ಇರಾನ್ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ: ಲೆಬನಾನ್ ಹೊರಗಿಟ್ಟ ಬೆಂಜಮಿನ್ ನೆತನ್ಯಾಹು; ಇಸ್ರೇಲ್ ದ್ವಂದ್ವ ನಿಲುವು..!
ಇರಾನ್ ತನ್ನ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಗಳನ್ನು ನಿಲ್ಲಿಸಬೇಕು ಹಾಗೂ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಬೇಕು ಎಂಬ ಷರತ್ತಿನ ಮೇಲೆ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದೆ.

ಇರಾನ್ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ ವ್ಯಕ್ತಪಡಿಸಿರುವ ಇಸ್ರೇಲ್, ಒಪ್ಪಂದದ ವ್ಯಾಪ್ತಿಯಿಂದ ಲೆಬನಾನ್'ನ್ನು ಹೊರಗಿಟ್ಟಿದ್ದು, ಈ ಮೂಲಕ ದ್ವಂದ್ವ ನಿಲುವನ್ನು ತೋರಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಇಸ್ರೇಲ್ ಬೆಂಬಲ ಸೂಚಿಸಿದರೂ, ಈ ವಿರಾಮ ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದಿಲ್ಲ ಎಂಬ ಸಂದೇಶವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿದ್ದಾರೆ.
ಈ ಕದನ ವಿರಾಮವು ಕೇವಲ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದ್ದು, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ವಿರುದ್ಧದ ಇಸ್ರೇಲ್‌ನ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ಇರಾನ್ ತನ್ನ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಗಳನ್ನು ನಿಲ್ಲಿಸಬೇಕು ಹಾಗೂ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಬೇಕು ಎಂಬ ಷರತ್ತಿನ ಮೇಲೆ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದೆ.
ಇರಾನ್ ಮತ್ತು ಅಮೆರಿಕಾ ನಡುವೆ 2 ವಾರಗಳ ಕದನ ವಿರಾಮ ಏರ್ಪಟ್ಟಿದ್ದು, ಹಾರ್ಮುಜ್ ಕಣಿವೆಯಲ್ಲಿನ ಭದ್ರತೆ, ತೈಲ ಸಾಗಣೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಬಿದ್ದಿದ್ದ ಒತ್ತಡವನ್ನು ಕಡಿಮೆ ಮಾಡಲು ಇದು ಪ್ರಮುಖ ಹೆಜ್ಜೆಯಾಗಿದೆ. ಆದರೆ ಇಸ್ರೇಲ್ ತೆಗೆದುಕೊಂಡಿರುವ ದ್ವಂದ್ವ ನಿಲುವು ಈ ಶಾಂತಿ ಪ್ರಯತ್ನಗಳಿಗೆ ಸವಾಲು ಎಸೆಯುವಂತಾಗಿದೆ.
ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ವಿರುದ್ಧ ಇಸ್ರೇಲ್ ಈಗಾಗಲೇ ಸೈನಿಕ ಕಾರ್ಯಾಚರಣೆಗಳನ್ನು ಮುಂದುವರೆಸುತ್ತಿದ್ದು, ಈ ಪ್ರದೇಶದಲ್ಲಿ ದಾಳಿಗಳನ್ನು ನಿಲ್ಲಿಸುವ ಯಾವುದೇ ಉದ್ದೇಶ ಇಲ್ಲ ಇಸ್ರೇಲ್ ಸ್ಪಷ್ಟಪಡಿಸಿದೆ. ಇದರಿಂದ ಇರಾನ್ ವಿರುದ್ಧದ ನೇರ ಯುದ್ಧ ತಾತ್ಕಾಲಿಕವಾಗಿ ನಿಲ್ಲಿದರೂ, ಪರೋಕ್ಷ ಯುದ್ಧಗಳು ಇನ್ನೂ ಮುಂದುವರಿಯಲಿವೆ ಎಂಬ ಆತಂಕ ಹೆಚ್ಚಾಗಿದೆ.
ಈ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರೆಯುವ ಸಾಧ್ಯತೆಗಳು ಕಂಡು ಬರುತ್ತಿವೆ. ಒಂದು ಕಡೆ ಇರಾನ್-ಅಮೆರಿಕಾ ನಡುವೆ ಕದನ ವಿರಾಮ ಜಾರಿಯಾಗುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್-ಲೆಬನಾನ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇದು ಯಾವ ಕ್ಷಣದಲ್ಲಾದರೂ ದೊಡ್ಡ ಮಟ್ಟದ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.
ಈ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕಾ ನಡುವೆ ಮಾತುಕತೆಗಳು ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಶಾಂತಿ ಸಾಧಿಸುವ ಪ್ರಯತ್ನಗಳು ನಡೆಯಲಿವೆ. ಜೊತೆಗೆ ವಿಶ್ವಸಂಸ್ಥೆಯ ಪಾತ್ರವೂ ಮಹತ್ವ ಪಡೆದುಕೊಂಡಿದ್ದು, ಸಂಘರ್ಷ ಕಡಿಮೆ ಮಾಡಲು ರಾಜತಾಂತ್ರಿಕ ಒತ್ತಡ ಹೆಚ್ಚುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



