ವಿದೇಶ

ಕಾಶ್ಮೀರ ವಿವಾದದಲ್ಲಿ ರಚನಾತ್ಮಕ ಪಾತ್ರ ವಹಿಸಲು ಸಿದ್ಧ ಎಂದ ಚೀನಾ

ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾನು ರಚನಾತ್ಮಕ ಪಾತ್ರ ನಿರ್ವಹಿಸಲು ಸಿದ್ಧ ಎಂದು ಚೀನಾ ಹೇಳಿದೆ.

ಕಾಶ್ಮೀರ ವಿವಾದದಲ್ಲಿ ರಚನಾತ್ಮಕ ಪಾತ್ರ ವಹಿಸಲು ಸಿದ್ಧ ಎಂದ ಚೀನಾ
ಸಂಗ್ರಹ ಚಿತ್ರ
Published On :

ಬೀಜಿಂಗ್: ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾನು ರಚನಾತ್ಮಕ ಪಾತ್ರ ನಿರ್ವಹಿಸಲು ಸಿದ್ಧ ಎಂದು ಚೀನಾ ಹೇಳಿದೆ.

ಚೀನಾದ ವಿದೇಶ ವ್ಯವಹಾರಗಳ ಇಲಾಖೆಯ ವಕ್ತಾರ ಜೆಂಗ್ ಶುವಾಂಗ್ ಈ ಬಗ್ಗೆ ಮಾತನಾಡಿದ್ದು, ಕಾಶ್ಮೀರದ ಪ್ರಸಕ್ತ ಪರಿಸ್ಥಿತಿ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ  ಸುಧಾರಣೆಯಲ್ಲಿ ಕಾಶ್ಮೀರ ವಿವಾದ ಪ್ರಮುಖವಾಗಿದ್ದು, ಈ ಬಗ್ಗೆ ಚೀನಾ ರಚನಾತ್ಮ ಪಾತ್ರ ವಹಿಸಲು ಸಿದ್ಧ ಎಂದು ಹೇಳಿದ್ದಾರೆ.

ಬೀಜಿಂಗ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಂಗ್ ಶುವಾಂಗ್, ಭಾರತ-ಪಾಕಿಸ್ತಾನಗಳು ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರಗಳಾಗಿದ್ದು, ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಸಂಬಂಧ ಪದೇ ಪದೇ  ಹಾಳಾಗುತ್ತಿದೆ ಎಂದು ಹೇಳಿದ್ದಾರೆ. ಅಂತೆಯೇ ಭಾರತ-ಪಾಕ್ ನಡುವಿನ ಉದ್ವೇಗದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕಾಶ್ಮೀರದ ಗಡಿನಿಯಂತ್ರಣಾ ರೇಖೆಯ ಬಳಿ ತಿಕ್ಕಾಟ ಉಂಟಾಗಿದೆ. ಇದರಿಂದ ಉಭಯ  ರಾಷ್ಟ್ರಗಳ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ಒದಗಿರುವುದರ ಜೊತೆಗೆ ಇಡೀ ಪ್ರದೇಶದ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಉಭಯ ರಾಷ್ಟ್ರಗಳು ಉದ್ವಿಗ್ನತೆ ಹೆಚ್ಚುವ ಯಾವುದೇ ಕಾರ್ಯಕ್ಕೆ ಮುಂದಾಗದೆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಅನುಕೂಲವಾಗುವ ಕಾರ್ಯಕ್ಕೆ ಮುಂದಾಗಬೇಕು. ಉಭಯ ದೇಶಗಳ ನಡುವಿನ ಸಂಬಂಧ  ಸುಧಾರಿಸುವ ನಿಟ್ಟಿನಲ್ಲಿ ರಚನಾತ್ಮಕ ಪಾತ್ರ ವಹಿಸಲು ಚೀನಾ ಸಿದ್ಧವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್, "ಪಾಕಿಸ್ತಾನದ ಕೋರಿಕೆಯಂತೆ ಮೂರನೇ ರಾಷ್ಟ್ರದ ಸೇನೆ ಕಾಶ್ಮೀರವನ್ನು ಪ್ರವೇಶಿಸಬಹುದು ಎಂದು ವಿವಾದಾತ್ಮ ಲೇಖನ ಪ್ರಕಟಿಸಿತ್ತು. ಇದಕ್ಕೆ ತಿರುಗೇಟು  ನೀಡಿದ್ದ ಭಾರತ ಕಾಶ್ಮೀರ ಸಮಸ್ಯೆ ದ್ವಿಪಕ್ಷೀಯ ವಿಷಯವಾಗಿದ್ದು, ಇದರಲ್ಲಿ ಮೂರನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂದು ಖಾರವಾಗಿ ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.