ಪರ್ವತಾರೋಹಿಗಳಿಗೆ Good news: ಹಿಮಾಲಯದ 83 ಶಿಖರಗಳು ಪರ್ವತಾರೋಹಣಕ್ಕೆ ಮುಕ್ತ; ಉತ್ತರಾಖಂಡ ಸರ್ಕಾರ ಮಹತ್ವದ ನಿರ್ಧಾರ..!
5,700ರಿಂದ 7,756 ಮೀಟರ್‌ಗಳವರೆಗಿನ ಶಿಖರಗಳು ಇನ್ನು ಮುಂದೆ ಸಾಹಸ ಪ್ರವಾಸೋದ್ಯಮಕ್ಕೆ ಸಿಗಲಿವೆ.

ಹಿಮಾಲಯ ಎಂದರೆ ಸಾಹಸ, ಸವಾಲು ಮತ್ತು ಆತ್ಮಾನುಭವದ ಪ್ರತೀಕ. ವಿಶ್ವದ ಅನೇಕ ಪರ್ವತಾರೋಹಕರ ಕನಸಿನ ತಾಣ ಹಿಮಾಲಯವಾಗಿದೆ. ಈ ನಡುವೆ ಉತ್ತರಾಖಂಡ ಸರ್ಕಾರ 83 ಪ್ರಮುಖ ಪರ್ವತ ಶಿಖರಗಳನ್ನು ಪರ್ವತಾರೋಹಣಕ್ಕೆ ಮುಕ್ತಗೊಳಿಸಿದ್ದು, ಇದು ಪರ್ವತಾರೋಹಿಗಳಲ್ಲಿ ಸಂತಸವನ್ನು ತರಿಸಿದೆ.
ಸರ್ಕಾರದ ಈ ನಿರ್ಧಾರ ಕೇವಲ ಸಾಹಸ ಪ್ರಿಯರಿಗೆ ಮಾತ್ರವಲ್ಲ, ಗಡಿ ಪ್ರದೇಶಗಳ ಗ್ರಾಮೀಣ ಆರ್ಥಿಕತೆಗೆ ಹೊಸ ಜೀವವನ್ನೂ ನೀಡಲಿದೆ.
5,700ರಿಂದ 7,756 ಮೀಟರ್‌ಗಳವರೆಗಿನ ಶಿಖರಗಳು ಇನ್ನು ಮುಂದೆ ಸಾಹಸ ಪ್ರವಾಸೋದ್ಯಮಕ್ಕೆ ಸಿಗಲಿವೆ. ಕಾಮೆಟ್, ನಂದಾ ದೇವಿ (ಪೂರ್ವ), ಚೌಕಂಬಾ ಗುಂಪು, ತ್ರಿಶೂಲ್ ಗುಂಪು, ಶಿವಲಿಂಗ, ಸತೋಪಂತ್, ಚಂಗಬಾಂಗ್, ಪಂಚಚುಲಿ ಮತ್ತು ನೀಲಕಂಠದಂತಹ ವಿಶ್ವಪ್ರಸಿದ್ಧ ಶಿಖರಗಳು ಇದರಲ್ಲಿವೆ.

ಶುಲ್ಕರಹಿತ ಪರ್ವತಾರೋಹಣ
ಪರ್ವತಾರೋಹಿಗಳು ಪರ್ವತಾರೋಹಣಕ್ಕಾಗಿ ಇನ್ನು ಮುಂದೆ ಯಾವುದೇ ರೀತಿಯ ಸರ್ಕಾರಿ ಶುಲ್ಕವನ್ನು ಪಾವತಿಸಬೇಕಿಲ್ಲ. ಇದರಿಂದ ದೇಶೀಯ ಪರ್ವತಾರೋಹಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಆದರೆ,ಇದರಲ್ಲಿ ಗರಿಷ್ಠ ಶುಲ್ಕಗಳು, ಕ್ಯಾಂಪಿಂಗ್ ಶುಲ್ಕಗಳು, ಹಾದಿ ನಿರ್ವಹಣೆ ಮತ್ತು ಪರಿಸರ ಶುಲ್ಕಗಳು ಸೇರಿಲ್ಲ ಎಂಬುದನ್ನು ಪರ್ವತಾರೋಹಿಗಳು ಗಮನಿಸಬೇಕಿದೆ.
ಸಿಂಗಲ್ ವಿಂಡೋ ವ್ಯವಸ್ಥೆ ಮೂಲಕ ಪರವಾನಗಿ
ಪರ್ವತಾರೋಹಣಗಳಿಗೆ ಎಲ್ಲಾ ಪರವಾನಗಿಗಳು ಉತ್ತರಾಖಂಡ ಪರ್ವತಾರೋಹಣ ಪರವಾನಗಿ ವ್ಯವಸ್ಥೆ (UKMPS)ಯ ಮೂಲಕ ಆನ್‌ಲೈನ್‌ನಲ್ಲೇ ಸಿಗಲಿದೆ. ಇದು ಅನುಮತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಜತೆಗೆ ಸಮಯವನ್ನೂ ಉಳಿಸಲಿದೆ.
ವಿದೇಶಿ ಪರ್ವತಾರೋಹಿಗಳಿಗೂ ನಿಯಮ ಸಡಿಲಿಕೆ
ಇದಲ್ಲದೆ, ವಿದೇಶಿ ಪರ್ವತಾರೋಹಿಗಳಿಗೂ ನಿಯಮಗಳನ್ನು ಸಡಿಲಿಸಲಾಗಿದ್ದು, ಅರಣ್ಯ ಇಲಾಖೆ ವಿಧಿಸುತ್ತಿದ್ದ ಎಲ್ಲಾ ಶುಲ್ಕಗಳನ್ನು ರದ್ದುಪಡಿಸಲಾಗಿದೆ. ವಿದೇಶಿ ಪರ್ವತಾರೋಹಿಗಳು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ (IMF) ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಿದರೆ ಸಾಕಾಗುತ್ತದೆ.

ಅನುಸರಿಸಬೇಕಾದ ನಿಯಮಗಳು...
ವೇಗ ಪ್ರಕ್ರಿಯೆ ಮತ್ತು ಅನುಮೋದನೆಗಳಿಗಾಗಿ ಎಲ್ಲಾ ಅರ್ಜಿಗಳನ್ನು ಆನ್'ಲೈನ್ ವ್ಯವಸ್ಥೆಯ ಮೂಲಕ ಸಲ್ಲಿಸಬೇಕು.
ಹಿಮಾಲಯ ಪರಿಸರವನ್ನು ರಕ್ಷಿಸಲು ಕಸ ನಿರ್ವಹಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಅಂತಾರಾಷ್ಟ್ರೀಯ ಸುರಕ್ಷತಾ ಮತ್ತು ಮಾರ್ಗದರ್ಶಿ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಆರ್ಥಿಕತೆಗೆ ಬೆಂಬಲ
83 ಹಿಮಾಲಯ ಶಿಖರಗಳನ್ನು ಚಾರಣಕ್ಕೆ ಮುಕ್ತವಾಗಿಸುವ ಮೂಲಕ, ರಾಜ್ಯವು ದೂರದ ಮತ್ತು ಗಡಿ ಹಳ್ಳಿಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಹೆಚ್ಚಿಸುವ ಮತ್ತು ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಜತೆಗೆ ಈ ಉಪಕ್ರಮವು ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರ ವಲಸೆಯನ್ನು ತಡೆಯಲು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ನೆರವಾಗಲಿದೆ.
ಈ ಕ್ರಮದಿಂದಾಗಿ ಚಾರಣ ಮಾರ್ಗದರ್ಶಕರು ಮತ್ತು ಪರ್ವತಾರೋಹಣ ಸಹಾಯಕರಿಗೆ ಉದ್ಯೋಗ, ಪೋರ್ಟರ್‌ಗಳು ಮತ್ತು ಲಾಜಿಸ್ಟಿಕ್ಸ್ ಸಿಬ್ಬಂದಿಗೆ ಕೆಲಸ ಸಿಗುವ ಭರವಸೆ, ಹೋಂಸ್ಟೇ ಮತ್ತು ಅತಿಥಿಗೃಹಗಳ ನಿರ್ವಾಹಕರಿಗೆ ಆದಾಯ, ಸಾರಿಗೆಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



