ವಿದೇಶ

ಡೋಕ್ಲಾಮ್ ಗಡಿಯಲ್ಲಿ ಚೀನಾ-ಭಾರತೀಯ ಸೇನಾ ಸಂಘರ್ಷ ಬಗ್ಗೆ ಮಾಹಿತಿಯೇ ಇಲ್ಲ ಎಂದ ಚೀನಾ

ಡೋಕ್ಲಾಮ್ ವಿವಾದ ಸಂಬಂಧ ಲಡಾಖ್ ಬಳಿ ಭಾರತದ ಗಡಿ ನುಸುಳಲು ಚೀನೀ ಸೈನಿಕರು ಯತ್ನ ನಡೆಸಿದ್ದು, ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿದ್ದರೂ ಚೀನಾ ಮಾತ್ರ ತನಗೆ ಈ ಬಗ್ಗೆ ಮಾಹಿತಿಯೇ ಇಲ್ಲ...

ಡೋಕ್ಲಾಮ್ ಗಡಿಯಲ್ಲಿ ಚೀನಾ-ಭಾರತೀಯ ಸೇನಾ ಸಂಘರ್ಷ ಬಗ್ಗೆ ಮಾಹಿತಿಯೇ ಇಲ್ಲ ಎಂದ ಚೀನಾ
ಸಂಗ್ರಹ ಚಿತ್ರ
Published On :
ಬೀಜಿಂಗ್: ಡೋಕ್ಲಾಮ್ ವಿವಾದ ಸಂಬಂಧ ಲಡಾಖ್ ಬಳಿ ಭಾರತದ ಗಡಿ ನುಸುಳಲು ಚೀನೀ ಸೈನಿಕರು ಯತ್ನ ನಡೆಸಿದ್ದು, ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿದ್ದರೂ ಚೀನಾ ಮಾತ್ರ ತನಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಬುಧವಾರ ಹೇಳಿಕೊಂಡಿದೆ. 
ನಿನ್ನೆಯಷ್ಟೇ ಲಡಾಖ್ ಬಳಿಯಿರುವ ಭಾರತೀಯ ಭೂಭಾಗವನ್ನು ಪ್ರವೇಶಿಸಲು ಚೀನಾ ಸೈನಿಕರು ಯತ್ನಿಸಿದ್ದರು. ಈ ವೇಳೆ ಚೀನೀ ಸೈನಿಕರ ಹಿಮ್ಮೆಟ್ಟಿಸುವಲ್ಲಿ ಭಾರತದ ಪಡೆಗಳು ಯಶಸ್ವಿಯಾಗಿದ್ದರು. 
ಪ್ಯಾಂಗಾಂಗ್ ಸರೋವರದ ಬಳಿಯ 'ಫಿಂಗರ್ 4" ಹಾಗೂ 'ಫಿಂಗರ್ 5' ಭೂಭಾಗದಲ್ಲಿ ನಿನ್ನೆ ಬೆಳಿಗ್ಗೆ 6 ರಿಂದ 9ರವರೆಗೆ ವಾಸ್ತವ ಗಡಿ ರೇಖೆ (ಎಲ್ಎಸಿ) ದಾಟಿ ಬರಲು ಚೀನಾ ಸೈನಿಕರು 2 ಬಾರಿ ಯತ್ನ ನಡೆಸಿತ್ತು. ಈ ವೇಳೆ ಭಾರತೀಯ ಸೇನೆ ಮಾನವ ತಡೆಗೋಡೆ ನಿರ್ಮಿಸಿ ಅವರನ್ನು ತಡೆಯಲೆತ್ನಿಸಿದ್ದರು. ಈ ವೇಳೆ ಚೀನೀ ಸೈನಿಕರು ಯೋಧರ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದರು. 
ಗಡಿಯಲ್ಲಿ ಇಷ್ಟೆಲ್ಲಾ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ ಚೀನಾ ಮಾತ್ರ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ಪ್ರದರ್ಶಿಸಿದೆ. ಗಡಿಯಲ್ಲಿ ಚೀನಾ ಹಾಗೂ ಭಾರತೀಯ ಸೇನೆ ನಡುವಿನ ಸಂಘರ್ಷ ನಡೆದಿರುವುದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಚೀನಾ ಹೇಳಿಕೊಂಡಿದೆ. 
ಈ ಕುರಿತಂತೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್ಯಿಂಗ್ ಅವರು, ಗಡಿಯಲ್ಲಿ ಶಾಂತಿ ಕಾಪಾಡಲು ಚೀನಾ ಸೇನೆ ಬದ್ಧವಾಗಿದೆ. ಗಡಿಯಲ್ಲಿ ಚೀನಾ ಹಾಗೂ ಭಾರತೀಯ ಸೇನೆ ನಡುವೆ ಸಂಘರ್ಷ ಎದುರಾಗಿರುವುದರ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. 
ವಾಸ್ತವ ಗಡಿ ರೇಖೆ (ಎಲ್ಎಸಿ) ಬಳಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಸದಾ ಕಾಲ ಗಸ್ತು ತಿರುಗುತ್ತಿರುತ್ತದೆ. ಚೀನಾ-ಭಾರತ ಗಡಿಯಲ್ಲಿ ಶಾಂತಿ ಕಾಪಾಡಲು ಚೀನಾ ಸೇನೆ ಬದ್ಧವಾಗಿದೆ. ಭಾರತೀಯ ಸೇನೆ ಕೂಡ ಶಾಂತಿ ಕಾಪಾಡುವಲ್ಲಿ ಬದ್ಧವಾಗಿರಬೇಕೆಂದು ನಾವು ಆಗ್ರಹಿಸುತ್ತೇವೆಂದು ತಿಳಿಸಿದ್ದಾರೆ. 
ಕಳೆದೆರಡು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು.  ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ  ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ  ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.