ಪ್ರಧಾನ ಸುದ್ದಿ

ನೋಟು ನಿಷೇಧದ ಬಳಿಕವೂ ಭಾರತದ ಅರ್ಥಿಕತೆ ದೃಢವಾಗಿದೆ: ವಿಶ್ವಬ್ಯಾಂಕ್

ಕೇಂದ್ರ ಸರ್ಕಾರದ ನೋಟು ನಿಷೇಧದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಾಗ್ದಾಳಿ ಮುಂದುವರೆಸಿರುವಂತೆಯೇ ಅತ್ತ ವಿಶ್ವಬ್ಯಾಂಕ್ ಮಾತ್ರ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಭಾರತದ ಆರ್ಥಿಕತೆ ದೃಢವಾಗಿದೆ ಎಂದು ಹೇಳಿದೆ.

ನೋಟು ನಿಷೇಧದ ಬಳಿಕವೂ ಭಾರತದ ಅರ್ಥಿಕತೆ ದೃಢವಾಗಿದೆ: ವಿಶ್ವಬ್ಯಾಂಕ್
ಸಂಗ್ರಹ ಚಿತ್ರ
Published On :

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಾಗ್ದಾಳಿ ಮುಂದುವರೆಸಿರುವಂತೆಯೇ ಅತ್ತ ವಿಶ್ವಬ್ಯಾಂಕ್ ಮಾತ್ರ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಭಾರತದ ಆರ್ಥಿಕತೆ ದೃಢವಾಗಿದೆ ಎಂದು ಹೇಳಿದೆ.

ಬುಧವಾರ ವಿಶ್ವಬ್ಯಾಂಕ್ ತನ್ನ ವಿಶ್ವ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ನೋಟು ನಿಷೇಧದ ಹೊರತಾಗಿಯೂ ಭಾರತದ ಆರ್ಥಿಕತೆ ದೃಢವಾಗಿದೆ. ನೋಟು ನಿಷೇಧದ ಪರಿಣಾಮ ಭಾರತದ ಜಿಡಿಪಿ ದರ 7.6ರಿಂದ 7ಕ್ಕೆ ಕುಸಿತವಾಗಿದ್ದರೂ, ಮುಂದಿನ ದಿನಗಳಲ್ಲಿ ಇದು ಚೇತರಿಸಿಕೊಳ್ಳಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ನೋಟು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕ್ರಮವನ್ನು ಶ್ಲಾಘಿಸಿರುವ ವಿಶ್ವಬ್ಯಾಂಕ್ ಇದೊಂದು ದೂರಗಾಮಿ ಆಲೋಚನೆಯಾಗಿದ್ದು, ನೋಟು ನಿಷೇಧದಿಂದ ಭಾರತಕ್ಕೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ. ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.80 ನೋಟುಗಳನ್ನು ದಿಢೀರ್ ರದ್ದುಗೊಳಿಸಿದ್ದರಿಂದ 2016-17ನೇ ಸಾಲಿನ ಆರ್ಥಿಕ ಅಭಿವೃದ್ಧಿಯಲ್ಲಿ ಕೊಂಚ ಹಿನ್ನಡೆ ಉಂಟಾಗಬಹುದಾದರೂ ಮುಂಬರುವ ವರ್ಷಗಳಲ್ಲಿ ಶೇ.7.6ರಿಂದ ಶೇ.7.8 ಪ್ರಗತಿ ದಾಖಲಿಸುವ ಮೂಲಕ ಭಾರತದ ಆರ್ಥಿಕತೆ ಚೇತರಿಕೆ ಕಾಣಲಿದೆ. ಮಾರ್ಚ್ ನಂತರ ಭಾರತದ ಆರ್ಥಿಕತೆಯ ಪರಿಸ್ಥಿತಿಯಲ್ಲಿ ಸುಧಾರಣೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ವಿಶ್ವಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿರುವ  ವಿಶ್ವ ಆರ್ಥಿಕ ನಿರೀಕ್ಷೆಗಳ ಕುರಿತ ವರದಿಯಲ್ಲಿ  "ನೋಟು ನಿಷೇಧದ ದೂರಗಾಮಿ ಪರಿಣಾಮಗಳು ಭಾರತದ ಆರ್ಥಿಕತೆಗೆ ಅನುಕೂಲಕರವಾಗಿರಲಿದ್ದು, ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿದೆ. ನೋಟು ನಿಷೇಧದಿಂದ ದೇಶದ ಆರ್ಥಿಕತೆಯಲ್ಲಿ ಶೇ.0.6ರಷ್ಟು ಹಿನ್ನಡೆ ಉಂಟಾಗಿದ್ದರೂ ಅದು ದೀರ್ಘಾವಧಿಯ ಸಕಾರಾತ್ಮಕ ಪರಿಣಾಮ ಒಳಗೊಂಡಿದೆ. ಆರ್ಥಿಕ ಸುಧಾರಣೆಗೆ ಭಾರತ ಕೈಗೊಂಡ ಕ್ರಮಗಳು ಉತ್ತಮವಾಗಿದ್ದು, ಅದು ಉತ್ಪಾದನೆ ಹಾಗೂ ಪೂರೈಕೆ ಪ್ರಮಾಣ ಹೆಚ್ಚಿಸಲಿದೆ. ಬ್ಯಾಂಕುಗಳಿಗೆ ಹಣದ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸಾಲದ ಮೇಲಿನ ಬಡ್ಡಿ ದರವೂ ಕಡಿಮೆಯಾಗಿದೆ. ಮೂಲ ಸೌಕರ್ಯಗಳ ಸುಧಾರಣೆಯಿಂದ ಭಾರತದ ಮೇಲೆ ಹೂಡಿಕೆದಾರರ ಒಲವು ಹೆಚ್ಚುತ್ತದೆ. ಪರಿಣಾಮವಾಗಿ 2018-19ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ಚೇತರಿಕೆ ಕಂಡು 2019-20ರ ಸಾಲಿನಲ್ಲಿ 7.8ರಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದೆ.

ಮೇಕ್ ಇನ್ ಇಂಡಿಯಾಗೆ ಮೆಚ್ಚುಗೆ
ಮೂಲಭೂತ ಸೌಕರ್ಯಗಳ ಸುಧಾರಣೆಯಿಂದ ವ್ಯವಹಾರದ ಬೇಡಿಕೆ ಹೆಚ್ಚಲಿದ್ದು, ಹೂಡಿಕೆದಾರರನ್ನು ಬೃಹತ್ ಪ್ರಮಾಣದಲ್ಲಿ ಆಕರ್ಷಿಸಲಿದೆ. ಭಾರತದ ಮೇಕ್ ಇನ್ ಇಂಡಿಯಾ ಅಭಿಯಾನದಿಂದ ಉತ್ಪಾದನಾ ವಲಯಕ್ಕೆ ಉತ್ತಮ ನೆರವಾಗಲಿದೆ. ಸ್ಥಳೀಯ ಸಂಸ್ಥೆಗಳು ಹಾಗೂ ಬೇಡಿಕೆಗಳು ಇದಕ್ಕೆ ನೆರವು ನೀಡಲಿವೆ. ಸಾಧಾರಣ ಪ್ರಮಾಣದ ಹಣದುಬ್ಬರ, ಉದ್ಯೋಗಸ್ಥರ ವೇತನ ಹೆಚ್ಚಳ ಮತ್ತಿತರರ ಬೆಳವಣಿಗೆಗಳಿಂದ ಜನಸಾಮಾನ್ಯರ ಆದಾಯ ಹಾಗೂ ಖರ್ಚಿನ ನಡುವೆ ಸಮತೋಲನ ಮೂಡಿಸಲು ನೆರವಾಗಲಿದೆ.

ಮಳೆಯಾದರೆ ಕೃಷಿ ಕ್ಷೇತ್ರದಲ್ಲೂ ಅಭಿವೃದ್ಧಿ

ಉತ್ತಮ ಮುಂಗಾರು ಮಳೆಯಾದಲ್ಲಿ ಕೃಷಿ ಚಟುವಟಿಕೆ ಗರಿಗೆದರಲಿದ್ದು, ಅದು ಕೂಡ ಆರ್ಥಿಕತೆಯ ಅಭಿವೃದ್ಧಿಗೆ ನೆರವಾಗಲಿದೆ. ನೋಟು ನಿಷೇಧದ ನಂತರ ಬ್ಯಾಂಕುಗಳಿಗೆ ಹಣಕಾಸಿನ ಹರಿವು ಹೆಚ್ಚಾಗಿದೆ. ಕಡಿಮೆ ಸಾಲದ ದರ ನಿಗದಿಯಾಗಲಿದ್ದು, ಆರ್ಥಿಕ ಚಟುವಟಿಕೆ ಸುಧಾರಿಸಲಿದೆ ಎಂದು ವರದಿ ವಿಶ್ಲೇಷಿಸಿದೆ.

2016ರ ನವೆಂಬರ್​ನಲ್ಲಿ ಪ್ರಥಮ ವರದಿ ಬಿಡುಗಡೆ ಮಾಡಿದ್ದ ವಿಶ್ವಬ್ಯಾಂಕ್, 2017ರಲ್ಲಿ ಭಾರತದ ಆರ್ಥಿಕತೆ ಶೇ.7ಕ್ಕೆ ಕುಸಿಯಲಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೊಂದರೆ ಉಂಟಾಗುವುದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.