ್‌ನ ಆಗ್ನೇಯ ಭಾಗದಲ್ಲಿರುವ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಚಬಹಾರ್, ಒಮನ್ ಕೊಲ್ಲಿಯಲ್ಲಿರುವ ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖ ಬಂದರಾಗಿದೆ. ಅಲ್ಲದೆ, ಹಾರ್ಮುಜ್ ಜಲಸಂಧಿಯ ಹೊರಗೆ ದೇಶದ ಪ್ರಮುಖ ಕಡಲ ಪ್ರವೇಶದ್ವಾರಗಳಲ್ಲಿ ಒಂದಾಗಿ ಇದು ಕಾರ್ಯನಿರ್ವಹಿಸುತ್ತದೆ.

ಭಾರತಕ್ಕೆ ಈ ಬಂದರು ದೀರ್ಘಕಾಲದಿಂದಲೂ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ. ಪಾಕಿಸ್ತಾನವನ್ನು ಹೊರಗಿಟ್ಟು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದೊಂದಿಗೆ ಸಂಪರ್ಕವನ್ನು ಸುಧಾರಿಸಲು ಭಾರತವು ಚಬಹಾರ್‌ನ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಿದೆ.

ಚಬಹಾರ್ ಬಂದರು ಅಫ್ಘಾನಿಸ್ತಾನಕ್ಕೆ ನಿರ್ಣಾಯಕ ವ್ಯಾಪಾರ ಕಾರಿಡಾರ್ ಮತ್ತು ಭಾರತದ ಬೆಂಬಲವಿರುವ ಪ್ರಾದೇಶಿಕ ರಾಷ್ಟ್ರಗಳ ನಡುವಿನ ಸಂಪರ್ಕದ ಪ್ರಮುಖ ಆಧಾರಸ್ತಂಭವೆಂದು ಪರಿಗಣಿಸಲಾಗಿದೆ. ಸಂಘರ್ಷಗಳು ಮುಂದುವರಿದರೆ, ಚಬಹಾರ್‌ನ ಮೂಲಸೌಕರ್ಯಕ್ಕೆ ಆಗಿರುವ ಹಾನಿಯು ವಾಣಿಜ್ಯ ನೌಕಾಯಾನ ಮತ್ತು ಪ್ರಾದೇಶಿಕ ವ್ಯಾಪಾರದ ಭವಿಷ್ಯದ ಬಗ್ಗೆ ಕಳವಳವನ್ನು ಉಂಟುಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.