ವಿದೇಶ

Venezuelaದಲ್ಲಿ ಮರಣ ಮೃದಂಗ: ಅವಳಿ ಭೂಕಂಪಕ್ಕೆ 2,954 ಮಂದಿ ಬಲಿ, ಸಾವಿರಾರು ಕುಟುಂಬಗಳು ಬೀದಿಗೆ..!

ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 2,954ಕ್ಕೆ ಏರಿಕೆಯಾಗಿದ್ದು, 16 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಸಾವಿರಾರು ಜನರು ಇನ್ನೂ ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

Venezuelaದಲ್ಲಿ ಮರಣ ಮೃದಂಗ: ಅವಳಿ ಭೂಕಂಪಕ್ಕೆ 2,954 ಮಂದಿ ಬಲಿ, ಸಾವಿರಾರು ಕುಟುಂಬಗಳು ಬೀದಿಗೆ..!
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು.
Published On :

ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಅವಳಿ ಭೂಕಂಪ ದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಸಾವಿರಾರು ಕುಟುಂಬಗಳು ಆಸ್ತಿ-ಪಾಸ್ತಿ, ಕುಟುಂಬಸ್ಥರನ್ನು ಕಳೆದುಕೊಂಡು ಬೀದಿಗೆ ಬಂದಿವೆ.

ರಕ್ಷಣಾ ಕಾರ್ಯಗಳು ಅಂತಿಮ ಹಂತ ತಲುಪಿದ್ದರೂ, ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.

ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 2,954ಕ್ಕೆ ಏರಿಕೆಯಾಗಿದ್ದು, 16 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಸಾವಿರಾರು ಜನರು ಇನ್ನೂ ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

ಜೂನ್ 24ರಂದು ಸಂಭವಿಸಿದ 7.2 ಹಾಗೂ 7.5 ತೀವ್ರತೆಯ ಅವಳಿ ಭೂಕಂಪಗಳು ವೆನೆಜುವೆಲಾದ ಹಲವು ಭಾಗಗಳಲ್ಲಿ ಭಾರೀ ಹಾನಿ ಉಂಟುಮಾಡಿವೆ.

ವಿಶೇಷವಾಗಿ ರಾಜಧಾನಿ ಕರಾಕಾಸ್‌ನ ಉತ್ತರದಲ್ಲಿರುವ ಕರಾವಳಿ ಪ್ರದೇಶ ಲಾ ಗುವೈರಾ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ಈ ಪ್ರದೇಶದಲ್ಲಿ ನೂರಾರು ಕಟ್ಟಡಗಳು ಕುಸಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಭೂಕಂಪದಿಂದ 190 ಕಟ್ಟಡಗಳು ಸಂಪೂರ್ಣ ಕುಸಿದಿದ್ದು, 16 ಸಾವಿರಕ್ಕೂ ಹೆಚ್ಚು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡಿದ್ದು, ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ವಾಸಿಸುವಂತಾಗಿದೆ.

ಭೂಕಂಪ ಸಂಭವಿಸಿ ಹತ್ತು ದಿನಗಳು ಕಳೆದಿರುವ ಹಿನ್ನೆಲೆಯಲ್ಲಿ, ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ನಡೆಸುತ್ತಿದ್ದ ಶೋಧ ಕಾರ್ಯವನ್ನು ಹಂತಹಂತವಾಗಿ ಅಂತ್ಯಗೊಳಿಸುತ್ತಿವೆ.

ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಈಗ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಮ್ಮ ಆತ್ಮೀಯರಿಗಾಗಿ ಕಾಯುತ್ತಿರುವ ಕುಟುಂಬಗಳ ನೋವು ಇನ್ನೂ ಮುಂದುವರಿದಿದೆ.

ಸಾಮಾನ್ಯವಾಗಿ ಭೂಕಂಪದಂತಹ ಪ್ರಕೃತಿ ವಿಕೋಪಗಳಲ್ಲಿ ಮೊದಲ 72 ಗಂಟೆಗಳ ಅವಧಿಯೇ ಜೀವಂತವಾಗಿ ರಕ್ಷಿಸುವ ಅತ್ಯಂತ ಮಹತ್ವದ ಸಮಯ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಈ ವಾರವೂ ಕೆಲವರು ಅದೃಷ್ಟವಶಾತ್ ಜೀವಂತವಾಗಿ ಪತ್ತೆಯಾಗಿರುವುದು ರಕ್ಷಣಾ ಸಿಬ್ಬಂದಿಗೆ ಆಶಾಕಿರಣ ಮೂಡಿಸಿದೆ.

ಲ್ಯಾಟಿನ್ ಅಮೆರಿಕದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಭೀಕರ ಭೂಕಂಪ ದುರಂತಗಳಲ್ಲಿ ಒಂದಾಗಿ ಈ ಘಟನೆ ದಾಖಲಾಗಿದ್ದು, ವೆನೆಜುವೆಲಾದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳು ಇನ್ನೂ ಮುಂದುವರಿದಿವೆ. ಸರ್ಕಾರ, ಸೇನೆ ಹಾಗೂ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳು ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.