ಸಿರಿಯಾ ಮೇಲೆ ವೈಮಾನಿಕ ದಾಳಿ: 'ಗುರಿ ಸಾಧಿಸಿದ್ದೇವೆ' ಎಂದು ಟ್ವೀಟ್ ಮಾಡಿದ ಟ್ರಂಪ್
ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ಅವರು ಅಮಾಯಕರ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ್ದಕ್ಕೆ....

Published On :
ವಾಷಿಂಗ್ಟನ್: ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ಅವರು ಅಮಾಯಕರ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ್ದಕ್ಕೆ ಪ್ರತೀಕಾರವಾಗಿ ಸಿರಿಯಾ ಮೇಲೆ ವೈಮಾನಿಕ ದಾಳಿಗೆ ಆದೇಶಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಗುರಿ ಸಾಧಿಸಿರುವುದಾಗಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಕಳೆದ ರಾತ್ರಿ ಸಿರಿಯಾ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗಿದೆ. ಇದಕ್ಕೆ ಸಹಕರಿಸಿದ ಹಾಗೂ ಅತ್ಯುತ್ತಮ ಸೇನೆ ಹೊಂದಿರುವ ಫ್ರಾನ್ಸ್ ಮತ್ತು ಬ್ರಿಟನ್ ಗೆ ಧನ್ಯವಾದಗಳು. ನಾವು ಗುರಿ ಸಾಧಿಸಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಸಿರಿಯಾದಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲೆ ದಾಳಿ ನಡೆಸಲು ಆದೇಶಿಸಿರುವುದಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಯುದ್ಧ ವಿಮಾನಗಳು ಸಿರಿಯಾ ರಾಜಧಾನಿ ಡಮಾಸ್ಕಸ್ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ದಾಳಿ ನಡೆಸಿದ್ದವು.
ಸಿರಿಯಾದ ಸರ್ವಾಧಿಕಾರಿ ಅಸ್ಸಾದ್ ಗೆ ಸೇರಿದ ರಾಸಾಯನಿಕ ಶಸ್ತ್ರಾಸ್ತ್ರ ಸಂಗ್ರಹ ಮತ್ತು ತಯಾರಿಕಾ ಘಟಕಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ. ಈ ಮೂಲಕ ರಾಸಾಯನಿಕ ಶಸ್ತ್ರಾಸ್ತ್ರ ಉತ್ಪಾದನೆ, ಹರಡುವಿಕೆ ಮತ್ತು ಬಳಕೆಯನ್ನು ತಡೆಯುವ ಉದ್ದೇಶ ಹೊಂದಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಪಡೆಗಳು ಒಟ್ಟಾಗಿ ನೆಲ ಮತ್ತು ಸಾಗರದಿಂದ 100ಕ್ಕೂ ಅಧಿಕ ಕ್ರೂಯಿಸ್ ಕ್ಷಿಪಣಿಗಳನ್ನು ಸಿರಿಯಾದ ಮಿಲಿಟರಿ ಮತ್ತು ನಾಗರಿಕ ನೆಲೆಗಳ ಮೇಲೆ ಉಡಾಯಿಸಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಿಯಾ ನೊವೊಸ್ತಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಕ್ಷಿಪಣಿಗಳ ಪೈಕಿ ಹೆಚ್ಚಿನವುಗಳನ್ನೂ ಸಿರಿಯಾ ವೈಮಾನಿಕ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದೂ ಸುದ್ದಿಸಂಸ್ಥೆ ತಿಳಿಸಿದೆ.
ಕಳೆದ ಏಪ್ರಿಲ್ 7ರಂದು ಸಿರಿಯಾ ಅಧ್ಯಕ್ಷ ಅಸಾದ್ ರಾಸಾಯನಿಕ ದಾಳಿ ಪ್ರಯೋಗಿಸಿದ್ದರು. ಇದರಿಂದಾಗಿ ಮಕ್ಕಳೂ ಸೇರಿದಂತೆ 60 ಅಮಾಯಕರು ಮೃತಪಟ್ಟಿದ್ದರು. ಸಿರಿಯಾ ಸರ್ಕಾರದ ಪೈಶಾಚಿಕ ಕೃತ್ಯವನ್ನು ಅಮೆರಿಕ ತೀವ್ರವಾಗಿ ಖಂಡಿಸಿತ್ತು.
ಇದೇ ವೇಳೆ ರಷ್ಯಾ ಮತ್ತು ಇರಾನ್ ರಾಷ್ಟ್ರಗಳ ಮೈತ್ರಿ ಬಗ್ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಶಾಂತಿ ಮತ್ತು ಸ್ಥಿರತೆ ಕಾಪಾಡಲು ರಷ್ಯಾ ನಾಗರಿಕ ರಾಷ್ಟ್ರಗಳೊಂದಿಗೆ ಕೈ ಜೋಡಿಸುತ್ತದೆಯೋ ಅಥವಾ ಶತ್ರು ರಾಷ್ಟ್ರಗಳೊಂದಿಗೆ ಕೈ ಜೋಡಿಸುತ್ತದೆಯೋ ಶೀಘ್ರ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


