ವಿದೇಶ

Balochistan ನಿಮ್ಮ ನಿಯಂತ್ರಣದಲ್ಲೇ ಇಲ್ಲ; ಧೈರ್ಯವಿದ್ದರೆ Uniform ಬಿಚ್ಚಿಟ್ಟು ಚುನಾವಣೆಗೆ ಬನ್ನಿ: Pak ಸೇನೆಗೆ ಫಜ್ಲೂರ್ ರೆಹಮಾನ್ ಸವಾಲು..!

ನಿಮಗೆ ರಾಜಕೀಯ ಮಾಡಬೇಕೆಂದಿದ್ದರೆ ಮೊದಲು ಯೂನಿಫಾರ್ಮ್ ಬಿಚ್ಚಿ ಬನ್ನಿ. ಚುನಾವಣೆಯಲ್ಲಿ ಸ್ಪರ್ಧಿಸಿ. ಆಗ ಜನರು ಯೂನಿಫಾರ್ಮ್ ಧರಿಸಿದವರಿಗೆ ಎಷ್ಟು ಮತ ಕೊಡುತ್ತಾರೆ ಎಂಬುದು ಗೊತ್ತಾಗುತ್ತದೆ.

Balochistan ನಿಮ್ಮ ನಿಯಂತ್ರಣದಲ್ಲೇ ಇಲ್ಲ; ಧೈರ್ಯವಿದ್ದರೆ Uniform ಬಿಚ್ಚಿಟ್ಟು ಚುನಾವಣೆಗೆ ಬನ್ನಿ: Pak ಸೇನೆಗೆ ಫಜ್ಲೂರ್ ರೆಹಮಾನ್ ಸವಾಲು..!
ಫಜ್ಲೂರ್ ರೆಹಮಾನ್
Published On :

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಭಾವಿ ಧಾರ್ಮಿಕ ಹಾಗೂ ರಾಜಕೀಯ ನಾಯಕ, ಜಮಿಯತ್ ಉಲೇಮಾ-ಇ-ಇಸ್ಲಾಂ (ಫಝಲ್) [JUI-F] ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರು ಪಾಕಿಸ್ತಾನ ಸೇನೆ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ವಿರುದ್ಧ ಬಹಿರಂಗ ಯುದ್ಧ ಸಾರಿದ್ದಾರೆ.

ಸೇನೆ ತನ್ನ ಸಂವಿಧಾನಾತ್ಮಕ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು, ರಾಜಕೀಯ ಮಾಡಬೇಕೆಂದಿದ್ದರೆ ಯೂನಿಫಾರ್ಮ್ ಬಿಚ್ಚಿಟ್ಟು ಚುನಾವಣೆಗೆ ಬರಬೇಕು ಎಂದು ಸವಾಲು ಹಾಕಿದ್ದಾರೆ.

ಪಂಜಾಬ್ ಪ್ರಾಂತ್ಯದ ಖಾಸೂರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಫಜ್ಲುರ್ ರೆಹಮಾನ್, ಪಾಕಿಸ್ತಾನದ ಸೇನೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದರು.

"ನಿಮಗೆ ರಾಜಕೀಯ ಮಾಡಬೇಕೆಂದಿದ್ದರೆ ಮೊದಲು ಯೂನಿಫಾರ್ಮ್ ಬಿಚ್ಚಿ ಬನ್ನಿ. ಚುನಾವಣೆಯಲ್ಲಿ ಸ್ಪರ್ಧಿಸಿ. ಆಗ ಜನರು ಯೂನಿಫಾರ್ಮ್ ಧರಿಸಿದವರಿಗೆ ಎಷ್ಟು ಮತ ಕೊಡುತ್ತಾರೆ ಎಂಬುದು ಗೊತ್ತಾಗುತ್ತದೆ." ಎಂದು ಹೇಳಿದರು.

ಇದೇ ವೇಳೆ ಬಲೂಚಿಸ್ತಾನದ ಭದ್ರತಾ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಬಲೂಚಿಸ್ತಾನದ ಬಹುತೇಕ ಪ್ರದೇಶಗಳು ಈಗ ಪಾಕಿಸ್ತಾನ ಸರ್ಕಾರದ ನಿಯಂತ್ರಣದಲ್ಲೇ ಇಲ್ಲ.

ದೇಶವೇ ಚೂರುಚೂರಾಗುತ್ತಿದೆ. ಆಡಳಿತಗಾರರು ಎಲ್ಲಿದ್ದಾರೆ? ಬಲೂಚ್ ಪ್ರದೇಶಗಳಲ್ಲಿ ಬಂಡಾಯಗಳು ನಡೆದವು. ಇಡೀ ಬಲೂಚಿಸ್ತಾನವೇ ಪಾಕಿಸ್ತಾನದ ನಿಯಂತ್ರಣದಿಂದ ಹೊರ ಹೋಗಿದೆ. ಇಂದಿಗೂ ಅಲ್ಲಿ ಸರ್ಕಾರದ ಆಡಳಿತ ನಡೆಯುತ್ತಿಲ್ಲ," ಎಂದು ತಿಳಿಸಿದರು.

ಇದೇ ಪರಿಸ್ಥಿತಿ ಈಗ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಕ್ಕೂ ವ್ಯಾಪಿಸಿದೆ ಎಂದು ಹೇಳಿದ ಅವರು, "ಕೆಲವೇ ಎರಡು-ಮೂರು ದಿನಗಳಲ್ಲಿ 50ಕ್ಕೂ ಹೆಚ್ಚು ಮೃತದೇಹಗಳು ಬಂದಿವೆ. ಪಶ್ತುನ್ ಪ್ರದೇಶವೂ ಈಗ ರಕ್ತದ ಮಡುವಾಗಿದೆ," ಎಂದು ಆರೋಪಿಸಿದರು.

ಸಾಮಾನ್ಯ ನಾಗರಿಕರನ್ನು ಉಗ್ರರ ವಿರುದ್ಧ ಹೋರಾಡಲು ಸೇನೆ ಕರೆ ನೀಡುತ್ತಿರುವುದನ್ನೂ ಅವರು ತೀವ್ರವಾಗಿ ಟೀಕಿಸಿದರು.

"ದೇಶದ ರಕ್ಷಣೆ ಮಾಡುವುದು ಸೇನೆಯ ಸಂವಿಧಾನಾತ್ಮಕ ಜವಾಬ್ದಾರಿ. ಅದಕ್ಕಾಗಿ ನಿಮ್ಮ ಯೋಧರು ಯೂನಿಫಾರ್ಮ್ ಧರಿಸಿ ವೇತನ ಪಡೆಯುತ್ತಿದ್ದಾರೆ. ನಮ್ಮನ್ನು ಖಾಸಗಿ ಸೇನೆ ರಚಿಸಿ ಹೋರಾಡಿ ಎಂದು ಕೇಳಬೇಡಿ. ನಾನು ಯಾವುದೇ ವೇತನ ಪಡೆಯುವುದಿಲ್ಲ, ನಾನು ಯಾವುದೇ ಸೇನೆಯನ್ನು ಕಟ್ಟುವುದಿಲ್ಲ," ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನದ ಪ್ರತಿಯೊಂದು ಸಂಸ್ಥೆಯೂ ತನ್ನ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು. "ಸಂಸತ್ತಿಗೆ ತನ್ನ ವ್ಯಾಪ್ತಿ ಇದೆ, ಪ್ರತಿಯೊಂದು ಇಲಾಖೆಗೂ ತನ್ನ ಜವಾಬ್ದಾರಿ ಇದೆ. ಹಾಗೆಯೇ ಸೇನೆಗೂ ತನ್ನ ವ್ಯಾಪ್ತಿ ಇದೆ. ಸೇನೆ ತನ್ನ ಜವಾಬ್ದಾರಿಗಳ ಮೇಲೆ ಗಮನ ಹರಿಸಬೇಕು, ರಾಜಕೀಯದ ಮೇಲೆ ಅಲ್ಲ ಎಂದು ಹೇಳಿದರು.

ಇದೇ ವೇಳೆ ಸರ್ಕಾರ ರಚಿಸುವುದು ಮತ್ತು ಕೆಡವುವುದು ಸೇನೆಯ ಕೈಯಲ್ಲಿದೆ ಎಂಬ ಆರೋಪವನ್ನೂ ಫಜ್ಲುರ್ ರೆಹಮಾನ್ ಮಾಡಿದರು.

ಮಗೆ ಸರ್ಕಾರ ರಚಿಸಬೇಕೆಂಬ ಆಸೆ ಇದ್ದರೆ, ಜನರ ಬಳಿಗೆ ಹೋಗಿ ಮತ ಕೇಳಿ. ಚುನಾವಣೆ ಎದುರಿಸಿ ಅಧಿಕಾರಕ್ಕೆ ಬನ್ನಿ. ಪರೋಕ್ಷವಾಗಿ ರಾಜಕೀಯ ನಿಯಂತ್ರಿಸಲು ಪ್ರಯತ್ನಿಸಬೇಡಿ," ಎಂದು ಸವಾಲು ಹಾಕಿದರು.

ಫಜ್ಲುರ್ ರೆಹಮಾನ್ ಅವರ ಈ ಹೇಳಿಕೆಗಳು ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದ ಸೇನಾ ನಾಯಕತ್ವದ ವಿರುದ್ಧ ಪ್ರಮುಖ ರಾಜಕೀಯ ನಾಯಕರಿಂದ ಕೇಳಿಬಂದ ಅತ್ಯಂತ ಕಟುವಾದ ಟೀಕೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.