ವಿದೇಶ

'Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು': ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಈ ಮೂಲಕ ತಮ್ಮ ಕುಟುಂಬಕ್ಕೆ ನೀಡಲಾಗುತ್ತಿರುವ 24 ಗಂಟೆಗಳ ‘ಶಿನ್ ಬೆಟ್’ (Shin Bet) ಭದ್ರತಾ ವೆಚ್ಚವನ್ನು ಸಮರ್ಥಿಸಿಕೊಳ್ಳಲು ನೆತನ್ಯಾಹು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

'Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು': ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ
ಇಸ್ರೇಲ್ ಪ್ರಧಾನಿ ನೆತನ್ಯಾಹು
Published On :

ಜೆರುಸಲೇಂ: ಇರಾನ್‌ ತನ್ನ ಪುತ್ರನೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿತ್ತು ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗಂಭೀರ ಆರೋಪ ಮಾಡಿದ್ದಾರೆ.

ಇಸ್ರೇಲ್‌ನಲ್ಲಿ ಚುನಾವಣಾ ಪ್ರಚಾರದ ನಡುವೆ ರಾಜಕೀಯ ನಾಯಕರ ವಿರುದ್ಧದ ಬೆದರಿಕೆಗಳ ಹಿನ್ನೆಲೆಯಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.

ಸೋಮವಾರ ಪ್ರಸಾರವಾದ ಚಾನೆಲ್‌ 14ರ ಸೇನಾ ವರದಿಗಾರ ನೋಮ್‌ ಅಮೀರ್‌ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ನೆತನ್ಯಾಹು ಈ ಆರೋಪ ಮಾಡಿದ್ದಾರೆ. ಆದರೆ, ಇರಾನ್‌ನ ಗುರಿಯಾಗಿದ್ದವರು ತಮ್ಮ ಪುತ್ರರಾದ ಯೈರ್‌ ಅಥವಾ ಅವ್ನರ್‌ ಅವರಲ್ಲಿ ಯಾರು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಕುಟುಂಬಕ್ಕೆ ನೀಡುತ್ತಿರುವ ಭದ್ರತೆ ಐಷಾರಾಮಿ ಅಲ್ಲ, ಒಂದು ವೇಳೆ ಈ ಭದ್ರತೆ ಇಲ್ಲದಿದ್ದರೆ ಹಂತಕರು ತಮ್ಮ ಸಂಚಿನಲ್ಲಿ ಯಶಸ್ವಿಯಾಗುತ್ತಿದ್ದರು ಎಂದು ಹೇಳಿದ್ದಾರೆ.

ಈ ಮೂಲಕ ತಮ್ಮ ಕುಟುಂಬಕ್ಕೆ ನೀಡಲಾಗುತ್ತಿರುವ 24 ಗಂಟೆಗಳ ‘ಶಿನ್ ಬೆಟ್’ (Shin Bet) ಭದ್ರತಾ ವೆಚ್ಚವನ್ನು ಸಮರ್ಥಿಸಿಕೊಳ್ಳಲು ನೆತನ್ಯಾಹು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಇರಾನ್‌ನಿಂದ ನಡೆದಿರುವ ಎನ್ನಲಾದ ಹತ್ಯೆ ಯತ್ನದ ಮಾಹಿತಿ ಗುಪ್ತಚರ ಮೂಲಗಳಿಂದ ದೊರೆತಿದೆಯೇ ಎಂದು ಅಮೀರ್‌ ಪ್ರಶ್ನಿಸಿದಾಗ, “ಇದು ನಂಬಲಾಗದ ಪ್ರಕರಣ. ಇರಾನ್‌ ನನ್ನ ಪುತ್ರನನ್ನು ಗುರಿಯಾಗಿಸಿತ್ತು. ನನ್ನ ಪುತ್ರನೊಬ್ಬನನ್ನು ಹತ್ಯೆ ಮಾಡಲು ಅದು ಪ್ರಯತ್ನಿಸಿತ್ತು” ಎಂದು ಹೇಳಿದ್ದಾರೆ.

ರಾಜಕೀಯ ನಾಯಕರ ಭದ್ರತೆ ಕುರಿತು ಇಸ್ರೇಲ್‌ ಭದ್ರತಾ ಸಂಸ್ಥೆ ‘ಶಿನ್‌ ಬೆಟ್‌’ ಮುಖ್ಯಸ್ಥ ಡೇವಿಡ್‌ ಝಿನಿ ಅವರೊಂದಿಗೆ ಮಾತನಾಡಿರುವುದಾಗಿ ನೆತನ್ಯಾಹು ತಿಳಿಸಿದ್ದಾರೆ. ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿಗಳೆಲ್ಲರಿಗೂ ಸೂಕ್ತ ಭದ್ರತೆ ಒದಗಿಸುವಂತೆ ತಾವು ಸೂಚಿಸಿರುವುದಾಗಿ ಹೇಳಿದ್ದಾರೆ.

ಜುಲೈನಲ್ಲಿ ನಡೆದ ಸಚಿವ ಸಂಪುಟದ ‘ಶಿನ್‌ ಬೆಟ್‌ ವ್ಯವಹಾರಗಳ ಸಮಿತಿ’ ಸಭೆಯಲ್ಲಿ ನೆತನ್ಯಾಹು ಅವರ ಪತ್ನಿ ಸಾರಾ ಮತ್ತು ಪುತ್ರರಾದ ಯೈರ್‌ ಹಾಗೂ ಅವ್ನರ್‌ಗೆ ವೈಯಕ್ತಿಕ ಭದ್ರತೆಯನ್ನು ವಿಸ್ತರಿಸಲು ಅನುಮೋದನೆ ನೀಡಲಾಗಿತ್ತು.

ಆದರೆ, ಇರಾನ್‌ನ ಹತ್ಯೆ ಯತ್ನದ ವೇಳೆ ಯೈರ್‌ ಅಥವಾ ಅವ್ನರ್‌ ಅವರಲ್ಲಿ ನಿಖರವಾಗಿ ಯಾರು ಗುರಿಯಾಗಿದ್ದರು ಎಂಬುದನ್ನು ನೆತನ್ಯಾಹು ಬಹಿರಂಗಪಡಿಸಿಲ್ಲ.

ಇಸ್ರೇಲ್‌ನಲ್ಲಿ ಭದ್ರತಾ ಆತಂಕ ಮತ್ತು ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ನೆತನ್ಯಾಹು ಅವರ ಈ ಹೇಳಿಕೆ ಹೊರಬಿದ್ದಿದೆ. ಚುನಾವಣಾ ಪ್ರಚಾರದ ಅವಧಿಯಲ್ಲಿ ರಾಜಕೀಯ ನಾಯಕರ ವಿರುದ್ಧದ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.