ವೆನೆಜುವೆಲಾ ಜತೆ 'ವಿಶ್ವದ ಅತಿದೊಡ್ಡ ತೈಲ ಒಪ್ಪಂದ'; 65 ಬಿಲಿಯನ್ ಬ್ಯಾರೆಲ್ ತೈಲ ನಿಕ್ಷೇಪದ ಮೇಲೆ ಅಮೆರಿಕ ನಿಯಂತ್ರಣ
ಈ ಒಪ್ಪಂದವನ್ನು ವಿಶ್ವ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಎಂದು ಟ್ರಂಪ್ ಬಣ್ಣಿಸಿದ್ದು, ಇದರಿಂದ ವೆನೆಜುವೆಲಾದಲ್ಲಿ ಸುಮಾರು 100 ಬಿಲಿಯನ್ ಡಾಲರ್‌ಗಳಷ್ಟು ಖಾಸಗಿ ಹೂಡಿಕೆ ಬರಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ.

ವಾಷಿಂಗ್ಟನ್: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್‌ಗಳಷ್ಟು ಪೆಟ್ರೋಲಿಯಂ ನಿಕ್ಷೇಪಗಳ ಮೇಲೆ ಅಮೆರಿಕಕ್ಕೆ ಬಹುಪಾಲು ನಿಯಂತ್ರಣ ನೀಡುವ ಬೃಹತ್ ತೈಲ ಒಪ್ಪಂದವನ್ನು ತಮ್ಮ ಆಡಳಿತ ಮಾಡಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಒಪ್ಪಂದವನ್ನು ವಿಶ್ವ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಎಂದು ಟ್ರಂಪ್ ಬಣ್ಣಿಸಿದ್ದು, ಇದರಿಂದ ವೆನೆಜುವೆಲಾದಲ್ಲಿ ಸುಮಾರು 100 ಬಿಲಿಯನ್ ಡಾಲರ್‌ಗಳಷ್ಟು ಖಾಸಗಿ ಹೂಡಿಕೆ ಬರಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ.
ವಿಶ್ವದಲ್ಲೇ ಅತಿ ದೊಡ್ಡ ಸಾಬೀತಾದ ತೈಲ ನಿಕ್ಷೇಪಗಳನ್ನು ವೆನೆಜುವೆಲಾ ಹೊಂದಿದೆ. ಜನವರಿಯಲ್ಲಿ ಅಮೆರಿಕವು ದೀರ್ಘಕಾಲದ ಆಡಳಿತಗಾರ ನಿಕೋಲಸ್ ಮಡುರೊ ಅವರನ್ನು ಪದಚ್ಯುತಗೊಳಿಸಿ ಬಂಧಿಸಿದ ಬಳಿಕ, ವೆನೆಜುವೆಲಾ ಸರ್ಕಾರವು ಟ್ರಂಪ್ ಆಡಳಿತದ ತೀವ್ರ ಒತ್ತಡ ಮತ್ತು ನಿಕಟ ನಿಗಾದಲ್ಲಿದೆ. ಅಮೆರಿಕದ ಸೂಚನೆಗಳನ್ನು ಪಾಲಿಸುವವರೆಗೆ ಮಡುರೊ ಅವರ ಅಂದಿನ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗೆಸ್ ಅವರನ್ನು ಮಧ್ಯಂತರ ನಾಯಕಿಯಾಗಿ ಮುಂದುವರಿಯಲು ಅಮೆರಿಕ ಅವಕಾಶ ನೀಡಿತ್ತು.
ವೆನೆಜುವೆಲಾದ ತೈಲವನ್ನು ಅಮೆರಿಕದ ನಿಯಂತ್ರಣಕ್ಕೆ ತರುವ ತಮ್ಮ ಬಯಕೆಯನ್ನು ಡೊನಾಲ್ಡ್ ಟ್ರಂಪ್ ಎಂದಿಗೂ ಮರೆಮಾಚಿಲ್ಲ. ಒಪ್ಪಂದವನ್ನು ಘೋಷಿಸಿ ತಮ್ಮ ಟ್ರುತ್ ಸೋಷಿಯಲ್ ಖಾತೆಯಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, ಈ ಒಪ್ಪಂದದಿಂದ ಅಮೆರಿಕದ ತೈಲ ನಿಕ್ಷೇಪಗಳು ದುಪ್ಪಟ್ಟಿಗಿಂತಲೂ ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.
ಈ ಒಪ್ಪಂದದ ಕುರಿತು ವೆನೆಜುವೆಲಾ ಸರ್ಕಾರದಿಂದ ತಕ್ಷಣ ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ.
ಖಾಸಗಿ ಉದ್ಯಮಗಳ ಸಹಭಾಗಿತ್ವದ ಮೂಲಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ರೊಡ್ರಿಗೆಸ್ ಅವರೊಂದಿಗೆ ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಈ ವಹಿವಾಟು ವೆನೆಜುವೆಲಾ ಮತ್ತು ಅಮೆರಿಕದ ನಡುವೆ ಈಗಾಗಲೇ ಬೆಳೆಯುತ್ತಿರುವ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಟ್ರಂಪ್ ಬರೆದಿದ್ದಾರೆ.
ಈ ಒಪ್ಪಂದವು ಅಮೆರಿಕಾ ಫಸ್ಟ್ ನೀತಿಯಡಿ ಟ್ರಂಪ್ ಅವರ ಧೈರ್ಯಶಾಲಿ ವಿದೇಶಾಂಗ ನೀತಿಯು ಅಮೆರಿಕಕ್ಕೆ ಯಶಸ್ಸು ತಂದುಕೊಡುತ್ತಿರುವುದನ್ನು ತೋರಿಸುತ್ತದೆ. ನಮ್ಮ ಗೋಳಾರ್ಧದಲ್ಲಿ ಸ್ಥಿರ ತೈಲ ನಿಕ್ಷೇಪ ಮತ್ತು ಕಡಿಮೆ ದರದ ತೈಲವನ್ನು ಖಚಿತಪಡಿಸುವುದರ ಜೊತೆಗೆ, ದೇಶೀಯವಾಗಿ ಇಂಧನ ಬೆಲೆಗಳನ್ನು ಕಡಿಮೆ ಮಾಡಲು ಇದು ನೆರವಾಗಲಿದೆ” ಎಂದು ರುಬಿಯೊ ಹೇಳಿದ್ದಾರೆ.
ವೆನೆಜುವೆಲಾದ ಜನರಿಗೆ ಈ ಒಪ್ಪಂದವು ಸುಮಾರು 100 ಬಿಲಿಯನ್ ಡಾಲರ್‌ಗಳ ಖಾಸಗಿ ಹೂಡಿಕೆ, ಸಾವಿರಾರು ಉತ್ತಮ ವೇತನದ ಉದ್ಯೋಗಗಳು ಹಾಗೂ ವೆನೆಜುವೆಲಾ ಆರ್ಥಿಕತೆಯ ಪುನರ್‌ನಿರ್ಮಾಣಕ್ಕೆ ವೇಗ ನೀಡಲಿದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಎಕ್ಸ್‌ನಲ್ಲಿ ಬರೆದಿದ್ದು, ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಸುದ್ದಿ ತಾಣ ಆಕ್ಸಿಯೋಸ್ ಗುರುವಾರ ವರದಿ ಮಾಡಿರುವ ಪ್ರಕಾರ, ಎರಡೂ ದೇಶಗಳು 12 ಉತ್ಪಾದಕ ತೈಲ ಕ್ಷೇತ್ರಗಳ ಕುರಿತು ಮಾತುಕತೆ ನಡೆಸುತ್ತಿವೆ. ಈ ಕ್ಷೇತ್ರಗಳಲ್ಲಿ 90 ಬಿಲಿಯನ್ ಬ್ಯಾರೆಲ್‌ಗಳಷ್ಟು ಸಾಬೀತಾದ ತೈಲ ನಿಕ್ಷೇಪಗಳಿವೆ. ಇದು ವೆನೆಜುವೆಲಾದ ಒಟ್ಟು 300 ಬಿಲಿಯನ್ ಬ್ಯಾರೆಲ್‌ಗಳ ಸಾಬೀತಾದ ನಿಕ್ಷೇಪಗಳ ಪೈಕಿ ಸುಮಾರು ಮೂರನೇ ಒಂದು ಭಾಗವಾಗಿದೆ ಎಂದು ಇಬ್ಬರು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ ವರದಿ ಮಾಡಿದೆ.
ಅಮೆರಿಕದ ಮಾಲೀಕತ್ವದ ಪಾಲಿಗೆ ಬದಲಾಗಿ, ಅಮೆರಿಕದ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಈ ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಿದ್ದು, ತೈಲದಿಂದ ಬರುವ ಹೆಚ್ಚಿನ ಆದಾಯವನ್ನು ವೆನೆಜುವೆಲಾಕ್ಕೆ ಮರಳಿಸಲಿವೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.
ಅಮೆರಿಕದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು 40 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿರುವ ಸಂದರ್ಭದಲ್ಲಿ ಈ ಒಪ್ಪಂದವು ಅಮೆರಿಕದ ತೈಲ ನಿಕ್ಷೇಪಗಳನ್ನು ದ್ವಿಗುಣಕ್ಕಿಂತಲೂ ಹೆಚ್ಚಿಸಲಿದೆ ಎಂದು ಆಕ್ಸಿಯೋಸ್ ತಿಳಿಸಿದೆ.
ಅಮೆರಿಕನ್ನರಿಗೆ ಪೆಟ್ರೋಲ್ ಬೆಲೆ ಕಡಿಮೆಯಾಗಲಿದೆ ಎಂದು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಿಗೆ ಮುನ್ನ ಅವರ ಜನಪ್ರಿಯತೆ ಕುಸಿಯುತ್ತಿರುವ ಸಂದರ್ಭದಲ್ಲಿ ಇದು ಪ್ರಮುಖ ವಿಷಯವಾಗಿದೆ. ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಜಾಗತಿಕ ತೈಲ ಪೂರೈಕೆಗೆ ಅಡ್ಡಿಯಾಗಿದ್ದು, ಇಂಧನ ಬೆಲೆಗಳ ಮೇಲೂ ಪರಿಣಾಮ ಬೀರಿದೆ.
ವೆನೆಜುವೆಲಾದಲ್ಲಿ ಹೂಡಿಕೆ ಮಾಡುವಂತೆ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದ ಕಂಪನಿಗಳಿಗೆ ಒತ್ತಾಯಿಸುತ್ತಿದೆ. ಆದರೆ, ಹದಗೆಟ್ಟ ಮೂಲಸೌಕರ್ಯ ಹಾಗೂ ವೆನೆಜುವೆಲಾ ಸರ್ಕಾರವು ಈ ಹಿಂದೆ ವಿದೇಶಿ ಹೂಡಿಕೆದಾರರ ಆಸ್ತಿಗಳನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಂಪನಿಗಳು ಇನ್ನೂ ಎಚ್ಚರಿಕೆಯ ನಿಲುವು ಹೊಂದಿವೆ.
ಮಡುರೊ ಪದಚ್ಯುತಗೊಂಡಾಗಲೂ ವೆನೆಜುವೆಲಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಅಮೆರಿಕದ ತೈಲ ಕಂಪನಿಯಾಗಿದ್ದ ಚೆವ್ರಾನ್, ಜುಲೈನಲ್ಲಿ ತನ್ನ ದೈನಂದಿನ ಕಚ್ಚಾ ತೈಲ ಉತ್ಪಾದನೆಯನ್ನು 2.80 ಲಕ್ಷ ಬ್ಯಾರೆಲ್‌ಗಳಿಗೆ ಹೆಚ್ಚಿಸಿರುವುದಾಗಿ ತಿಳಿಸಿತ್ತು. 2028ರ ಅಂತ್ಯದ ವೇಳೆಗೆ ಉತ್ಪಾದನೆಯನ್ನು ಶೇ.50ರಷ್ಟು ಹೆಚ್ಚಿಸುವ ಯೋಜನೆಯೂ ಇದೆ ಎಂದು ಕಂಪನಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




