ಆಹ್ವಾನ ಬಂದ್ರೆ...: ಸೌದಿ-ಪಾಕಿಸ್ತಾನ-ಟರ್ಕಿಯ ರಕ್ಷಣಾ ಕೂಟಕ್ಕೆ ಬಾಂಗ್ಲಾದೇಶ ಎಂಟ್ರಿ? ಢಾಕಾ ಹೇಳಿದ್ದೇನು?
ಒಪ್ಪಂದದ ಪ್ರಮುಖ ಅಂಶವೆಂದರೆ, ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ, ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸುವುದು.

ಢಾಕಾ: ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ಸಹಿ ಆಗಿರುವ ‘ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ’ಕ್ಕೆ ಬಾಂಗ್ಲಾದೇಶವೂ ಸೇರುವ ಸಾಧ್ಯತೆ ಇದ್ದು, ಈ ಒಪ್ಪಂದಕ್ಕೆ ಸೇರುವುದರಿಂದ ಇತರ ದೇಶಗಳೊಂದಿಗೆ ಢಾಕಾ ಹೊಂದಿರುವ ಸಂಬಂಧಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಹೇಳಿದೆ.
ಆಗಸ್ಟ್ 7ರಂದು ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ (Makkah Joint Defence Agreement)ಕ್ಕೆ ಸಹಿ ಹಾಕಿದ್ದವು. ಮೂರು ದೇಶಗಳ ನಡುವೆ ಸಾಮೂಹಿಕ ತಡೆ ಸಾಮರ್ಥ್ಯ ಮತ್ತು ರಕ್ಷಣಾ ಸಹಕಾರಕ್ಕೆ ಚೌಕಟ್ಟು ರೂಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.
ಒಪ್ಪಂದದ ಪ್ರಮುಖ ಅಂಶವೆಂದರೆ, ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ, ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸುವುದು.
ಬಾಂಗ್ಲಾ ಎಂಟ್ರಿ
ಇದೀಗ ಈ ಒಪ್ಪಂದಕ್ಕೆ ಬಾಂಗ್ಲಾದೇಶ ಎಂಟ್ರಿಕೊಡುವ ಸಾಧ್ಯತೆ ಇದ್ದು, ಒಪ್ಪಂದಕ್ಕೆ ಸೇರುವ ಕುರಿತು ಬಾಂಗ್ಲಾದೇಶ ಸರ್ಕಾರ ಚರ್ಚೆ ನಡೆಸುತ್ತಿದೆ.
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯುನ್ ಕಬೀರ್ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ, ಮೆಕ್ಕಾ ರಕ್ಷಣಾ ಒಪ್ಪಂದಕ್ಕೆ ಸೇರುವುದರಲ್ಲಿ ಬಾಂಗ್ಲಾದೇಶಕ್ಕೆ ಯಾವುದೇ ಅಪಾಯ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾದ ರಾಯಭಾರಿ ಅಬ್ದುಲ್ಲಾ ಜಾಫರ್ ಬಿನ್ ಅಬಿಯಾಹ್ ಅವರನ್ನು ಭೇಟಿಯಾದ ಬಳಿಕ ವಿದೇಶಾಂಗ ಸಚಿವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಬೀರ್, “ಇದು ವಿಶಿಷ್ಟವಾದ ಒಪ್ಪಂದವಾಗಿದ್ದು, ಹೊಸ ಅವಕಾಶಗಳನ್ನು ಒದಗಿಸುತ್ತದೆ” ಎಂದು ಹೇಳಿದ್ದಾರೆ.
ಇತರ ರಾಷ್ಟ್ರಗಳ ಜೊತೆಗಿನ ಸಂಬಂಧಕ್ಕೆ ಧಕ್ಕೆ ಇಲ್ಲ
ಮೆಕ್ಕಾ ರಕ್ಷಣಾ ಒಪ್ಪಂದಕ್ಕೆ ಬಾಂಗ್ಲಾದೇಶ ಸೇರಿದರೂ, ಇತರ ಪಾಲುದಾರ ರಾಷ್ಟ್ರಗಳೊಂದಿಗೆ ಢಾಕಾ ಹೊಂದಿರುವ ರಾಜತಾಂತ್ರಿಕ ಹಾಗೂ ದ್ವಿಪಕ್ಷೀಯ ಸಂಬಂಧಗಳಿಗೆ ಯಾವುದೇ ನಿರ್ಬಂಧ ಉಂಟಾಗುವುದಿಲ್ಲ ಎಂದು ಕಬೀರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಬಾಂಗ್ಲಾದೇಶ ಈಗಾಗಲೇ ಚರ್ಚೆ ನಡೆಸುತ್ತಿದೆ. “ನಮ್ಮ ಎಲ್ಲ ದ್ವಿಪಕ್ಷೀಯ ಪಾಲುದಾರರೊಂದಿಗೆ ಈ ಚರ್ಚೆಗಳು ಸಕಾರಾತ್ಮಕವಾಗಿ ಮುಂದುವರಿಯುತ್ತಿವೆ” ಎಂದು ಅವರು ಹೇಳಿದ್ದಾರೆ.
‘ಆಹ್ವಾನ ಬಂದರೆ ಸಕಾರಾತ್ಮಕ ಪರಿಗಣನೆ’
ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲೀಲುರ್ ರಹಮಾನ್ ಸಂಸತ್ತಿನಲ್ಲಿ ಮಾತನಾಡುವ ವೇಳೆ, ಮೆಕ್ಕಾ ರಕ್ಷಣಾ ಒಪ್ಪಂದಕ್ಕೆ ಸೇರುವಂತೆ ಆಹ್ವಾನ ಬಂದರೆ ಅದನ್ನು ಬಾಂಗ್ಲಾದೇಶ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಹೇಳಿದ್ದರು.
ಅಲ್ಲದೆ, ಈ ಒಪ್ಪಂದವು “ನಮ್ಮ ಮುಸ್ಲಿಂ ಕುಟುಂಬದ” ಆಂತರಿಕ ವಿಚಾರ ಎಂದು ಬಣ್ಣಿಸಿದ್ದ ಅವರು, ಇತರರು ಈ ವಿಚಾರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದರು.
ಮೆಕ್ಕಾ ರಕ್ಷಣಾ ಒಪ್ಪಂದದ ಮೂಲಕ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ನಡುವೆ ರಕ್ಷಣಾ ಸಹಕಾರ ಮತ್ತಷ್ಟು ಬಲಪಡಿಸುವ ಪ್ರಯತ್ನ ನಡೆಯುತ್ತಿರುವ ಬೆನ್ನಲ್ಲೇ ಬಾಂಗ್ಲಾದೇಶದ ಈ ನಿಲುವು ಮಹತ್ವ ಪಡೆದುಕೊಂಡಿದೆ.
ಬಾಂಗ್ಲಾದೇಶ ಅಧಿಕೃತವಾಗಿ ಒಪ್ಪಂದಕ್ಕೆ ಸೇರುವ ನಿರ್ಧಾರ ಕೈಗೊಂಡಿಲ್ಲವಾದರೂ, ಈ ಕುರಿತು ನಡೆಯುತ್ತಿರುವ ಚರ್ಚೆಗಳು ಸಕಾರಾತ್ಮಕ ಹಂತದಲ್ಲಿವೆ ಎಂಬ ರಾಜ್ಯ ಸಚಿವರ ಹೇಳಿಕೆ ಢಾಕಾದ ಆಸಕ್ತಿಯನ್ನು ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



