ಅಮೆರಿಕ ವಿರುದ್ಧ ಸಮರ ಸಾರುವ ಯಾವುದೇ ಉಗ್ರ ಸಂಘಟನೆಯನ್ನು ಬಿಡುವುದಿಲ್ಲ: ಒಬಾಮ
ಇಸಿಸ್ ಆಗಲಿ ಅಥವಾ ಯಾವುದೇ ಉಗ್ರ ಸಂಘಟನೆಯಾಗಲೀ ಅಮೆರಿಕ ವಿರುದ್ಧ ಸಮರ ಸಾರಿದರೆ ಆ ಸಂಘಟನೆಯನ್ನು ನಾಶಮಾಡದೇ ಬಿಡುವುದಿಲ್ಲ ಎಂದು...

ವಾಷಿಂಗ್ಟನ್: ಇಸಿಸ್ ಆಗಲಿ ಅಥವಾ ಯಾವುದೇ ಉಗ್ರ ಸಂಘಟನೆಯಾಗಲೀ ಅಮೆರಿಕ ವಿರುದ್ಧ ಸಮರ ಸಾರಿದರೆ ಆ ಸಂಘಟನೆಯನ್ನು ನಾಶಮಾಡದೇ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾನುವಾರ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾ ಗುಂಡಿನ ದಾಳಿ ಕುರಿತಂತೆ ಓವಲ್ ಕಾರ್ಯಾಲಯದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ಕ್ಯಾಲಿಫೋರ್ನಿಯಾದಲ್ಲಿ ದಾಳಿ ನಡೆಸಿದ ದಂಪತಿಗಳು ಸ್ಫೋಟಕ ಹಾಗೂ ಪೈಪ್ ಬಾಂಬ್ ಗಳನ್ನು ಸಂಗ್ರಹ ಮಾಡಿಕೊಂಡಿದ್ದರು. ಹೀಗಾಗಿ ಇದೊಂದು ಉಗ್ರ ಕೃತ್ಯವೆಂಬುದು ಸಾಬೀತಾಗಿದೆ. ಮುಸ್ಲಿಂ ದಂಪತಿಗಳು ಉಗ್ರವಾದದ ಹಾದಿ ತುಳಿಸಿದ್ದಾರೆ. ಇಸ್ಲಾಂ ಧರ್ಮದಲ್ಲಿ ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಸಮರ ಸಾರಬೇಕೆಂದು ಹೇಳಲಾಗಿದೆ ಎಂದು ಅವರು ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ.
ಅಮೆರಿಕ ಜನತೆಯ ರಕ್ಷಣೆಗಿಂತ ದೊಡ್ಡ ಜವಾಬ್ದಾರಿ ಬೇರೊಂದಿಲ್ಲ. ಕ್ಯಾಲಿಫೋರ್ನಿಯಾ ದಾಳಿಯನ್ನು ಸಹಿಸುವುದಿಲ್ಲ. ದಾಳಿಯಲ್ಲಿ ಸಾಕಷ್ಟು ಅಮಾಯಕರು ಸಾವನ್ನಪ್ಪಿದ್ದಾರೆ. ಈ ಹಿಂದೆ ಖೈದಾ ಉಗ್ರ ಸಂಘಟನೆಯು ದಾಳಿ ನಡೆಸಿ 3 ಸಾವಿರಕ್ಕೂ ಹೆಚ್ಚು ಅಮೆರಿಕ ಜನತೆಯನ್ನು ಬಲಿತೆಗೆದುಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ದೇಶ ಭಯೋತ್ಪಾದನೆ ವಿರುದ್ಧ ಹೋರಾಡುತ್ತಲೇ ಬಂದಿದೆ. ಅಂದು ನಮ್ಮ ಭದ್ರತಾ ಸಿಬ್ಬಂದಿಗಳು ಒಸಾಮಾ ಬಿನ್ ಲಾಡೆನ್ ನ್ನು ಹೊಡೆದಿರುಳಿಸಿತ್ತು.
ನಮ್ಮ ಸಮರ ಕೇವಲ ಉಗ್ರ ಸಂಘಟನೆಯ ವಿರುದ್ಧ ಮಾತ್ರವಾಗಬೇಕೇ ವಿನಃ ಇಸ್ಲಾಂ ಧರ್ಮದ ವಿರುದ್ಧದ ಸಮರವಾಗಬಾರದು. ಐಸಿಸ್ ಉಗ್ರ ಸಂಘಟನೆಯ ವಿರುದ್ಧದ ಸಮರವನ್ನು ಇಸ್ಲಾಂ ವಿರುದ್ಧದ ಸಮರವಾಗಿ ಬದಲಿಸುವ ಯತ್ನಗಳು ನಡೆಯಬಾರದು. ಭಯೋತ್ಪಾದನೆಯ ಬೆದರಿಕೆ ಇದೀಗ ಇಡೀ ವಿಶ್ವದಾದ್ಯಂತ ಕಾಡುತ್ತಿದ್ದು, ಈ ಬೆದರಿಕೆಯನ್ನು ಎದುರಿಸಿ ಹತ್ತಿಕ್ಕಲೇಬೇಕಾದ ಸ್ಥಿತಿ ಬಂದೊದಗಿದೆ ಎಂದು ಹೇಳಿದ್ದಾರೆ.
ನಮ್ಮ ವಿರುದ್ಧ ಸಮರ ಸಾರುವ ಇಸಿಸ್ ಅಥವಾ ಯಾವುದೇ ಉಗ್ರ ಸಂಘಟನೆಯನ್ನು ನಾವು ಬಿಡುವುದಿಲ್ಲ. ಅವರನ್ನು ನಾಶ ಮಾಡಿಯೇ ತೀರುತ್ತೇವೆ. ನಮ್ಮ ಸಮರ ಕೇವಲ ಉಗ್ರ ಸಂಘಟನೆಗಳ ವಿರುದ್ಧವೇ ಹೊರತು ಯಾವುದೇ ಮುಸ್ಲಿಂ ರಾಷ್ಟ್ರ, ಮುಸ್ಲಿಂ ಬಂಧು, ಮುಸ್ಲಿಂ ಸ್ನೇಹಿತರು ಹಾಗೂ ಮುಸ್ಲಿಂ ನೆರೆಯವರ ವಿರುದ್ಧವಲ್ಲ. ನಮ್ಮ ಸಮರವನ್ನು ಇಸ್ಲಾಂ ವಿರುದ್ಧದ ಸಮರವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ ಭಯೋತ್ಪಾದನೆಯನ್ನು ತಡೆಗಟ್ಟುವ ಕುರಿತಂತೆ ಮಾತನಾಡಿದ ಅವರು, ಸ್ವಾತಂತ್ರ್ಯ ಎಂಬುದು ಭಯಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುವಂತಹದ್ದು, ಭಯೋತ್ಪಾದನೆ ಬೆದರಿಕೆ ಇದೀಗ ವಿಶ್ವಕ್ಕೆ ಸವಾಲಾಗಿ ಪರಿಣಮಿಸಿದೆ. ಉಗ್ರ ಸಂಘಟನೆಗಳನ್ನು ಹತ್ತಿಕ್ಕಲೇಬೇಕಾದ ಸಂದರ್ಭದ ಎದುರಾಗಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಾಶಕ್ಕೆ ಅಮೆರಿಕ ಬದ್ಧವಾಗಿದ್ದು, ಉಗ್ರರ ಬೇಟೆಗೆ ಅಮೆರಿಕ ಅಗತ್ಯ ಕ್ರಮ ಕೈಗೊಳ್ಳಲಿದೆ. ಉಗ್ರ ಸಂಘಟನೆಗಳ ವಿರುದ್ಧ ಸಮರ ಸಾರಿರುವ ದೇಶಗಳಿಗೆ ಅಮೆರಿಕ ಮಿಲಿಟರಿ ನೆರವು ನೀಡಲಿದೆ ಎಂದು ಹೇಳಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಡಿ.3ರಂದು ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪಿ ಸೈಯ್ಯದ್ ರಿಜ್ವಾನ್ ಇಸಿಸ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗುತ್ತಿದೆ. ಡಿ.3 ರಂದು ನಡೆದ ದಾಳಿಯಲ್ಲಿ ರಿಜ್ವಾನ್ ಮತ್ತು ತಶ್ಫೀನ್ ಮಲಿಕ್ ಎಂಬದ ದಂಪತಿಗಳು ಸ್ಯಾನ್ ಬನ್ರಾರ್ಡಿನೊದಲ್ಲಿರುವ ವಿಕಲಚೇತನ ಮಕ್ಕಳ ಕಲಿಕಾ ಕೇಂದ್ರವಾದ ಇನ್ ಲ್ಯಾಂಡ್ ಸ್ಥಳೀಯ ಕೇಂದ್ರದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಸ್ಥಳದಲ್ಲಿ 14 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, 21 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದಂಪತಿಗಳನ್ನು ಸದೆಬಡಿಯಲು ಕಾರ್ಯಾಚರಣೆಗಿಳಿದಿದ್ದ ಭದ್ರತಾ ಸಿಬ್ಬಂದಿಗಳು ಕೆಲವು ಗಂಟೆಗಳ ಬಳಿಕ ಇಬ್ಬರಿಗೂ ಗುಂಡಿ ಹಾರಿಸಿ ಹತ್ಯೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


