ವಿದೇಶ

ಇರಾಕ್ ನಲ್ಲಿ ಇಸಿಸ್ ಉಗ್ರರ ಹುಟ್ಟಡಗಿಸಿದ ಸೇನಾಪಡೆಗಳು, ಸೋಲೊಪ್ಪಿಕೊಂಡ ಶ್ರೀಮಂತ ಉಗ್ರ ಸಂಘಟನೆ

ಇಸ್ಲಾಮಿಕ್ ಸ್ಟೇಟ್ ಉಗ್ರ ಕಪಿ ಮುಷ್ಠಿಯಿಂದ ಪಾರಾಗುವಲ್ಲಿ ಇರಾಕ್ ದೇಶ ಅಂತಿಮವಾಗಿ ಬಹುತೇಕ ಸಫಲವಾಗಿದ್ದು, ಯುದ್ಧ ಪೀಡಿತ ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಕೊನೆಗೂ ತನ್ನ ಸೋಲು ಒಪ್ಪಿಕೊಂಡಿದೆ.

ಇರಾಕ್ ನಲ್ಲಿ ಇಸಿಸ್ ಉಗ್ರರ ಹುಟ್ಟಡಗಿಸಿದ ಸೇನಾಪಡೆಗಳು, ಸೋಲೊಪ್ಪಿಕೊಂಡ ಶ್ರೀಮಂತ ಉಗ್ರ ಸಂಘಟನೆ
ಸಂಗ್ರಹ ಚಿತ್ರ
Published On :

ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಉಗ್ರ ಕಪಿ ಮುಷ್ಠಿಯಿಂದ ಪಾರಾಗುವಲ್ಲಿ ಇರಾಕ್ ದೇಶ ಅಂತಿಮವಾಗಿ ಬಹುತೇಕ ಸಫಲವಾಗಿದ್ದು, ಯುದ್ಧ ಪೀಡಿತ ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಕೊನೆಗೂ ತನ್ನ ಸೋಲು ಒಪ್ಪಿಕೊಂಡಿದೆ.

ಇರಾಕ್ ನ ಬಹುತೇಕ ಭಾಗಗಳನ್ನು ಆಕ್ರಮಿಸಿಕೊಂಡಿದ್ದ ಇಸಿಸ್ ಉಗ್ರರು, ಇದೀಗ ನಿಧಾನವಾಗಿ ಅಲ್ಲಿಂದ ಕಾಲ್ಕೀಳುತ್ತಿದ್ದಾರೆ. ಉಗ್ರರ ವಿರುದ್ಧ ಹೋರಾಟದಲ್ಲಿ ಆರಂಭಿಕ ಹಿನ್ನಡೆಯನುಭವಿಸಿದ್ದ ಅಮೆರಿಕ ನೇತೃತ್ವದ ಮೈತ್ರೀಕೂಟ  ಇದೀಗ ಇರಾಕ್ ಅನ್ನು ತನ್ನ ವಶಕ್ಕೆ ಪಡೆಯುತ್ತಿದೆ. ಇಸ್ಲಾಮಿಕ್ ಉಗ್ರ ಸಂಘಟನೆಯ ಕೇಂದ್ರ ಸ್ಥಾನವಾಗಿದ್ದ ಮೊಸುಲ್ ನಗರದಿಂದಲೇ ಉಗ್ರರು ಕಾಲ್ಕೀಳುತ್ತಿದ್ದು, ಉಗ್ರ ಸಂಘಟನೆಯ ಸೋಲನ್ನು ಬಿಂಬಿಸುತ್ತಿದೆ. ಇನ್ನು ಮೊಸೂಲ್  ಆ ನಗರವೀಗ ಸಂಪೂರ್ಣವಾಗಿ ಸೇನಾಪಡೆಗಳ ತೆಕ್ಕೆಗೆ ಬಂದಿದೆ. ಈ ನಗರದಲ್ಲಿ ಸೇನೆ ಮುನ್ನಡೆ ಸಾಧಿಸುತ್ತಿದ್ದಂತೆ ಸಂಘಟನೆಯ ಕೆಲ ಕಮಾಂಡರ್​'ಗಳು ಪಲಾಯನಗೈಯುತ್ತಿದ್ದು, ಮತ್ತೆ ಕೆಲವರು ಸುರಂಗಗಳು ಮತ್ತು ಬಂಕರ್  ಗಳಲ್ಲಿ ಅಡಗಿಕೊಂಡಿದ್ದಾರೆ. ಇರಾಕ್ ಪ್ರಧಾನಿ ಹೈದರ್ ಅಲಿ ಅಬಾದಿ ಮೂರು ತಿಂಗಳೊಳಗಾಗಿ ದೇಶದಿಂದ ಐಸಿಸ್ ನಿಮೂಲನೆ ಮಾಡುವುದಾಗಿ ಕಳೆದ ಜನವರಿಯಲ್ಲಿ ಆಶ್ವಾಸನೆ ನೀಡಿದ್ದರು.

ಇದಕ್ಕೆ ಇಂಬು ನೀಡುವಂತೆ ಬ್ರಿಟನ್ ರಕ್ಷಣಾ ಸಚಿವ ಮೈಕಲ್ ಫಾಲೋನ್ ಕೂಡ ಕೆಲ ದಿನಗಳ ಹಿಂದಷ್ಟೇ ಮಾಧ್ಯಮಗಳೊಂದಿಗೆ ಮಾತನಾಡುತ್ತ, "2017ರ ಅಂತ್ಯದೊಳಗಾಗಿ ಐಸಿಸ್ ಇರಾಕ್'​ನ ಪ್ರಮುಖ ನಗರಗಳಿಂದ  ಕಾಲುಕೀಳಲಿದೆ" ಎಂದಿದ್ದರು. ಇದೇ ಬುಧವಾರ ಅಮೆರಿಕನ್ ಕಾಂಗ್ರೆಸ್​ನ್ನು ಉದ್ದೇಶಿಸಿ ಮೊದಲ ಭಾಷಣ ಮಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ-"ಐಸಿಸ್​ನ್ನು ಅಂತ್ಯಗೊಳಿಸಲು ನಾವು ಸಿದ್ಧರಾಗಿದ್ದೇವೆ" ಎಂದಿದ್ದರು.

ಸಿರಿಯಾಗೆ ಉಗ್ರ ಪಲಾಯನ, ಸಿರಿಯಾಕ್ಕೆ ಇನ್ನೂ ತಪ್ಪಿಲ್ಲ ಭೀತಿ
ಇನ್ನು ಸೇನಾಪಡೆಗಳ ಪ್ರಬಲ ದಾಳಿಯಿಂದಾಗಿ ಹಿಮ್ಮೆಟ್ಟಿರುವ ಇಸಿಸ್ ಉಗ್ರರು, ಸಿರಿಯಾದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸಿರಿಯಾ ಸೋಲಿನ ಬೆನ್ನಲ್ಲೇ ಸಂಘಟನೆ ಮುಖ್ಯಸ್ಥ ಬಾಗ್ದಾದಿ ಭಾಷಣದ  ಬಳಿಕ ಉಗ್ರರೆಲ್ಲರೂ ರಣರಂಗದಿಂದ ಕಾಲ್ಕೀಳುತ್ತಿದ್ದು, ಬೆಟ್ಟಗುಡ್ಡಗಳನ್ನು ಆಶ್ರಯಿಸಿದ್ದಾರೆ. ಇನ್ನೂ ಹಲವು ಉಗ್ರರು ಸಿರಿಯಾದತ್ತ ಪಯಣ ಬೆಳೆಸಿರುವುದರಿಂದ ಆ ದೇಶದಲ್ಲಿನ ಆತಂಕ ಹೆಚ್ಚಾಗುವಂತೆ ಮಾಡಿದೆ. ಇರಾಕ್ ನಲ್ಲಿ  ಇಸಿಸ್ ತನ್ನ ಪ್ರಾಬಲ್ಯ ಕಳೆದುಕೊಂಡಿರಬಹುದು. ಆದರೆ ಸಿರಿಯಾದಲ್ಲಿ ಹಿಂಸೆ ಇನ್ನೂ ಮುಂದವರೆಯಲಿದ್ದು, ಪ್ರಸ್ತುತ ಇರಾಕ್ ನಿಂದ ಪಲಾಯನಗೈಯ್ಯುತ್ತಿರುವ ಉಗ್ರರು ಸಿರಿಯಾದಲ್ಲಿ ಆಶ್ರ. ಪಡೆಯುತ್ತಿದ್ದಾರೆ. ಸ್ಥಳೀಯ  ಬಂಡುಕೋರರು ಇಸಿಸ್ ಉಗ್ರರಿಗೆ ಆಶ್ರಯ ನೀಡುತ್ತಿದ್ದು, ಸಿರಿಯಾ ಸರ್ಕಾರಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಸಿರಿಯಾದಲ್ಲಿ ಈಗಾಗಲೇ ಉಗ್ರರ ಅಡಗುದಾಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಉಗ್ರರು  ಸಿರಿಯಾ ದಾರಿ ಹಿಡಿದಿದ್ದಾರೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.