Hormuz ಮೇಲೆ ಅಮೆರಿಕಾ ಕಣ್ಣು: NEW US Territory' ಎಂದು ಮತ್ತೆ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ಕೆಂಡಾಮಂಡಲ..!
ಆಗಸ್ಟ್ 18ರಂದು ಇದೇ ಚಿತ್ರವನ್ನು ಟ್ರಂಪ್ ಮೊದಲ ಬಾರಿಗೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಆಗಸ್ಟ್ 14ರಂದು ಲಾಂಗ್ ಐಲ್ಯಾಂಡ್‌ನ ಪೊಲೀಸ್ ಅಕಾಡೆಮಿಯಲ್ಲಿ ಮಾತನಾಡಿದ್ದ ಟ್ರಂಪ್, “ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಪ್ರದೇಶವೆಂದು ಘೋಷಿಸಲಿದ್ದೇನೆ” ಎಂದು ಹೇಳಿದ್ದರು.

ವಾಷಿಂಗ್ಟನ್; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹಾರ್ಮುಜ್ ಜಲಸಂಧಿಯನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಸಂದೇಶ ನೀಡಿದ್ದಾರೆ.
ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಹಾರ್ಮುಜ್ ಜಲಸಂಧಿಯನ್ನು ‘NEW US Territory’ (ಅಮೆರಿಕದ ಹೊಸ ಭೂಭಾಗ) ಎಂದು ಬಿಂಬಿಸುವ ನಕ್ಷೆಯನ್ನು ಮರುಪೋಸ್ಟ್ ಮಾಡುವ ಮೂಲಕ ಟ್ರಂಪ್, ಅಮೆರಿಕ-ಇರಾನ್ ನಡುವಿನ ಈಗಾಗಲೇ ಬಿಗಡಾಯಿಸಿರುವ ಸಂಘರ್ಷಕ್ಕೆ ಮತ್ತಷ್ಟು ಕಿಡಿ ಹೊತ್ತಿಸಿದ್ದಾರೆ.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಇರಾನ್, ಹಾರ್ಮುಜ್ ಮೇಲೆ ಅಮೆರಿಕದ ಯಾವುದೇ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿದೆ. ಅಮೆರಿಕ ತನ್ನ ನಿಲುವು ಬದಲಿಸದ ಹೊರತು ಹಾರ್ಮುಜ್ ಜಲಸಂಧಿ ಮುಚ್ಚಿರಲಿದೆ ಎಂದು ಸ್ಪಷ್ಟಪಡಿಸಿದೆ.
ಆಗಸ್ಟ್ 18ರಂದು ಇದೇ ಚಿತ್ರವನ್ನು ಟ್ರಂಪ್ ಮೊದಲ ಬಾರಿಗೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಆಗಸ್ಟ್ 14ರಂದು ಲಾಂಗ್ ಐಲ್ಯಾಂಡ್‌ನ ಪೊಲೀಸ್ ಅಕಾಡೆಮಿಯಲ್ಲಿ ಮಾತನಾಡಿದ್ದ ಟ್ರಂಪ್, “ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಪ್ರದೇಶವೆಂದು ಘೋಷಿಸಲಿದ್ದೇನೆ” ಎಂದು ಹೇಳಿದ್ದರು.
ಟ್ರಂಪ್ ಹೇಳಿಕೆಗೆ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ತೀವ್ರವಾಗಿ ತಿರುಗೇಟು ನೀಡಿದ್ದರು.
ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಅಮೆರಿಕಕ್ಕಿರುವ ಅಸಮರ್ಥತೆ ಮತ್ತು ಅದನ್ನು ತನ್ನದೆಂದು ಹೇಳಿಕೊಳ್ಳುವ ಹಕ್ಕಿನ ನಡುವಿನ ಅಂತರ, ವಾಷಿಂಗ್ಟನ್‌ನಿಂದ ಹಾರ್ಮುಜ್‌ವರೆಗಿನ 7,000 ಮೈಲಿ ದೂರಕ್ಕಿಂತಲೂ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, “ಪರ್ಷಿಯನ್ ಕೊಲ್ಲಿಯ ಅಮೆರಿಕೋತ್ತರ ವ್ಯವಸ್ಥೆಗೆ ಸ್ವಾಗತ ಎಂದಿದ್ದರು.
ಟ್ರಂಪ್ ಅವರ ಇತ್ತೀಚಿನ ಪೋಸ್ಟ್ ಬೆನ್ನಲ್ಲೇ ವಾಷಿಂಗ್ಟನ್ ಇರಾನ್ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಲು ಸಿದ್ಧತೆ ನಡೆಸಿದೆ. ಇದರಿಂದ ಉಭಯ ದೇಶಗಳ ನಡುವಿನ ಆರ್ಥಿಕ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ.
ಪ್ರಸ್ತಾವಿತ ನಿರ್ಬಂಧಗಳನ್ನು ಇರಾನ್ ಖಂಡಿಸಿದ್ದು, ಅವು ತನ್ನ ಆರ್ಥಿಕತೆಯ ಮೇಲೆ ಮತ್ತಷ್ಟು ಒತ್ತಡ ಉಂಟುಮಾಡಲಿವೆ ಎಂದು ಎಚ್ಚರಿಸಿದೆ.
ವಿಶೇಷವಾಗಿ ಇರಾನ್‌ನ ಪ್ರಮುಖ ತೈಲ ಖರೀದಿದಾರ ರಾಷ್ಟ್ರವಾಗಿರುವ ಚೀನಾದ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ.
ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಇರಾನ್ ವಿರುದ್ಧ “ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧಗಳು” ಎಂದು ವಿವರಿಸಿರುವ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇರಾನ್‌ನ ತೈಲ ರಫ್ತಿನ ವಿಚಾರದಲ್ಲಿ ವಾಷಿಂಗ್ಟನ್‌ನೊಂದಿಗೆ ಸಹಕರಿಸುವಂತೆ ಅವರು ಚೀನಾವನ್ನೂ ಒತ್ತಾಯಿಸಿದ್ದಾರೆ.
ಅಮೆರಿಕದ ಒತ್ತಡ ತಿರಸ್ಕರಿಸಿದ ಇರಾನ್
ಈ ನಡುವೆ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಅವರು, ಹೊಸ ನಿರ್ಬಂಧಗಳನ್ನು ಅಮೆರಿಕದ ಅಧಿಕಾರವನ್ನು ತನ್ನ ಗಡಿಗಳಾಚೆಗೂ ಹೇರಲು ನಡೆಸುತ್ತಿರುವ ಪ್ರಯತ್ನ ಎಂದು ಟೀಕಿಸಿದ್ದಾರೆ.
“ಇಂತಹ ದ್ವಿತೀಯ ನಿರ್ಬಂಧಗಳಿಗೆ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ” ಎಂದು ಬಘಾಯಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ, ಮೊಹ್ಸೆನ್ ರೆಜಾಯಿ, ಅಮೆರಿಕದ ಆರ್ಥಿಕ ಅಭಿಯಾನಕ್ಕೆ ಬೆಂಬಲ ನೀಡದಂತೆ ನೆರೆಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.
“ಯಾವುದೇ ನೆರೆಯ ರಾಷ್ಟ್ರಗಳು ಅಮೆರಿಕದ ಆರ್ಥಿಕ ಯುದ್ಧಕ್ಕೆ ಸೇರ್ಪಡೆಯಾಗಬಾರದು. ಹಾಗೆ ಮಾಡಿದರೆ ಅವರನ್ನು ಶತ್ರುಗಳೆಂದು ಪರಿಗಣಿಸುತ್ತೇವೆ” ಎಂದು ಹೇಳಿದ್ದಾರೆ.
ಸಂಘರ್ಷದ ಕೇಂದ್ರಬಿಂದುವಾದ ಹಾರ್ಮುಜ್
ಅಮೆರಿಕ-ಇರಾನ್ ಸಂಘರ್ಷದಲ್ಲಿ ಹಾರ್ಮುಜ್ ಜಲಸಂಧಿ ಪ್ರಮುಖ ಕೇಂದ್ರಬಿಂದುವಾಗಿದೆ. ಜಲಮಾರ್ಗವನ್ನು ಮುಚ್ಚಿರುವುದಾಗಿ ಇರಾನ್ ಹೇಳಿದ್ದು, ಅನುಮತಿಯಿಲ್ಲದೆ ಸಂಚರಿಸುವ ತೈಲ ಟ್ಯಾಂಕರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಇದರಿಂದ ಜಾಗತಿಕ ಇಂಧನ ಸಾಗಣೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಕೆಲವೇ ಸರಕು ಹಡಗುಗಳು ಜಲಸಂಧಿಯನ್ನು ದಾಟಿದ್ದು, ಪ್ರಮುಖ ಕಚ್ಚಾ ತೈಲ ಸಾಗಣೆ ಹಡಗುಗಳು ಹಾಗೂ ಎಲ್‌ಎನ್‌ಜಿ ಟ್ಯಾಂಕರ್‌ಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.
ಆದರೆಸ ಬಾಗ್ದಾದ್‌ನ ಮನವಿಯ ಹಿನ್ನೆಲೆಯಲ್ಲಿ ಕೆಲವು ಇರಾಕ್ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಮೂಲಕ ಸಂಚರಿಸಲು ಇರಾನ್ ಅವಕಾಶ ನೀಡಿದೆ.
ತೈಲ ಸಾಗಣೆ ಮೇಲೆ ಭಾರಿ ಹೊಡೆತ
ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಪ್ರಕಾರ, ಏಳು ದಿನಗಳ ಅವಧಿಯಲ್ಲಿ ಅಮೆರಿಕ ಸೇನೆಯ ನೆರವಿನಿಂದ ಪ್ರತಿದಿನ ಸರಾಸರಿ 80 ಲಕ್ಷ ಬ್ಯಾರೆಲ್ ತೈಲ ಹಾರ್ಮುಜ್ ಜಲಸಂಧಿ ಮೂಲಕ ಸಾಗಿಸಲಾಗಿದೆ.
ಯುದ್ಧಕ್ಕೂ ಮುನ್ನ ಈ ಜಲಮಾರ್ಗದ ಮೂಲಕ ಪ್ರತಿದಿನ 2 ಕೋಟಿಗೂ ಅಧಿಕ ಬ್ಯಾರೆಲ್ ತೈಲ ಸಾಗಣೆಯಾಗುತ್ತಿತ್ತು. ಹೀಗಾಗಿ ಪ್ರಸ್ತುತ ಬಿಕ್ಕಟ್ಟು ಜಾಗತಿಕ ಇಂಧನ ಪೂರೈಕೆಯ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಸ್ಪಷ್ಟವಾಗುತ್ತದೆ.
ಇರಾನ್‌ನ ಸೇನಾ ಮೂಲಸೌಕರ್ಯಕ್ಕೆ ಭಾರಿ ಹಾನಿಯಾಗಿದ್ದರೂ, ಟ್ಯಾಂಕರ್‌ಗಳ ಸಂಚಾರಕ್ಕೆ ಅಡ್ಡಿಪಡಿಸುವ ಸಾಮರ್ಥ್ಯವನ್ನು ಇರಾನ್ ಇನ್ನೂ ಹೊಂದಿದೆ. ವಿಶೇಷವಾಗಿ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯಗಳು ಅಮೆರಿಕ ಹಾಗೂ ಇತರ ರಾಷ್ಟ್ರಗಳಿಗೆ ಪ್ರಮುಖ ಕಳವಳವಾಗಿ ಉಳಿದಿವೆ.
ಟ್ರಂಪ್-ಇರಾನ್ ನಡುವೆ ಮುಂದುವರಿದ ಬಿಕ್ಕಟ್ಟು
ಇರಾನ್‌ಗೆ “ಯಾವುದೇ ರೀತಿಯ ಜೀವನಾಡಿ” ಒದಗಿಸದಂತೆ ಟ್ರಂಪ್ ಹಲವು ಬಾರಿ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಾಷಿಂಗ್ಟನ್ ಸೂಕ್ತವೆಂದು ಪರಿಗಣಿಸುವ ಒಪ್ಪಂದಕ್ಕೆ ಟೆಹ್ರಾನ್ ಒಪ್ಪಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಇರಾನ್ ತನ್ನ ನಿಲುವಿನಲ್ಲಿ ಪಟ್ಟು ಹಿಡಿದಿದ್ದರೂ ರಾಜತಾಂತ್ರಿಕ ಮಾತುಕತೆಗೆ ಅವಕಾಶವಿದೆ ಎಂಬ ಸಂದೇಶವನ್ನೂ ನೀಡಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸಂಘರ್ಷ ಅಂತ್ಯಗೊಳಿಸಲು ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದ್ದು, ದೇಶದ ಶಕ್ತಿ ಮತ್ತು ಗೌರವವನ್ನು ಉಳಿಸಿಕೊಂಡೇ ಯುದ್ಧಕ್ಕೆ ಅಂತ್ಯ ಹಾಡುವ ಪ್ರಯತ್ನ ನಡೆಸಬೇಕು ಎಂದು ಹೇಳಿದ್ದಾರೆ.
ಇದೀಗ ಟ್ರಂಪ್ ಮತ್ತೊಮ್ಮೆ ಹಾರ್ಮುಜ್ ಜಲಸಂಧಿಯನ್ನು ‘ಅಮೆರಿಕದ ಹೊಸ ಭೂಭಾಗ’ ಎಂದು ಬಣ್ಣಿಸಿರುವುದು ಹಾಗೂ ಅಮೆರಿಕ ತನ್ನ ನಿಲುವು ಬದಲಿಸದ ಹೊರತು ಜಲಮಾರ್ಗ ತೆರೆಯುವುದಿಲ್ಲ ಎಂದು ಇರಾನ್ ಹೇಳಿರುವುದು, ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದ ಪ್ರಮುಖ ಕೇಂದ್ರವಾಗಿ ಹಾರ್ಮುಜ್ ಮುಂದುವರಿದಿರುವುದನ್ನು ತೋರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



