Nepal Floods: ಭೀಕರ ಪ್ರವಾಹದ ಬಳಿಕ ನೇಪಾಳಕ್ಕೆ ಮತ್ತೊಂದು ಅಪಾಯ; ಎರಡು ಸರೋವರಗಳಲ್ಲಿ ಅಪಾರ ನೀರು!
ಪ್ರವಾಹ ಮತ್ತು ಭೂಕುಸಿತದಿಂದ ಪರ್ವತ ನದಿಗಳ ಹರಿವಿಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ನೇಪಾಳ ಮತ್ತು ಚೀನಾ ಅಧಿಕಾರಿಗಳು ಇದೀಗ ಎರಡು ಹೊಸ ತಡೆ ಸರೋವರಗಳ (Barrier Lakes) ಮೇಲೆ ನಿಗಾ ಇಟ್ಟಿದ್ದಾರೆ.

ಕಠ್ಮಂಡು: ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿರುವ ನೇಪಾಳಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಈ ಬಾರಿ ಒಂದಲ್ಲ ಎರಡು ಸರೋವರಗಳಲ್ಲಿ ಅಪಾರ ಪ್ರಮಾಣ ನೀರು ಶೇಖರಣೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಮತ್ತೊಂದು ಪ್ರವಾಹವಾಗುವ ಭೀತಿ ಎದುರಾಗಿದೆ.
ಹೌದು.. ಪ್ರವಾಹ ಮತ್ತು ಭೂಕುಸಿತದಿಂದ ಪರ್ವತ ನದಿಗಳ ಹರಿವಿಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ನೇಪಾಳ ಮತ್ತು ಚೀನಾ ಅಧಿಕಾರಿಗಳು ಇದೀಗ ಎರಡು ಹೊಸ ತಡೆ ಸರೋವರಗಳ (Barrier Lakes) ಮೇಲೆ ನಿಗಾ ಇಟ್ಟಿದ್ದಾರೆ. ಈ ಸರೋವರಗಳು ಒಡೆದರೆ ಮತ್ತೆ ಭೀಕರ ಪ್ರವಾಹ ಉಂಟಾಗುವ ಆತಂಕ ಎದುರಾಗಿದೆ.
ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭೋಟೆಕೋಶಿ ನದಿಗೆ ಅವಶೇಷಗಳು ಅಡ್ಡಿಯಾಗಿ ರೂಪುಗೊಂಡಿರುವ ಸರೋವರದ ನೀರಿನ ಮಟ್ಟ ನಿರಂತರವಾಗಿ ಏರುತ್ತಿದೆ ಎಂದು ಎಚ್ಚರಿಸಿದೆ. ಈ ಸರೋವರ ಒಡೆದುಹೋಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2ನೇ ಸರೋವರ
ಗಡಿಯ ಮತ್ತೊಂದೆಡೆ ಚೀನಾದಲ್ಲೂ ಮತ್ತೊಂದು ಅಸ್ಥಿರ ತಡೆ ಸರೋವರ ನಿರ್ಮಾಣವಾಗಿದೆ. ಇದರಲ್ಲಿ ಸುಮಾರು 15 ಲಕ್ಷದಿಂದ 20 ಲಕ್ಷ ಘನ ಮೀಟರ್ ನೀರು ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿದೆ. ಚೀನಾದಲ್ಲಿರುವ ಈ ಸರೋವರ ಸುಮಾರು 150 ಮೀಟರ್ ಉದ್ದ ಹಾಗೂ 40ರಿಂದ 50 ಮೀಟರ್ ಆಳ ಹೊಂದಿದೆ.
ಎಂಟು ಸದಸ್ಯರ ಎಂಜಿನಿಯರ್‌ಗಳ ತಂಡವೊಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ನೀರಿನ ಒತ್ತಡ ಕಡಿಮೆ ಮಾಡಲು ಕಾಲುವೆ ನಿರ್ಮಿಸಿ ನೀರನ್ನು ಹೊರಹಾಕಬಹುದೇ ಎಂಬುದನ್ನು ಪರಿಶೀಲಿಸುತ್ತಿದೆ.
ಸೆಪ್ಟೆಂಬರ್ 1ರ ವೇಳೆಗೆ ಮತ್ತಷ್ಟು ನೀರು? ಹಠಾತ್ ಪ್ರವಾಹ ಭೀತಿ
ಚೀನಾದ ಜಲಸಂಪನ್ಮೂಲ ಸಚಿವಾಲಯದ ಅಂದಾಜಿನ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಇನ್ನೂ ಸುಮಾರು 30 ಲಕ್ಷ ಘನ ಮೀಟರ್ ನೀರು ಈಗಾಗಲೇ ತಡೆಗಟ್ಟಲ್ಪಟ್ಟಿರುವ ಸರೋವರಕ್ಕೆ ಹರಿದುಬರಬಹುದು.
ಸೆಪ್ಟೆಂಬರ್ 1ರ ವೇಳೆಗೆ ನೀರಿನ ಒಳಹರಿವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ. ಇದರಿಂದ ಸರೋವರದ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಲಿದ್ದು, ತಡೆಗೋಡೆ ಒಡೆದುಹೋಗುವ ಹಾಗೂ ಕೆಳಭಾಗದಲ್ಲಿ ಮತ್ತೆ ಹಠಾತ್ ಪ್ರವಾಹ ಉಂಟಾಗುವ ಆತಂಕ ಹೆಚ್ಚಾಗಿದೆ.
ನೇಪಾಳದ ವಿಪತ್ತು ನಿರ್ವಹಣಾ ಅಧಿಕಾರಿಗಳು ನದಿಯ ದುರ್ಬಲ ದಂಡೆಗಳು ಹಾಗೂ ಇತರ ಅಪಾಯಕಾರಿ ಪ್ರದೇಶಗಳಿಂದ ದೂರವಿರುವಂತೆ ಸ್ಥಳೀಯರು ಮತ್ತು ರಕ್ಷಣಾ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ನೀರಿನ ಮಟ್ಟ ಮತ್ತು ಅವಶೇಷಗಳಿಂದ ನಿರ್ಮಾಣವಾಗಿರುವ ತಡೆಗಳ ಸ್ಥಿರತೆಯನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದಾರೆ.
ಹವಾಮಾನ ಬದಲಾವಣೆಯ ನೇರ ಕಾರಣ ಇನ್ನೂ ಸಾಬೀತಾಗಿಲ್ಲ
ಈ ಭೂಕುಸಿತ ಅಥವಾ ಪರ್ವತ ಕುಸಿತಕ್ಕೆ ಮಾನವ ಕಾರಣವಾಗಿರುವ ಹವಾಮಾನ ಬದಲಾವಣೆಯೇ ನೇರವಾಗಿ ಕಾರಣವಾಗಿದೆ ಎಂಬುದನ್ನು ವಿಜ್ಞಾನಿಗಳು ಇನ್ನೂ ದೃಢಪಡಿಸಿಲ್ಲ. ಆದರೆ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಉಷ್ಣತೆಯಿಂದ ಅಸ್ಥಿರತೆ ಹೆಚ್ಚುತ್ತಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಹಿಮನದಿಗಳು (Glaciers) ಹಿಂಜರಿಯುವುದು, ಪರ್ಮಾಫ್ರಾಸ್ಟ್ ಕರಗುವುದು ಹಾಗೂ ಹಿಮಕ್ಕೆ ಬಂಧಿತವಾಗಿರುವ ಬಂಡೆಗಳ ಬಲ ಕುಗ್ಗುವುದು ಮುಂತಾದ ಬೆಳವಣಿಗೆಗಳು ಹಠಾತ್ ಭೂಕುಸಿತ ಮತ್ತು ಪರ್ವತ ಕುಸಿತದ ಅಪಾಯವನ್ನು ಹೆಚ್ಚಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




