RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ; ದಲಿತರು, ಮುಸ್ಲಿಮರೇ ಟಾರ್ಗೆಟ್: ತನ್ವೀರ್ ಸೇಠ್ ಗಂಭೀರ ಆರೋಪ
ಆರ್‌ಎಸ್‌ಎಸ್ ನಿರ್ದೇಶನದಂತೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಂಚು ನಡೆಯುತ್ತಿದೆ. ನರಸಿಂಹರಾಜ ಕ್ಷೇತ್ರದಲ್ಲಿ ಈವರೆಗೆ ಸುಮಾರು 10 ಸಾವಿರ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಮೈಸೂರು: ಆರ್‌ಎಸ್‌ಎಸ್ ಕಚೇರಿಯಲ್ಲೇ ಫಾರ್ಮ್-7 ಮುದ್ರಣವಾಗುತ್ತಿದ್ದು, ಅಲ್ಲಿಂದ ಬಿಜೆಪಿಯವರ ಕೈಗೆ ತಲುಪುತ್ತಿದೆ. ದಲಿತರು, ಮುಸ್ಲಿಮರೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾರ್ಮ್-7 ದುರುಪಯೋಗದ ಆರೋಪ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ದಾರೆ.
ಆರ್‌ಎಸ್‌ಎಸ್ ನಿರ್ದೇಶನದಂತೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಂಚು ನಡೆಯುತ್ತಿದೆ. ನರಸಿಂಹರಾಜ ಕ್ಷೇತ್ರದಲ್ಲಿ ಈವರೆಗೆ ಸುಮಾರು 10 ಸಾವಿರ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿದೆ. ಕ್ಷೇತ್ರ ಅಥವಾ ವಾರ್ಡ್‌ಗೆ ಸಂಬಂಧವಿಲ್ಲದವರೇ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿ ಮತಗಟ್ಟೆಯಲ್ಲೂ 100ರಿಂದ 150 ಅರ್ಜಿಗಳನ್ನು ಸಲ್ಲಿಸಲಾಗಿದೆ. ದಲಿತರು ಮತ್ತು ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ. ಚಿಕ್ಕಮಗಳೂರಿನವರನ್ನು ನರಸಿಂಹರಾಜ ಕ್ಷೇತ್ರದ ಮತದಾರರನ್ನಾಗಿ ಸೇರ್ಪಡೆಗೊಳಿಸಿ, ತಮಗೆ ಬೇಕಾದವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಬಿಎಲ್‌ಎ-1 ಸೇರಿದಂತೆ ಕೆಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಾಂಗ್ರೆಸ್ ಬಿಎಲ್‌ಎ ಗೌತಮ್ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಬಿಎಲ್‌ಎ-1 ಶ್ರೀನಿವಾಸ ಮೋತ್ಕರ್ ಅವರು 7,561 ಮತದಾರರ ಹೆಸರುಗಳನ್ನು ಪರಿಷ್ಕರಣೆಗಾಗಿ ನೀಡಿದ್ದರು ಎಂದು ಆರೋಪಿಸಲಾಗಿದೆ.
ಈ ಪೈಕಿ ಅಲ್ಪಸಂಖ್ಯಾತರು ಹಾಗೂ ಕಾಂಗ್ರೆಸ್ ಬೆಂಬಲಿಗರಾಗಿರುವ ಮತದಾರರ ಹೆಸರುಗಳನ್ನೇ ಪಟ್ಟಿ ಮಾಡಲಾಗಿದೆ ಎಂದು ಕಾಂಗ್ರೆಸ್ ದೂರಿದೆ. ಈ ಸಂಬಂಧ ನಿನ್ನೆ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರು ನೀಡಿದರೂ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಠಾಣೆಗೆ ಭೇಟಿ ನೀಡಿ ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿದ್ದು, ಅಂತಿಮವಾಗಿ ಎಫ್‌ಐಆರ್ ದಾಖಲಿಸಲಾಗಿದೆ.
ಇದೇ ವೇಳೆ 2,598 ಮತದಾರರ ಹೆಸರುಗಳನ್ನು ಅಳಿಸುವಂತೆ ಚುನಾವಣಾಧಿಕಾರಿಗೆ ಪತ್ರ ಬರೆದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಕಾಂಗ್ರೆಸ್ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ 2,598 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಶಾಸಕ ಅಭಯ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಕಲಿ ದಾಖಲೆಗಳ ಬಳಕೆ ಹಾಗೂ ಫಾರ್ಮ್-7 ದುರುಪಯೋಗದ ಆರೋಪಗಳನ್ನು ಮಾಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



