ಸಿರಿಯಾ: ವಾಯುದಾಳಿಯಲ್ಲಿ ಕನಿಷ್ಟ 23 ಮಂದಿ ಸಾವು..!
ಉಗ್ರಗಾಮಿ ಸಂಘಟನೆ ಇಸಿಸ್ ವಿರುದ್ಧ ಸಿರಿಯಾ ಮತ್ತು ಅಮೆರಿಕ ಮೈತ್ರಿ ಪಡೆಗಳು ವಾಯುದಾಳಿ ಆರಂಭಿಸಿದ್ದು, ವಾಯುದಾಳಿಯಲ್ಲಿ ಕನಿಷ್ಟ 23 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ...

ಬೈರೂತ್: ಉಗ್ರಗಾಮಿ ಸಂಘಟನೆ ಇಸಿಸ್ ವಿರುದ್ಧ ಸಿರಿಯಾ ಮತ್ತು ಅಮೆರಿಕ ಮೈತ್ರಿ ಪಡೆಗಳು ವಾಯುದಾಳಿ ಆರಂಭಿಸಿದ್ದು, ವಾಯುದಾಳಿಯಲ್ಲಿ ಕನಿಷ್ಟ 23 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಇಸಿಸ್ ಉಗ್ರಗಾಮಿ ಸಂಘಟನೆಯ ಜಿಹಾದಿಗಳ ಹಿಡಿತದಲ್ಲಿದ್ದ ಪೂರ್ವ ಸಿರಿಯಾದ ಮಾರುಕಟ್ಟೆಯೊಂದರ ಮೇಲೆ ಸಿರಿಯಾ ಸೇನೆ ವಾಯು ದಾಳಿ ನಡೆಸಿದ ಪರಿಣಾಮ 8 ಮಕ್ಕಳು ಸೇರಿದಂತೆ ಕನಿಷ್ಠ 23 ಮಂದಿ ಬಲಿಯಾಗಿದ್ದಾರೆ. ಮಯಾದೀನ್ ಎಂಬಲ್ಲಿನ ಮಾರುಕಟ್ಟೆ ಮೇಲೆ ಸಿರಿಯಾ ವಾಯು ಸೇನೆ ಕನಿಷ್ಠ ಎರಡು ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ 8 ಮಕ್ಕಳು, 5 ಮಹಿಳೆಯರು ಸೇರಿ ಕನಿಷ್ಠ 23 ನಾಗರಿಕರು ಬಲಿಯಾಗಿದ್ದಾರೆ ಎಂದು ಮಾನವಹಕ್ಕುಗಳ ಸಿರಿಯನ್ ನಿಗಾ ತಂಡದ ಮುಖ್ಯಸ್ಥ ರಮಿ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.
ಮುಂದುವರೆದ ವಾಯುದಾಳಿ
ಅಮೆರಿಕ ನೇತೃತ್ವದ ಮೈತ್ರಿಪಡೆಗಳು ಸೋಮವಾರದಿಂದಲೇ ವಾಯುದಾಳಿ ಆರಂಭಿಸಿದ್ದು, ಇರಾಕ್ ನ 12 ಪ್ರದೇಶ ಮತ್ತು ಸಿರಿಯಾಗೆ ಸೇರಿದ 5 ಪ್ರದೇಶಗಳಲ್ಲಿ ಸತತ ವಾಯುದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಆರು ಘಟಕಗಳ ಮೇಲೆ ವಾಯು ದಾಳಿ ನಡೆಸಲಾಗಿದ್ದು, ಉಗ್ರರು ವಶಕ್ಕೆ ಪಡೆದಿದ್ದ ಬಹುಮಹಡಿ ಕಟ್ಟಡಗಳು, ಅಡಗುತಾಣಗಳು, ಶಸ್ತ್ರಾಸ್ತ್ರ ಕೊಠಡಿಗಳು ಸೇರಿದಂತೆ ಅವರ ವಿಶ್ರಾಂತಿ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.
ಭದ್ರತಾ ಪಡೆಗಳ ಮೂಲಗಳ ಪ್ರಕಾರ ಅಲ್ ಹುವಾಯ್ಝಾ, ರಮಾದಿ, ಬಾಯ್ಜಿ ಸೇರಿದಂತೆ ಇಸಿಸ್ ಹಿಡಿತದಲ್ಲಿರುವ ಒಟ್ಟು 8 ನಗರಗಳ ಮೇಲೆ ವಾಯುದಾಳಿ ನಡೆಸಲಾಗಿದ್ದು, ಸಿರಿಯಾದ ಅಬು ಕಮಲ್ ಬಳಿ ಇರುವ ಕಚ್ಚಾ ತೈಲ ಸಂಗ್ರಹ ಕೇಂದ್ರ ಸಂಪೂರ್ಣ ನಾಶವಾಗಿದೆ. ಸಿರಿಯಾದ ತೈಲಭರಿತ ಪ್ರದೇಶವಾದ ಡೇರ್ ಎಜ್ಝರ್ ಪ್ರಾಂತ್ಯದಲ್ಲಿರುವ ಮಯಾದೀನ್ ಮೇಲಿನ ದಾಳಿಯಲ್ಲಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಡೇರ್ ಎಜ್ಝರ್ ಪ್ರಾಂತ್ಯ ಐಎಸ್ ಉಗ್ರರ ಹಿಡಿತದಲ್ಲಿತ್ತು. ಡೇರ್ ಎಜ್ಝರ್ ಮತ್ತು ಮಾರ್ಆ ಬಳಿ ನಡೆದ ಪ್ರತ್ಯೇಕ ಮೂರು ದಾಳಿಗಳಲ್ಲಿ ಇಸಿಸ್ ಗೆ ಸೇರಿದ ಎರಡು ಘಟಕಗಳು ಸಂಪೂರ್ಣ ಧ್ವಂಸಗೊಂಡಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


