ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸಿದ ಡೊನಾಲ್ಡ್ ಟ್ರಂಪ್ ಸೊಸೆ!
ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸೊಸೆ ಲಾರಾ ಟ್ರಂಪ್ ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸುವ ಮೂಲಕ ವಿಭಿನ್ನವಾಗಿ ಪ್ರಚಾರ ನಡೆಸಿದ್ದಾರೆ.

ವರ್ಜೀನಿಯಾ: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸೊಸೆ ಲಾರಾ ಟ್ರಂಪ್ ಹಿಂದೂ ದೇವಾಲಯದಲ್ಲಿ ದೀಪಾವಳಿ ಆಚರಿಸುವ ಮೂಲಕ ವಿಭಿನ್ನವಾಗಿ ಪ್ರಚಾರ ನಡೆಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮ ಮಾವ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ನೀಡಿ ಪ್ರಚಾರ ನಡೆಸುತ್ತಿರುವ ಲಾರಾ ಟ್ರಂಪ್ ಅವರು, ಭಾರತೀಯ ಮತದಾರರ ಸೆಳೆಯಲು ಪ್ರಯತ್ನಿಸಿದ್ದು, ವರ್ಜೀನಿಯಾದಲ್ಲಿರುವ ಹಿಂದೂ ದೇವಾಲಯಕ್ಕೆ ತೆರಳಿ ಅಲ್ಲಿರುವ ಭಾರತೀಯ ಮೂಲದವರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಾರಾ, ವೈಯಕ್ತಿಕವಾಗಿ ನನಗೆ ಹಿಂದೂ ಸಂಸ್ಕೃತಿ ಎಂದರೆ ತುಂಬಾ ಪ್ರೀತಿ ಮತ್ತು ಗೌರವ. ಭಾರತೀಯರೊಂದಿಗೆ ಸೇರಿ ಹಬ್ಬ ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ಮಾವ ಟ್ರಂಪ್ ಅಧ್ಯಕ್ಷರಾಗುವ ಮೂಲಕ ಭಾರತ ಮತ್ತು ಅಮೆರಿಕ ನಡುವಿನ ಬಾಂಧ್ಯವ್ಯ ಎತ್ತರಕ್ಕೆ ಹೋಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಭಾರತ ಮೂಲದವರ ಒಕ್ಕೂಟದ ಸದಸ್ಯ ರಾಜೇಶ್ ಗೂಟಿ, ಲಾರಾ ಟ್ರಂಪ್ ಅವರ ಆಗಮನದಿಂದ ನಮಗೆ ಒಂದು ವಾರ ಮೊದಲೇ ದೀಪಾವಳಿ ಬಂದಂತಾಗಿದೆ. ಅವರೊಂದಿಗೆ ಸೇರಿ ಹಬ್ಬ ಆಚರಿಸುತ್ತಿರುವುದು ತುಂಬ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುತೂಹಲಕಾರಿ ಘಟ್ಟದಲ್ಲಿದ್ದು, ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿಯೇ ದೀಪಾವಳಿ ಹಬ್ಬ ಆಗಮಿಸಿದ್ದು, ಭಾರತೀಯರೊಂದಿಗೆ ಹಬ್ಬದ ಆಚರಣೆ ಮಾಡುವ ಮೂಲಕ ಲಾರಾ ಅವರು ಟ್ರಂಪ್ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಈ ಹಿಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್, ಹಿಂದೂಗಳನ್ನು ಕಂಡರೆ ತಮಗೆ ತುಂಬಾ ಪ್ರೀತಿ ಎಂದು ಹೇಳಿದ್ದರು. ಬಳಿಕ ತಮ್ಮ ಮಾತನ್ನ ಬದಲಿಸಿದ್ದ ಟ್ರಂಪ್, ಭಾರತೀಯರನ್ನು ಕಂಡರೆ ಪ್ರೀತಿ ಎಂದು ಮಾತು ಬದಲಿಸಿದ್ದರು. ಆ ಮೂಲಕ ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಟ್ರಂಪ್ ಹಾಗೂ ಅವರ ಕುಟುಂಬ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


