ವಿದೇಶ

ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್: ಚೀನಾ ಕೆಂಡಾಮಂಡಲ!

ಇತ್ತೀಚೆಗಷ್ಟೇ ತೈವಾನ್ ನ ರಾಷ್ಟ್ರಪತಿಯೊಂದಿಗೆ ಸಂಭಾಷಣೆ ನಡೆಸಿದ್ದ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್, ಈಗ ತೈವಾನ್ ಚೀನಾದ ಭಾಗವೆಂದು ಉಲ್ಲೇಖಿಸುವ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದಾರೆ.

ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್: ಚೀನಾ ಕೆಂಡಾಮಂಡಲ!
Donald Trump
Published On :
ವಾಷಿಂಗ್ ಟನ್: ಇತ್ತೀಚೆಗಷ್ಟೇ ತೈವಾನ್ ನ ರಾಷ್ಟ್ರಪತಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ತೈವಾನ್ ಚೀನಾದ ಭಾಗವೆಂದು ಉಲ್ಲೇಖಿಸುವ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದಾರೆ. 
ತೈವಾನ್ ಚೀನಾದ ಭಾಗವೆಂಬ ದೀರ್ಘಕಾಲದ ನಿಲುವನ್ನು ಅಮೆರಿಕ ಇನ್ನೂ ಮುಂದುವರೆಸಬೇಕೆ? ಎಂದು ಪ್ರಶ್ನಿಸಿರುವ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೇರವಾಗಿ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದರು. ಚೀನಾ ವ್ಯಾಪಾರ ವಹಿವಾಟು ವಿಷಯದಲ್ಲಿ ಸಡಿಲಗೊಳ್ಳದೇ ಇದ್ದರೆ ಒಂದೇ ಚೀನಾ ನೀತಿಯನ್ನು ವಿರೋಧಿಸಲು ಹಿಂದೇಟು ಹಾಕುವುದಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. 
ನನಗೆ ಒಂದೇ ಚೀನಾ ನೀತಿ ಏನೆಂಬುದು ತಿಳಿದಿದೆ. ಆದರೆ ಚೀನಾ ವ್ಯಾಪಾರ ವಹಿವಾಟು ವಿಷಯಗಳಲ್ಲಿ ಸಡಿಲಗೊಂಡು, ಒಪ್ಪಂದಕ್ಕೆ ಮುಂದಾಗದೇ ಇದ್ದರೆ ನಾವೇಕೆ ಅದೇ ನೀತಿಗೆ ಬದ್ಧವಾಗಿರಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಡೊನಾಲ್ಡ್ ಟ್ರಂಪ್ ಫಾಕ್ಸ್ ನ್ಯೂಸ್ ಗೆ ಹೇಳಿದ್ದರು. ಇದಕ್ಕೆ ಪೂರಕವೆಂಬಂತೆ ಚೀನಾ ತನ್ನದೆಂದು ಪ್ರತಿಪಾದಿಸುತ್ತಿರುವ ತೈವಾನ್ ನ ರಾಷ್ಟ್ರಾಧ್ಯಕ್ಷರೊಂದಿಗೆ ಡೊನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಮಾತನಾಡಿ ಚೀನಾ ಕೆಂಗಣ್ಣಿಗೆ ಗುರಿಯಾಗಿದ್ದರು. 
ಚೀನಾ ಕೈಗೊಂಡ ಕರೆನ್ಸಿ ಅಪಮೌಲ್ಯದಿಂದ ಅಮೆರಿಕಾಗೆ ಸಾಕಷ್ಟು ಸಮಸ್ಯೆಗಳುಂಟಾಗಿವೆ. ನಾವು ಅವರಿಗೆ ತೆರಿಗೆ ವಿಧಿಸದೇ ಇದ್ದರೂ ಅವರು ಮಾತ್ರ ನಮಗೆ ಗಡಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸುತ್ತಾರೆ. ವಿವಾದಿತ ದಕ್ಷಿಣ ಚೀನಾ ಸಮುದ್ರದ ಮಧ್ಯದಲ್ಲಿ ಬೃಹತ್ ಕೋಟೆಯನ್ನು ನಿರ್ಮಿಸಿದೆ, ಚೀನಾದ ನೀತಿಗಳಿಂದ ನಮಗೆ ಸಮಸ್ಯೆಯಾಗುತ್ತಿದ್ದರೂ ಒಂದೇ ಚೀನಾ ನೀತಿಗೆ ಬದ್ಧವಾಗಿರಬೇಕೆ? ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. 
ಟ್ರಂಪ್ ಹೇಳಿಕೆಗೆ ಕೆಂಡಾಮಂಡಲವಾಗಿರುವ ಚೀನಾ, ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ್ದು, ನೀವು ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದರೆ ನಾವು ನಿಮ್ಮ ಶತ್ರುಗಳಿಗೆ ನೆರವು ನೀಡಲು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತೇವೆ ಎಂದೂ ಹೇಳಿದೆ. ಡೊನಾಲ್ಡ್ ಟ್ರಂಪ್ ಅಜ್ಞಾನಿಯ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಟೀಕೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.