ರಷ್ಯಾ ಆಂತರಿಕ ದಂಗೆ: ವ್ಯಾಗ್ನರ್ ಮುಖ್ಯಸ್ಥನ ಬಂಧನಕ್ಕೆ ಆದೇಶ; ಇಷ್ಟಕ್ಕೂ ಪುಟಿನ್ ಪರಮಾಪ್ತ ಪ್ರಿಗೊಜಿನ್ ಬಂಡಾಯವೆದ್ದಿದ್ದೇಕೆ?
ರಷ್ಯಾ ದೇಶದ ಸೇನೆಯ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ ನಂತರ ಪ್ರಬಲ ಸೇನಾ ಪಡೆಯ ವ್ಯಾಗ್ನರ್‌ನ ಮುಖ್ಯಸ್ಥನನ್ನು ಬಂಧಿಸಲು ರಷ್ಯಾ ಆದೇಶಿಸಿದೆ. ಇಷ್ಟಕ್ಕೂ ಪ್ರಿಗೊಜಿನ್ ಬಂಡಾಯವೆದ್ದಿದ್ದೇಕೆ ಎಂಬ ಪ್ರಶ್ನೆ ಮೂಡುತ್ತಿದೆ.

ಮಾಸ್ಕೋ: ರಷ್ಯಾ ದೇಶದ ಸೇನೆಯ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ ನಂತರ ಪ್ರಬಲ ಸೇನಾ ಪಡೆಯ ವ್ಯಾಗ್ನರ್‌ನ ಮುಖ್ಯಸ್ಥನನ್ನು ಬಂಧಿಸಲು ರಷ್ಯಾ ಆದೇಶಿಸಿದೆ. ಇಷ್ಟಕ್ಕೂ ಪ್ರಿಗೊಜಿನ್ ಬಂಡಾಯವೆದ್ದಿದ್ದೇಕೆ ಎಂಬ ಪ್ರಶ್ನೆ ಮೂಡುತ್ತಿದೆ.
ಹೌದು.. ಉಕ್ರೇನ್ ವಿರುದ್ಧ ದೀರ್ಘ ಕಾಲದಿಂದ ಯುದ್ಧ ನಡೆಸುತ್ತಿರುವ ರಷ್ಯಾಕ್ಕೀಗ (Russia) ದೇಶದ ಒಳಗೇ ದಂಗೆಯ ಬಿಸಿ ತಟ್ಟತೊಡಗಿದೆ. ರಷ್ಯಾದ ವ್ಯಾಗ್ನರ್ ಗುಂಪಿನ (ಅರೆಸೇನಾ ಮಾದರಿಯಲ್ಲಿ ಸೇನೆಯ ಪರವಾಗಿ ಕಾರ್ಯನಿರ್ವಹಿಸುವ ಖಾಸಗಿ ಮಿಲಿಟರಿ ಕಂಪನಿ) ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಕ್ಷಣಾ ಸಚಿವಾಲಯದ ವಿರುದ್ಧ ಬಂಡಾಯವೆದ್ದಿದ್ದಾರೆ.
ರಷ್ಟಾದ ಪ್ರಬಲ ಖಾಸಗಿ ಸೇನೆ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಪುಟಿನ್ ನಾಯಕತ್ವವನ್ನು ಉರುಳಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮಾಸ್ಕೋ ಮೇಯರ್ ಮಾಹಿತಿಯ ಆಧಾರದ ಮೇಲೆ ಭಯೋತ್ಪಾದನಾ ವಿರೋಧಿ ಕಾರ್ಯಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಘೋಷಿಸಲಾಗಿದೆ. ದಕ್ಷಿಣ ರಷ್ಯಾದಲ್ಲಿರುವ ರೋಸ್ಟೊವ್ ಮತ್ತು ಲಿಪೆಟ್ಸ್ಕ್ ಕೂಡ ಭದ್ರತೆಯನ್ನು ಬಲಪಡಿಸಿದ್ದಾರೆ. ರೋಸ್ಟೊವ್‌ನಲ್ಲಿ, ಅಧಿಕಾರಿಗಳು ತಮ್ಮ ಮನೆಗಳನ್ನು ತೊರೆಯದಂತೆ ಎಲ್ಲಾ ನಿವಾಸಿಗಳಿಗೆ ಸೂಚಿಸಿದ್ದಾರೆ.
"ಮಾಸ್ಕೋದಲ್ಲಿ ಒಳಬರುವ ಮಾಹಿತಿಗೆ ಸಂಬಂಧಿಸಿದಂತೆ, ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ರಷ್ಯಾ ವಿರುದ್ಧ ಬಹಿರಂಗ ಟೀಕೆ
ರಷ್ಯಾದ ರಕ್ಷಣಾ ನಾಯಕತ್ವದ ಸಾಮರ್ಥ್ಯವನ್ನು ಬಹಿರಂಗವಾಗಿ ಪ್ರಶ್ನಿಸಿರುವ ಮತ್ತು ಟೀಕಿಸಿರುವ ಖಾಸಗಿ ಸೇನೆ ವ್ಯಾಗ್ನರ್ ನ ಮುಖ್ಯಸ್ಥ ಪ್ರಿಗೊಜಿನ್, ರಷ್ಯಾದ ರಕ್ಷಣಾ ಸಚಿವರ ಆದೇಶದ ಮೇರೆಗೆ ತಮ್ಮ ತಮ್ಮ ಸೈನಿಕರ ಬೆಂಗಾವಲು ವಾಹನದ ಮೇಲೆ ಯುದ್ಧ ವಿಮಾನಗಳಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ದೇಶದಲ್ಲಿ ಸೇನಾ ನಾಯಕತ್ವವನ್ನು ಪತನಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ತಮ್ಮ ಪಡೆಗಳು ಎಲ್ಲವನ್ನೂ ನಾಶಗೊಳಿಸಲಿವೆ ಎಂದು ಅವರು ಘೋಷಿಸಿದ್ದಾರೆ.
ವ್ಯಾಗ್ನರ್ ಮುಖ್ಯಸ್ಥನ ಬಂಧನಕ್ಕೆ ಆದೇಶ
ಇದರ ಬೆನ್ನಲ್ಲೇ, ರಷ್ಯಾದ ರಕ್ಷಣಾ ಸಚಿವಾಲಯವು ಪ್ರಿಗೋಜಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಸಶಸ್ತ್ರ ದಂಗೆಗಾಗಿ ಪ್ರಿಗೋಜಿನ್ 20 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಸಚಿವಾಲಯವು ವ್ಯಾಗ್ನರ್ ಗುಂಪಿನ ಮುಖ್ಯಸ್ಥನ ಮೇಲೆ ಸಶಸ್ತ್ರ ದಂಗೆಯ ಆರೋಪ ಹೊರಿಸಿದೆ. ಇಷ್ಟೇ ಅಲ್ಲದೆ, ಪ್ರಿಗೋಜಿನ್ ಆದೇಶಗಳನ್ನು ಪಾಲಿಸದಂತೆ ವ್ಯಾಗ್ನರ್ ಗುಂಪಿನ ಪಡೆಗಳಿಗೆ ಮನವಿ ಮಾಡಿದೆ.
ಇದನ್ನೂ ಓದಿ: ಫುಟಿನ್ ಹತ್ಯೆಗೆ ಉಕ್ರೇನ್ ಯತ್ನ: ರಷ್ಯಾ ಆರೋಪ
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಮಧ್ಯೆ, ರಷ್ಯಾದ ಸೇನಾ ಪ್ರಧಾನ ಕಚೇರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಡಾನ್‌ನಲ್ಲಿರುವ ರಷ್ಯಾದ ಮಿಲಿಟರಿ ಪ್ರಧಾನ ಕಛೇರಿ ರೊಸ್ಟೊವ್‌ನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಕಚೇರಿಯ ಸುತ್ತಲೂ ಶಸ್ತ್ರಸಜ್ಜಿತ ವಾಹನಗಳು ಮತ್ತು ಶಸ್ತ್ರಸಜ್ಜಿತ ಸೈನಿಕರನ್ನು ನಿಯೋಜಿಸಲಾಗಿದೆ.
ಪ್ರಿಗೊಜಿನ್ ಬಂಡಾಯವೆದ್ದಿದ್ದೇಕೆ?
ವ್ಯಾಗ್ನರ್ ಗುಂಪು ಈ ಹಿಂದಿನಿಂದಲೂ ರಷ್ಯಾ ಪರವಾಗಿ ಉಕ್ರೇನ್ ಸೇರಿದಂತೆ ಹಲವು ದೇಶಗಳಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿದೆ. ಆದರೆ ಹಲವು ವಿಚಾರಗಳಲ್ಲಿ ವ್ಯಾಗ್ನರ್ ಗುಂಪು ರಷ್ಯಾ ಸೇನೆ ವಿರುದ್ಧ ಅಸಮಾಧಾನ ಗೊಂಡಿತ್ತು. ಈ ಹಿಂದೆಯೂ ಸಹ, ತಮ್ಮ ಸೈನಿಕರಿಗೆ ಸಾಕಷ್ಟು ಶಸ್ತ್ರಾಸ್ತ್ರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಪ್ರಿಗೊಜಿನ್ ಹಲವಾರು ಬಾರಿ ಆರೋಪಿಸಿದ್ದರು. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ರಷ್ಯಾದ ಮಿಲಿಟರಿ ಜನರಲ್‌ಗಳೊಂದಿಗೆ ವ್ಯಾಗ್ನರ್ ಗುಂಪನ್ನು ನಾಶಮಾಡಲು ಬಯಸುತ್ತಾರೆ ಎಂದು ಪ್ರಿಗೊಜಿನ್ ಹೇಳಿದ್ದಾರೆ.
ಪ್ರಿಗೊಜಿನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತರೂ ಆಗಿದ್ದು, ರಷ್ಯಾ ರಕ್ಷಣಾ ಸಚಿವಾಲಯದೊಂದಿಗಿನ ಗೊಂದಲ ಮತ್ತು ಅಸಮಾಧಾನ ಪುಟಿನ್ ಮತ್ತು ಪ್ರಿಗೋಜಿನ್ ನಡುವೆ ಅಂತರ ಏರ್ಪಡುವಂತೆ ಮಾಡಿದೆ. ಇದೇ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಗೋಜಿನ್, 'ನಾವು ಮುಂದೆ ಸಾಗುತ್ತಿದ್ದೇವೆ ಮತ್ತು ಕೊನೆಯವರೆಗೂ ಹೋರಾಡುತ್ತೇವೆ. ನಮ್ಮ ಹಾದಿಗೆ ಅಡ್ಡಬರುವ ಯಾರನ್ನಾದರೂ ನಾಶಪಡಿಸುತ್ತೇವೆ ಎಂದು ಪ್ರಿಗೊಜಿನ್ ಹೇಳಿರುವುದು ರಷ್ಯಾದ ಆಂತರಿಕ ಬಂಡಾಯದ ತೀವ್ರತೆಯನ್ನು ಬಹಿರಂಗಪಡಿಸಿದೆ.
ಈ ನಡೆಯು ರಾಜಕೀಯವಾಗಿ ಪ್ರಿಗೋಜಿನ್‌ನ ಅಂತ್ಯಕ್ಕೆ ಕಾರಣವಾಗಬಹುದು ಎಂದು ರಷ್ಯಾ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಇದು ರಷ್ಯಾದಲ್ಲಿ ಅಂತರ್ಯುದ್ಧಕ್ಕೆ ಕಾರಣವಾಗಬಹುದು ಎಂದು ಕೆಲವರು ಭಾವಿಸಿದ್ದಾರೆ. ಏಕೆಂದರೆ ಪ್ರಿಗೋಜಿನ್ ಅವರ ಬೆಂಬಲಿಗರು ರಷ್ಯಾದಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಅವರು ಹೆಚ್ಚು ತೊಂದರೆಗಳನ್ನು ಎದುರಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


