ವಿದೇಶ

ಯುದ್ಧದಿಂದ ಹಿಂದೆ ಸರಿದ ಅಮೆರಿಕಾ-ಇರಾನ್: ಪಾಕ್ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ; ಹಾರ್ಮುಜ್ ಮಾರ್ಗ ಮತ್ತೆ ರೀಓಪನ್..!

ಒಪ್ಪಂದಂತೆ ಉಭಯ ರಾಷ್ಟ್ರಗಳು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಮುಂದಿನ ಶಾಂತಿ ಮಾತುಕತೆಗಳಿಗೆ ಅವಕಾಶ ಸೃಷ್ಟಿಸಲು ಒಪ್ಪಿಕೊಂಡಿವೆ.

ಯುದ್ಧದಿಂದ ಹಿಂದೆ ಸರಿದ ಅಮೆರಿಕಾ-ಇರಾನ್: ಪಾಕ್ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ; ಹಾರ್ಮುಜ್ ಮಾರ್ಗ ಮತ್ತೆ ರೀಓಪನ್..!
ಸಂಗ್ರಹ ಚಿತ್ರ
Published On :

ಇರಾನ್ ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಬಹು ದೊಡ್ಡ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ.

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ 2 ವಾರಗಳ ಕಾಲ ಕದನ ವಿರಾಮ ಒಪ್ಪಂದವಾಗಿದೆ.

ಒಪ್ಪಂದಂತೆ ಉಭಯ ರಾಷ್ಟ್ರಗಳು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಮುಂದಿನ ಶಾಂತಿ ಮಾತುಕತೆಗಳಿಗೆ ಅವಕಾಶ ಸೃಷ್ಟಿಸಲು ಒಪ್ಪಿಕೊಂಡಿವೆ.

ಒಪ್ಪಂದದಲ್ಲಿ ಪ್ರಮುಖ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ.

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆ ಮಾರ್ಗಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಈ ಮಾರ್ಗ ಬಂದ್ ಆಗಿದ್ದರಿಂದ ಜಾಗತಿಕ ತೈಲ ಬೆಲೆಗಳು ಹೆಚ್ಚಾಗಿದ್ದವು. ಜಲಸಂಧಿಯ ಪುನರ್ ತೆರವಿನಿಂದ ಜಾಗತಿಕ ಸರಬರಾಜು ಸುಧಾರಿಸಲಿದೆ,

ಈ ಕದನ ವಿರಾಮ ಒಪ್ಪಂದವು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾಪ್ರಮುಖ ಫೀಲ್ಡ್ ಮ್ಯಾಷಲ್ ಅಸೀಂ ಮುನೀರ್ ಮಧ್ಯಸ್ಥಿಕೆಯಲ್ಲಿ ನಡೆದಿದೆ. ಇಸ್ರೇಲ್ ಸಹ ಸೇನಾ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಮ್ಮತಿಸಿದೆ.

ಶಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರ ಮನವಿಯ ನಂತರ ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ನಿಲ್ಲಿಸಲು ಅಮೆರಿಕ ನಿರ್ಧರಿಸಿದೆ. ಪಾಕಿಸ್ತಾನವು ಎರಡೂ ದೇಶಗಳ ನಡುವಿನ ಮಾತುಕತೆಗೆ ದಾರಿ ಮಾಡಿಕೊಟ್ಟಿದೆ ಎಂದು ಇರಾನ್ ಸಹ ದೃಢಪಡಿಸಿದೆ.

ಎರಡೂ ದೇಶಗಳ ನಡುವಿನ ಔಪಚಾರಿಕ ಮಾತುಕತೆಗಳು ಏಪ್ರಿಲ್ 10 ರಂದು ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಲಿವೆ ಎಂದು ತಿಳಿದುಬಂದಿದೆ.

ಈ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಾಮಾಜಿಕ ಜಾಲಾತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಅಮೆರಿಕ ಮತ್ತು ಇರಾನ್ ತಮ್ಮ ಮಿತ್ರರಾಷ್ಟ್ರಗಳೊಂದಿಗೆ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದಾರೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ತಮ್ಮ ಮಿತ್ರರಾಷ್ಟ್ರಗಳೊಂದಿಗೆ, ಲೆಬನಾನ್ ಮತ್ತು ಇತರೆಡೆ ಸೇರಿದಂತೆ ಎಲ್ಲೆಡೆ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅತ್ಯಂತ ನಮ್ರತೆಯಿಂದ ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸಲು ನಿರ್ಣಾಯಕ ಒಪ್ಪಂದವನ್ನು ತಲುಪುವ ಗುರಿಯನ್ನು ಎರಡೂ ರಾಷ್ಟ್ರಗಳು ಹೊಂದಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಏಪ್ರಿಲ್ 10 ರಂದು ಎರಡೂ ದೇಶಗಳ ನಿಯೋಗಗಳನ್ನು ಇಸ್ಲಾಮಾಬಾದ್‌ಗೆ ಆಹ್ವಾನಿಸಿದೆ ಎಂದು ಪಾಕ್​ ಪ್ರಧಾನಿ ಷರೀಫ್ ಹೇಳಿದ್ದಾರೆ. ಪ್ರಸ್ತಾವಿತ ಇಸ್ಲಾಮಾಬಾದ್ ಮಾತುಕತೆ ಈ ಪ್ರದೇಶದಲ್ಲಿ ಸುಸ್ಥಿರ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಆಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.