ಪಾಕ್ ಪುಲ್ವಾಮ ದಾಳಿಕೋರರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದೆ: ಅಮೆರಿಕ
ಪುಲ್ವಾಮ ದಾಳಿಕೋರರೂ ಸೇರಿದಂತೆ ಪಾಕಿಸ್ತಾನದಲ್ಲಿರುವ ಎಲ್ಲ ಉಗ್ರರ ವಿರುದ್ಧವೂ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದೆ ಎಂದು ಅಮೆರಿಕ ಹೇಳಿದೆ.

Published On :
ವಾಷಿಂಗ್ಟನ್: ಪುಲ್ವಾಮ ದಾಳಿಕೋರರೂ ಸೇರಿದಂತೆ ಪಾಕಿಸ್ತಾನದಲ್ಲಿರುವ ಎಲ್ಲ ಉಗ್ರರ ವಿರುದ್ಧವೂ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದೆ ಎಂದು ಅಮೆರಿಕ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು, 'ಎಲ್ಲ ಉಗ್ರರ ವಿರುದ್ಧ ಕಠಿಣವಾಗಿ ನಡೆದುಕೊಳ್ಳಲಾಗುತ್ತದೆ ಹಾಗೂ ಭಾರತದೊಂದಿಗಿನ ಆತಂಕದ ವಾತಾವರಣ ಶಮನಗೊಳಿಸಲು ಸೂಕ್ತ ಕ್ರಮವಹಿಸಲಾಗುತ್ತದೆ ಎಂದು ಪಾಕಿಸ್ತಾನ ಭರವಸೆ ನೀಡಿದೆ ಎಂದು ಹೇಳಿದ್ದಾರೆ.
'ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಶಿ ಅವರೊಂದಿಗೆ ಮಾತನಾಡಿದ್ದು, ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಜೈಷ್ ಎ ಮೊಹಮ್ಮದ್ ಹಾಗೂ ಇತರೆ ಉಗ್ರ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರಸ್ತಾಪಿಸಿದ್ದೇನೆ. ಎಲ್ಲ ಉಗ್ರರ ವಿರುದ್ಧ ದೃಢವಾದ ಕ್ರಮ ತೆಗೆದುಕೊಳ್ಳುವುದಾಗಿ ವಿದೇಶಾಂಗ ಸಚಿವ ಭರವಸೆ ನೀಡಿದ್ದಾರೆ. ಭಾರತದೊಂದಿಗಿನ ಆತಂಕದ ವಾತಾವರಣ ಶಮಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ' ಎಂದಿರುವುದಾಗಿ ಬೋಲ್ಟನ್ ಹೇಳಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅಮೆರಿಕ ಭೇಟಿಯಲ್ಲಿರುವ ಸಂದರ್ಭದಲ್ಲಿಯೇ ಬೋಲ್ಟನ್ ಖುರೇಷಿ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಂತೆಯೇ ವಿಜಯ್ ಗೋಖಲೆ ಅಮೆರಿಕ ಪ್ರವಾಸದ ಮೊದಲ ದಿನ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರನ್ನೂ ಭೇಟಿ ಮಾಡಿ ಚರ್ಚಿಸಿದ್ದಾರೆ.
ಪಾಕಿಸ್ತಾನದ ಮೇಲೆ ಅಮೆರಿಕ ಒತ್ತಡ ಹೇರುವುದನ್ನು ಮುಂದುವರಿಸಲಿದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ಹೇಳಿದ್ದು, ಪಾಕಿಸ್ತಾನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಹಾಗೂ ಪುಲ್ವಾಮಾ ದಾಳಿಗೆ ಕಾರಣರಾದವರನ್ನು ಹೊರತರುವ ಪ್ರಾಮುಖ್ಯತೆಯನ್ನು ವಿಜಯ್ ಗೋಖಲೆ ಮತ್ತು ಪಾಂಪಿಯೊ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಉಪ ವಕ್ತಾರ ರಾಬರ್ಟ್ ಪಲಾಡಿನೊ ಹೇಳಿದ್ದಾರೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಮತ್ತು ಜನರೊಂದಿಗೆ ಅಮೆರಿಕ ನಿಲ್ಲುತ್ತದೆ ಎಂದು ಪಾಂಪಿಯೊ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತPakistanಪಾಕಿಸ್ತಾನUSಅಮೆರಿಕWashingtonವಾಷಿಂಗ್ಟನ್Pulwama Terror Attackಪುಲ್ವಾಮ ಉಗ್ರ ದಾಳಿImran Khan Govtಇಮ್ರಾನ್ ಖಾನ್ ಸರ್ಕಾರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


