ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!
ಈ ದುರ್ಘಟನೆಯಲ್ಲಿ 20 ವರ್ಷದ ಅಷ್ಟನ್ ಫ್ರೆಂಡ್ ಎಂಬಾತನ ಕಾರು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಪಾಕಿಸ್ತಾನ ಮೂಲದ ವಿದ್ಯಾರ್ಥಿನಿ ಸಾಮಿಯಾ ಮಲಿಕ್ ಮೃತಪಟ್ಟಿದ್ದರು.

ಅಡಿಲೇಡ್: ನಡು ರಸ್ತೆಯಲ್ಲೇ ನಮಾಜ್ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಢಿಕ್ಕಿಯಾಗಿ ಪಾಕ್ ಮೂಲದ ವಿದ್ಯಾರ್ಥಿನಿ ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನಿಗೆ ಆಸಿಸ್ ಕೋರ್ಟ್ ಜೈಲು ಶಿಕ್ಷೆ ವಿನಾಯಿತಿ ನೀಡಿದೆ ಎಂದು ವರದಿಯಾಗಿದೆ.
2025ರ ಮೇ 6ರಂದು ರಾತ್ರಿ ಅಡಿಲೇಡ್‌ನ ಹಿಲ್‌ಕ್ರೆಸ್ಟ್‌ನ ನಾರ್ತ್ ಈಸ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಈ ದುರ್ಘಟನೆಯಲ್ಲಿ 20 ವರ್ಷದ ಅಷ್ಟನ್ ಫ್ರೆಂಡ್ ಎಂಬಾತನ ಕಾರು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಪಾಕಿಸ್ತಾನ ಮೂಲದ ವಿದ್ಯಾರ್ಥಿನಿ ಸಾಮಿಯಾ ಮಲಿಕ್ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ, ಅಪಘಾತ ಎಸಗಿ ಸ್ಥಳದಿಂದ ಪರಾರಿಯಾಗಿದ್ದ ಯುವ ಚಾಲಕನಿಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ಇದೀಗ ನ್ಯಾಯಾಲಯ ಅಮಾನತುಗೊಳಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ದಕ್ಷಿಣ ಆಸ್ಟ್ರೇಲಿಯಾದ ಜಿಲ್ಲಾ ನ್ಯಾಯಾಲಯವು, ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಲು ಕಾರಣವಾದ ಹಾಗೂ ಅಪಘಾತದ ಸ್ಥಳದಲ್ಲಿ ನಿಲ್ಲದೆ ತೆರಳಿದ ಆರೋಪಗಳನ್ನು ಒಪ್ಪಿಕೊಂಡಿದ್ದ ಫ್ರೆಂಡ್‌ಗೆ ಒಂದು ವರ್ಷ, ಮೂರು ತಿಂಗಳು ಮತ್ತು 29 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಎರಡು ವರ್ಷಗಳ ಕಾಲ ಸದ್ವರ್ತನೆಯಿಂದ ಇರುವ ಷರತ್ತಿಗೆ ಆತ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಿದೆ ಎನ್ನಲಾಗಿದೆ.
ರಸ್ತೆಯ ಮಧ್ಯೆ ನಾಲ್ಕು ನಿಮಿಷ ಮಂಡಿಯೂರಿ ಪ್ರಾರ್ಥನೆ ಮಾಡುತ್ತಿದ್ದ ಯುವತಿ
ನ್ಯಾಯಾಲಯದ ವಿಚಾರಣೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ವಿದ್ಯಾರ್ಥಿನಿ ಸಾಮಿಯಾ ಕಾರು ಡಿಕ್ಕಿ ಹೊಡೆಯುವ ಮೊದಲು ರಸ್ತೆಯ ಮಧ್ಯೆ ಸುಮಾರು ನಾಲ್ಕು ನಿಮಿಷಗಳ ಕಾಲ ಮಂಡಿಯೂರಿ ಕುಳಿತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿತ್ತು.
ಆಕೆಯ ಕೈಗಳು ಪ್ರಾರ್ಥನೆ ಮಾಡುವ ರೀತಿಯಲ್ಲಿದ್ದವು ಎಂದು ನ್ಯಾಯಾಧೀಶೆ ಆನ್ ಬಾರ್ನೆಟ್ ಹೇಳಿದ್ದಾರೆ. ಆದರೆ, ಸಾಮಿಯಾ ರಸ್ತೆಯ ಮಧ್ಯೆ ಆ ರೀತಿ ಕುಳಿತಿದ್ದುದಕ್ಕೆ ನಿಖರವಾದ ಕಾರಣವೇನು ಎಂಬುದು ನ್ಯಾಯಾಲಯದಲ್ಲಿ ಸ್ಪಷ್ಟವಾಗಿರಲಿಲ್ಲ.
ತನ್ನ ಗೆಳತಿಯ ಮನೆಯಿಂದ ಮನೆಗೆ ಮರಳುತ್ತಿದ್ದ ವೇಳೆ ಫ್ರೆಂಡ್ ಕಾರು ಚಲಾಯಿಸುತ್ತಿದ್ದ. ಆಗ ರಸ್ತೆಯಲ್ಲಿದ್ದ ಸಾಮಿಯಾಗೆ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಶಬ್ದ ಕೇಳಿಸಿಕೊಂಡಿದ್ದರೂ, ರಸ್ತೆಯಲ್ಲಿ ಏನಿದೆ ಎಂಬುದು ಆತನಿಗೆ ತಿಳಿದಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಪ್ರಾಣಿ ಇರಬಹುದೆಂದು ಭಾವಿಸಿದ್ದ ಚಾಲಕ
ಚಾಲಕನ ಪರ ವಕೀಲೆ ಜೇನ್ ಅಬ್ಬೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಕಾರಿಗೆ ಅಲ್ಪ ಪ್ರಮಾಣದ ಹಾನಿಯಾಗಿದ್ದರಿಂದ ಫ್ರೆಂಡ್ ತಾನು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿರುವುದನ್ನು ಆರಂಭದಲ್ಲಿ ಅರಿತುಕೊಂಡಿರಲಿಲ್ಲ ಎಂದು ತಿಳಿಸಿದರು. ರಸ್ತೆಯಲ್ಲಿ ಯಾವುದೋ ಪ್ರಾಣಿ ಅಥವಾ ವಸ್ತುವಿಗೆ ಡಿಕ್ಕಿಯಾಗಿರಬಹುದು ಎಂದು ಆತ ಭಾವಿಸಿದ್ದ ಎಂದು ವಕೀಲೆ ಹೇಳಿದರು.
ಹಿಂದಿನ ದೃಶ್ಯವನ್ನು ತೋರಿಸುವ ಕನ್ನಡಿಯಲ್ಲಿ ಪರಿಶೀಲಿಸುತ್ತಿದ್ದರೂ, ಚಾಲಕನಿಗೆ ಸಾಮಿಯಾ ಕಾಣಿಸಿರಲಿಲ್ಲ. ಆದರೆ, ಆಕೆಯನ್ನು ಗಮನಿಸಬೇಕಿತ್ತು ಎಂದು ವಕೀಲೆ ಒಪ್ಪಿಕೊಂಡರು.
ಸಾಮಿಯಾ ಸಾವಿನ ಕುರಿತು ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ನೋಡಿದ ಬಳಿಕವೇ ತನಗೆ ಏನಾಗಿದೆ ಎಂಬುದು ಫ್ರೆಂಡ್‌ಗೆ ಅರಿವಾಗಿತ್ತು. ಆ ಸುದ್ದಿ ಆತನನ್ನು ತೀವ್ರ ಆಘಾತಕ್ಕೆ ತಳ್ಳಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಘಟನೆ ನಡೆದ ಒಂದು ವಾರದ ಬಳಿಕ ಪೊಲೀಸರು ಆತನನ್ನು ಗುರುತಿಸಿ ಬಂಧಿಸಿದ್ದರು. ಅಪಘಾತದ ಸಮಯದಲ್ಲಿ ಫ್ರೆಂಡ್ ಮದ್ಯ ಅಥವಾ ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗಿರಲಿಲ್ಲ ಹಾಗೂ ಅತಿವೇಗದಲ್ಲೂ ವಾಹನ ಚಲಾಯಿಸುತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
'ನನ್ನ ತಪ್ಪಿನ ಹೊಣೆಯನ್ನು ಜೀವನಪೂರ್ತಿ ಹೊರುತ್ತೇನೆ'
ಮೃತ ವಿದ್ಯಾರ್ಥಿನಿಯ ಕುಟುಂಬದವರಿಗೆ ಓದಿ ಹೇಳಲಾದ ಕ್ಷಮಾಪಣಾ ಸಂದೇಶದಲ್ಲಿ ಫ್ರೆಂಡ್ ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ. “ನನ್ನಿಂದಾಗಿ ಜೀವವೊಂದು ಕಳೆದುಹೋಗಿದೆ. ಸಾಮಿಯಾ ಅವರ ಕುಟುಂಬ ಮತ್ತು ಆತ್ಮೀಯರಿಗೆ ಉಂಟಾದ ದುಃಖ ಹಾಗೂ ಆಘಾತಕ್ಕಾಗಿ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ತಪ್ಪುಗಳನ್ನು ಜೀವನಪೂರ್ತಿ ಹೊತ್ತುಕೊಂಡೇ ಬದುಕಬೇಕಾಗುತ್ತದೆ” ಎಂದು ಆತ ಹೇಳಿದ್ದಾನೆ.
“ನನ್ನ ಕೃತ್ಯಗಳಿಗೆ ಅಥವಾ ನಾನು ಮಾಡಬೇಕಿದ್ದ ಕರ್ತವ್ಯವನ್ನು ಮಾಡದೆ ಹೋದದ್ದಕ್ಕೆ ಯಾವುದೇ ಸಮರ್ಥನೆ ಇಲ್ಲ. ಬೇರೆಯವರ ಮೇಲೆ ಹೊಣೆ ಹೊರಿಸುವುದಿಲ್ಲ. ನಡೆದದ್ದಕ್ಕೆ ನಾನೇ ಸಂಪೂರ್ಣ ಜವಾಬ್ದಾರ. ನನ್ನ ತಪ್ಪಿನಿಂದ ಪಾಠ ಕಲಿತು, ಅದರ ಹೊಣೆಗಾರಿಕೆಯನ್ನು ಸ್ವೀಕರಿಸಲು ಬದ್ಧನಾಗಿದ್ದೇನೆ” ಎಂದು ಕ್ಷಮಾಪಣಾ ಸಂದೇಶದಲ್ಲಿ ತಿಳಿಸಿದ್ದಾನೆ ಎಂದು ಡೈಲಿಮೇಲ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



