ವಿದೇಶ

ನಿಮ್ಮ ಯಶಸ್ಸಿಗೆ ಸಹಕರಿಸುತ್ತೇವೆ, ನೀವು ಯಶಸ್ವಿಯಾದರೆ ರಾಷ್ಟ್ರ ಯಶಸ್ವಿಯಾದಂತೆ: ಟ್ರಂಪ್ ಗೆ ಒಬಾಮ

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾಗಿದ್ದು, ಚರ್ಚೆ ನಡೆಸಿದ್ದಾರೆ.

ನಿಮ್ಮ ಯಶಸ್ಸಿಗೆ ಸಹಕರಿಸುತ್ತೇವೆ, ನೀವು ಯಶಸ್ವಿಯಾದರೆ ರಾಷ್ಟ್ರ ಯಶಸ್ವಿಯಾದಂತೆ: ಟ್ರಂಪ್ ಗೆ ಒಬಾಮ
ಡೊನಾಲ್ಡ್ ಟ್ರಂಪ್- ಬರಾಕ್ ಒಬಾಮ ಭೇಟಿ
Published On :
ವಾಷಿಂಗ್ ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾಗಿದ್ದು, ಚರ್ಚೆ ನಡೆಸಿದ್ದಾರೆ.   
ಓವಲ್ ಕಚೇರಿಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಬರಾಕ್ ಒಬಾಮ ಚರ್ಚೆ ನಡೆಸಿದ್ದು, " ಅಮೆರಿಕಾದ ಹಲವು ಒಳ್ಳೆಯ ಹಾಗೂ ಸಂಕಷ್ಟದ ಪರಿಸ್ಥಿತಿಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದೇವೆ, ಈ ವೇಳೆ ಬರಾಕ್ ಒಬಾಮ ಅವರು ಈ ವರೆಗೂ ಸಾಧಿಸಲಾಗಿರುವ ವಿಷಯಗಳ ಬಗ್ಗೆ ಹೇಳಿದರು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.  ಅಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ನಡೆಸಿದ್ದ ಭಾಷಣದಲ್ಲಿ ಬರಾಕ್ ಒಬಾಮ ಅವರೊಂದಿಗಿನ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು. 
2017 ರ ಜ.20 ರಂದು ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಅವರು ಆಡಳಿತದಲ್ಲಿ ಯಶಸ್ವಿಯಾಗಲು ಅಗತ್ಯ ನೆರವನ್ನು ನೀಡುವುದಾಗಿ ಬರಾಕ್ ಒಬಾಮ ಹೇಳಿದ್ದು, ತನ್ನೆದುರಿಗೆ ಇರುವ ಸವಾಲುಗಳನ್ನು ಎದುರಿಸಲು ರಾಷ್ಟ್ರ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದ್ದಾರೆ. 
"ನಿಮ್ಮ ಯಶಸ್ಸಿಗೆ ಅಗತ್ಯವಿರುವ ಎಲ್ಲವನ್ನೂ ನಾವು ಮಾಡಲು ಸಿದ್ಧರಿದ್ದೇವೆ, ಏಕೆಂದರೆ ನೀವು ಯಶಸ್ವಿಯಾದರೆ, ರಾಷ್ಟ್ರ ಯಶಸ್ವಿಯಾದಂತೆ" ಎಂದು ಭೇಟಿಯ ಅಂತ್ಯದಲ್ಲಿ ಬರಾಕ್ ಒಬಾಮ ಡೊನಾಲ್ಡ್ ಟ್ರಂಪ್ ಗೆ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನವಣಾ ಭಾಷಣಗಳಲ್ಲಿ ಬರಾಕ್ ಒಬಾಮ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದರು. ಒಬಾಮ ಸಹ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿ ಅಮೆರಿಕ ಅಧ್ಯಕ್ಷರಾಗಲು ಅರ್ಹವಾದ ವ್ಯಕ್ತಿಯಲ್ಲ ಎಂದು ಹೇಳಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಈ ಹಿಂದೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್ 2008 ರಲ್ಲಿ ತಮಗೆ ಅಧಿಕಾರ ಹಸ್ತಾಂತರ ಮಾಡಿದ ರೀತಿಯಲ್ಲೇ ರಿಪಬ್ಲಿಕನ್ ಪಕ್ಷದಿಂದ ಈಗ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡೊನಾಲ್ಡ್ ಟ್ರಂಪ್ ಅವರಿಗೂ ಅಧಿಕಾರ ಹಸ್ತಾಂತರ ಮಾಡುವುದಾಗಿ ಒಬಾಮ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.