Solo ಟ್ರಿಪ್ ಹೋಗುತ್ತಿದ್ದೀರಾ..? ಈ ತಪ್ಪುಗಳನ್ನು ಮಾಡದಿರಿ..!
ಯಾರ ಮೇಲೂ ಅವಲಂಬನೆ ಇಲ್ಲದೆ ತಮಗೆ ತಾವೇ ನಿರ್ಧಾರ ತೆಗೆದುಕೊಂಡು ಹೊಸ ಸ್ಥಳಗಳನ್ನು ಅನ್ವೇಷಿಸುವುದು ಒಂದು ವಿಭಿನ್ನ ಅನುಭವ. ಆದರೆ ಇದೇ ಸ್ವಾತಂತ್ರ್ಯ ಕೆಲವೊಮ್ಮೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ.

ಸೋಲೋ ಟ್ರಿಪ್, ಸೋಲೋ ಟ್ರಾವೆಲ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಹೊಸ ಸ್ಥಳಗಳನ್ನು ನೋಡಲು, ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸ್ವಂತ ಅನುಭವಗಳನ್ನು ಸಂಗ್ರಹಿಸಲು ಇದು ಉತ್ತಮ ಅವಕಾಶ ನೀಡುತ್ತದೆ.
ಯಾರ ಮೇಲೂ ಅವಲಂಬನೆ ಇಲ್ಲದೆ ತಮಗೆ ತಾವೇ ನಿರ್ಧಾರ ತೆಗೆದುಕೊಂಡು ಹೊಸ ಸ್ಥಳಗಳನ್ನು ಅನ್ವೇಷಿಸುವುದು ಒಂದು ವಿಭಿನ್ನ ಅನುಭವ. ಆದರೆ ಇದೇ ಸ್ವಾತಂತ್ರ್ಯ ಕೆಲವೊಮ್ಮೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಒಬ್ಬರೇ ಇರುವ ಕಾರಣದಿಂದ ಸಣ್ಣ ತಪ್ಪುಗಳೂ ದೊಡ್ಡ ಸಮಸ್ಯೆಯಾಗಬಹುದು. ಆದ್ದರಿಂದ ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕಾಗಿ ಹೆಚ್ಚು ಜಾಗರೂಕರಾಗಿರುವುದು ಅತ್ಯಗತ್ಯ.
ನಿಮ್ಮ ಸೋಲೋ ಟ್ರಿಪ್ ನ್ನು ಸ್ಮರಣೀಯವಾಗಿಸಬೇಕೇ...? ಈ ತಪ್ಪುಗಳನ್ನು ಮಾಡದಿರಿ...
1. ಹೆಚ್ಚೆಚ್ಚು ಪ್ರವಾಸಿ ತಾಣಗಳಿಗೆ ಹೋಗಬೇಕೆಂಬುದನ್ನು ನಿಯಂತ್ರಿಸಿ

ಒಂದೇ ಪ್ರಯಾಣದಲ್ಲಿ ಎಲ್ಲವನ್ನು ನೋಡಬೇಕು ಎಂಬ ಆಸೆ ಸಹಜ. ಆದರೆ, ಅತಿಯಾದ ಯೋಜನೆ ಪ್ರಯಾಣವನ್ನು ಆನಂದಿಸುವ ಬದಲು ಒತ್ತಡಮಯವಾಗಿಸುತ್ತದೆ. ಪ್ರತಿಯೊಂದು ಗಂಟೆಯನ್ನೂ ಫಿಕ್ಸ್ ಮಾಡಿದರೆ ಸ್ವಾತಂತ್ರ್ಯದ ಅನುಭವ ಕಡಿಮೆಯಾಗುತ್ತದೆ. ಉತ್ತಮ ವಿಧಾನವೆಂದರೆ 2–3 ಪ್ರಮುಖ ಸ್ಥಳಗಳನ್ನು ಮಾತ್ರ ಆಯ್ಕೆ ಮಾಡುವುದು.
ಉಳಿದ ಸಮಯವನ್ನು ಸ್ವಲ್ಪ ಸ್ವತಂತ್ರವಾಗಿ ಬಿಡುವುದು ಉತ್ತಮ. ಸ್ಥಳೀಯರಿಂದ ಹೊಸ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವೂ ಇರುತ್ತದೆ. ಕೆಲವೊಮ್ಮೆ ನಿರೀಕ್ಷೆಯಿಲ್ಲದ ಸ್ಥಳಗಳೇ ಹೆಚ್ಚು ನೆನಪಿನಲ್ಲಿರುವ ಅನುಭವ ನೀಡುತ್ತವೆ.
2. ರಾತ್ರಿ ಪ್ರಯಾಣ ತಪ್ಪಿಸಿ

ಮಧ್ಯರಾತ್ರಿ ಹೊಸ ಸ್ಥಳಕ್ಕೆ ತಲುಪುವುದು ಒಬ್ಬರೇ ಪ್ರಯಾಣಿಸುವುದು ಹೆಚ್ಚು ಅಪಾಯಕಾರಿಯಾಗಬಹುದು. ಸಾರಿಗೆ ಕಡಿಮೆ ಇರುವ ಸಮಯದಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾಧ್ಯವಾದರೆ ಹಗಲು ವೇಳೆಯಲ್ಲಿ ತಲುಪುವಂತೆ ಪ್ರಯಾಣ ಯೋಜಿಸಬೇಕು.
ತುರ್ತು ಪರಿಸ್ಥಿತಿಯಲ್ಲಿ ಜನಸಂದಣಿ ಇರುವ ಸ್ಥಳಗಳು ಅಥವಾ ಪೊಲೀಸ್ ಸಹಾಯ ಲಭ್ಯವಿರುವ ಪ್ರದೇಶಗಳನ್ನು ಆಯ್ಕೆ ಮಾಡುವುದು ಸುರಕ್ಷಿತ.
3. ಅತಿಯಾಗಿ ಮಾಹಿತಿ ಹಂಚಿಕೊಳ್ಳದಿರಿ

ಹೊಸ ಸ್ಥಳದಲ್ಲಿ ಕೆಲವರು ಸ್ನೇಹಪರವಾಗಿ ಮಾತನಾಡಬಹುದು. ಆದರೆ ಎಲ್ಲರಿಗೂ ನಿಮ್ಮ ಪ್ರಯಾಣ ಯೋಜನೆ, ಹೋಟೆಲ್ ವಿವರ ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದು ಸುರಕ್ಷಿತವಲ್ಲ.
ಪ್ರವಾಸಿಗರೆಂದು ತಿಳಿದ ಕೂಡಲೇ ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅನಗತ್ಯವಾಗಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದೆ ಎಚ್ಚರಿಕೆವಹಿಸಿ.
4. ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ

ಪಾಸ್‌ಪೋರ್ಟ್, ಐಡಿ ಕಾರ್ಡ್, ಟಿಕೆಟ್ ಮುಂತಾದ ದಾಖಲೆಗಳನ್ನು ಟ್ರಾವೆಲ್ ಬ್ಯಾಗ್‌ನಲ್ಲಿ ಇಡುವುದು ಅಪಾಯಕಾರಿಯಾಗಬಹುದು. ಬ್ಯಾಗ್ ಕಳೆದುಹೋದರೆ ಅಥವಾ ಕಳ್ಳತನವಾದರೆ ದೊಡ್ಡ ತೊಂದರೆ ಉಂಟಾಗುತ್ತದೆ.
ಆದ್ದರಿಂದ ಕೆಲವು ಪ್ರಮುಖ ದಾಖಲೆಗಳನ್ನು ನಿಮ್ಮೊಂದಿಗೆ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ. ಜೊತೆಗೆ ಅವುಗಳ ಫೋಟೋ ಅಥವಾ ಡಿಜಿಟಲ್ ಪ್ರತಿಗಳನ್ನು ಮೊಬೈಲ್‌ನಲ್ಲಿ ಮತ್ತು ಪ್ರತ್ಯೇಕವಾಗಿ ಬ್ಯಾಕಪ್ ಆಗಿ ಇಡುವುದು ಅಗತ್ಯ.
5. ಸಂಪರ್ಕದಲ್ಲಿರಿ

ಒಬ್ಬರೇ ಪ್ರಯಾಣಿಸುವಾಗ ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಬಹಳ ಮುಖ್ಯ. ನೀವು ಎಲ್ಲಿದ್ದೀರಿ, ಯಾವ ಕಡೆ ಹೋಗುತ್ತಿದ್ದೀರಿ ಎಂಬ ಮಾಹಿತಿಯನ್ನು ಹಂಚಿಕೊಳ್ಳಿ. ಯೋಜನೆಯಲ್ಲಿ ಬದಲಾವಣೆಗಳಾದರೆ ತಕ್ಷಣ ತಿಳಿಸಿ. ಜೊತೆಗೆ ತುರ್ತು ಸಂಪರ್ಕ ಸಂಖ್ಯೆಗಳು ಹಾಗೂ ಅಗತ್ಯ ಸಹಾಯ ಸೇವೆಗಳ ವಿವರಗಳನ್ನು ಯಾವಾಗಲೂ ಕೈಯಲ್ಲಿಟ್ಟುಕೊಂಡಿರಿ.
6. ಡಿಜಿಟಲ್ ಪಾವತಿ ಮೇಲೆ ಹೆಚ್ಚು ಅವಲಂಬಿತರಾಗದಿರಿ

ಡಿಜಿಟಲ್ ಪಾವತಿಗಳು ಎಲ್ಲೆಡೆ ಲಭ್ಯವಿರುವುದಿಲ್ಲ. ವಿಶೇಷವಾಗಿ ಹಳ್ಳಿಗಳು ಅಥವಾ ದೂರದ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಪಾವತಿ ಸಾಧ್ಯವಾಗದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ನಗದು ಹಣ ಅತ್ಯಂತ ಸಹಾಯಕ. ಆದ್ದರಿಂದ ಸ್ವಲ್ಪ ಪ್ರಮಾಣದ cash ಅನ್ನು ಸದಾ ಜೊತೆ ಇಟ್ಟುಕೊಳ್ಳುವುದು ಸುರಕ್ಷಿತ
7. ಸ್ಥಳೀಯ ಸಂಸ್ಕೃತಿ-ಆಚರಣೆಗಳ ನಿರ್ಲಕ್ಷಿಸದಿರಿ

ಹೊಸ ಸ್ಥಳದ ಸಂಸ್ಕೃತಿ, ಆಚರಣೆಗಳು ಮತ್ತು ಶಿಷ್ಟಾಚಾರಗಳನ್ನು ಗೌರವಿಸುವುದು ಬಹಳ ಮುಖ್ಯ. ದೇವಸ್ಥಾನಗಳು ಅಥವಾ ಧಾರ್ಮಿಕ ಸ್ಥಳಗಳಲ್ಲಿ ಉಡುಪು ನಿಯಮಗಳು ಇರಬಹುದು. ಕೆಲವು ಸ್ಥಳಗಳಲ್ಲಿ ನಡೆದುಕೊಳ್ಳುವ ರೀತಿಯೂ ವಿಭಿನ್ನವಾಗಿರುತ್ತದೆ. ಸ್ಥಳೀಯ ಸಂಸ್ಕೃತಿಗೆ ಹೊಂದಿಕೊಳ್ಳುವುದರಿಂದ ನೀವು ಹೆಚ್ಚು ಗೌರವ ಪಡೆಯುತ್ತೀರಿ. ಇದರಿಂದ ನಿಮ್ಮ ಪ್ರಯಾಣವೂ ಸುಗಮವಾಗುತ್ತದೆ.
ಪ್ರಯಾಣವನ್ನು ಎಚ್ಚರಿಕೆ, ಯೋಜನೆ ಮತ್ತು ಜಾಗರೂಕತೆಯೊಂದಿಗೆ ಮಾಡಿದರೆ ಜೀವನದ ಅತ್ಯಂತ ಸ್ಮರಣೀಯ ಅನುಭವವಾಗುತ್ತದೆ. ಸ್ವಲ್ಪ ಎಚ್ಚರಿಕೆ ಮತ್ತು ಬುದ್ಧಿವಂತಿಕೆ ಇದ್ದರೆ ನಿಮ್ಮ solo trip ಸುರಕ್ಷಿತವಾಗಿಯೂ, ಆನಂದಕರವಾಗಿಯೂ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


