ಪ್ರಧಾನ ಸುದ್ದಿ

ಚಿನ್ನಮ್ಮ ಈಗ ಕೈದಿ ನಂಬರ್ 9234, ಶಶಿಕಲಾ ಕೋರಿದ ಯಾವುದೇ ಬೇಡಿಕೆ ಈಡೇರಿಸದ ಕೋರ್ಟ್!

ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಅಪರಾಧಿ ಎಂದು ಸುಪ್ರೀಂ ಕೋರ್ಟ್ ನಿಂದ ಘೋಷಿತವಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಇದೀಗ ಪರಪ್ಪನ ಅಗ್ರಹಾರ ಜೈಲಿನ ಸಾಮಾನ್ಯ ಕೈದಿಯಾಗಿದ್ದಾರೆ. ಚಿನ್ನಮ್ಮನಿಗೆ ಕೈದಿ ಸಂಖ್ಯೆ ನೀಡಲಾಗಿದ್ದು, ಶಶಿಕಲಾ ಈಗ ಕೈದಿ ಸಂಖ್ಯೆ 9234...

ಚಿನ್ನಮ್ಮ ಈಗ ಕೈದಿ ನಂಬರ್ 9234, ಶಶಿಕಲಾ ಕೋರಿದ ಯಾವುದೇ ಬೇಡಿಕೆ ಈಡೇರಿಸದ ಕೋರ್ಟ್!
ಸಂಗ್ರಹ ಚಿತ್ರ
Published On :

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಅಪರಾಧಿ ಎಂದು ಸುಪ್ರೀಂ ಕೋರ್ಟ್ ನಿಂದ ಘೋಷಿತವಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಇದೀಗ ಪರಪ್ಪನ ಅಗ್ರಹಾರ ಜೈಲಿನ ಸಾಮಾನ್ಯ  ಕೈದಿಯಾಗಿದ್ದಾರೆ. ಚಿನ್ನಮ್ಮನಿಗೆ ಕೈದಿ ಸಂಖ್ಯೆ ನೀಡಲಾಗಿದ್ದು, ಶಶಿಕಲಾ ಈಗ ಕೈದಿ ಸಂಖ್ಯೆ 9234...

ನಿನ್ನೆ ಬೆಳಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಶಶಿಕಲಾ ಅವರ ಶರಣಾಗತಿಗೆ ಕಾಲಾವಕಾಶ ನೀಡಲು ನಿರಾಕರಿಸಿದ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿದ ಶಶಿಕಲಾ, ಪರಪ್ಪನ ಅಗ್ರಹಾರದಲ್ಲಿ ವಿಶೇಷ ಕೋರ್ಟ್ ಗೆ ಹಾಜರಾಗಿ  ಶರಣಾದರು. ಶಶಿಕಲಾ ಅವರೊಂದಿಗೆ ಪ್ರಕರಣದ ಮೂರನೇ ಆರೋಪಿಯಾಗಿರುವ ಜೆ ಇಳವರಿಸಿ ಕೂಡ ಕೋರ್ಟ್ ಗೆ ಬಂದು ಶರಣಾದರು. ಈ ವೇಳೆ ನ್ಯಾಯಾಧೀಶರಾದ ಅಶ್ವಥ ನಾರಾಯಣ ಅವರು ಶಶಿಕಲಾ ಮತ್ತು ಇಳವರಿಸಿ  ಅವರನ್ನು ಜೈಲಿಗೆ ಕಳುಹಿಸುವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.

ಚಿನ್ನಮ್ಮ ಕೈದಿ ನಂಬರ್ 9234, ಇಳವರಿಸಿ ಕೈದಿ ನಂಬರ್ 9235
ಇನ್ನು ಶಶಿಕಲಾ ಅವರನ್ನು ಜೈಲಿಗೆ ಕಳುಹಿಸುವ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಅತ್ತ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಚಿನ್ನಮ್ಮ ಹಾಗೂ ಇಳವರಸಿ ಅವರನ್ನು ವಶಕ್ಕೆ ಪಡೆದರು. ಅಲ್ಲದೆ ಇಬ್ಬರಿಗೂ ಕೈದಿ  ಸಂಖ್ಯೆಗಳನ್ನು ನೀಡಿದರು. ಶಶಿಕಲಾಗೆ ಕೈದಿ ಸಂಖ್ಯೆ 9234 ನೀಡಿದರೆ ಇಳವರಿಸಿಗೆ 9235 ನಂಬರ್ ನೀಡಿದರು. ಅಂತೆಯೇ ಪ್ರಕರಣದ ಮತ್ತೋರ್ವ ಅಪರಾಧಿ ಸುಧಾಕರನ್'​ಗೆ 9236 ನೀಡಲಾಗಿದೆ. ಇನ್ನು ಎಐಎಡಿಎಂಕೆ ಪಕ್ಷದ  ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 3 ಬಿಳಿಸೀರೆ, 1 ತಟ್ಟೆ, 1 ಚೆಂಬು, 1 ಜಮಖಾನ, 1 ದಿಂಬು, 1 ಬ್ಲಾಂಕೆಟ್​'ಗಳನ್ನು ನೀಡಲಾಗಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗಿರುವ  ಸವಲತ್ತುಗಳನ್ನೇ ಶಶಿಕಲಾ ಅವರಿಗೂ ನೀಡಲಾಗಿದೆ.

ಶಶಿಕಲಾ ಅವರನ್ನು ನೋಡಿಕೊಳ್ಳಲು ಇಬ್ಬರು ಮಹಿಳಾ ಪೇದೆಗಳನ್ನು ನಿಯೋಜಿಸಲಾಗಿದ್ದು, ಬೆಳಗ್ಗೆ 6.30ಕ್ಕೆ ಎರಡು ಮೊಟ್ಟೆ ಅನ್ನ ಸಾಂಬಾರ್, ಮಧ್ಯಾಹ್ನ ಊಟ 11.30ಕ್ಕೆ, 4 ಗಂಟೆಗೆ ಟೀ ಅಥವಾ ಕಾಫಿ, ಸಂಜೆ 6.30ಕ್ಕೆ ಮೊಟ್ಟೆ  ಚಪಾತಿ ನೀಡಲಾಗುತ್ತದೆ. ಕಾರಾಗೃಹದಲ್ಲಿ ಮಹಿಳೆಯರಿಗೆ ಇರುವ ಅಗರಬತ್ತಿ ತಯಾರಿಸುವುದು, ಕ್ಯಾಂಡಲ್ ತಯಾರಿಕೆ ಅಥವಾ ಬಟ್ಟೆ ನೇಯ್ಗೆ, ಇವುಗಳಲ್ಲಿ ಒಂದನ್ನು ಆರಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ವಾರಕ್ಕೆ ಒಂದು  ದಿನ ರಜೆ ನೀಡುವುದರ ಜತೆಗೆ ಮಾಡುವ ಕೆಲಸಕ್ಕೆ ದಿನಕ್ಕೆ 50 ರು. ದಿನಗೂಲಿ ಕೊಡಲಾಗುತ್ತದೆ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶಶಿಕಲಾ ಇಟ್ಟಿದ್ದ ಎಲ್ಲ ಬೇಡಿಕೆ ತಿರಸ್ಕರಿಸಿದ ನ್ಯಾಯಾಧೀಶರು
ಇದಕ್ಕೂ ಮೊದಲು ನಡೆದ ಕಾನೂನು ಪ್ರಕ್ರಿಯೆ ವೇಳೆ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಅಶ್ವಥ ನಾರಾಯಣ ಅವರು, ಶಶಿಕಲಾ ಅವರನ್ನು ಜೈಲಿಗೆ ಕಳುಹಿಸುವ ವೇಳೆ ಅವರು ಮುಂದಿಟ್ಟಿದ್ದ ಎಲ್ಲ ಬೇಡಿಕೆಗಳನ್ನು  ತಿರಸ್ಕರಿಸಿದರು. ಶಶಿಕಲಾ ಮತ್ತು ಇಳವರಸಿ ನ್ಯಾಯಾಧೀಶರ ಮುಂದೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡರು. ಆದರಂತೆ ತಮಗೆ ಎ ಕ್ಲಾಸ್ ಸೆಲ್ ಕೊಡಬೇಕು, ಅನಾರೋಗ್ಯ ಕಾಡುತ್ತಿರುವ  ಹಿನ್ನಲೆಯಲ್ಲಿ ಉತ್ತಮ ಸೌಲಭ್ಯವುಳ್ಳ ಪೀಠೋಪಕರಣವನ್ನು ಕೊಡಬೇಕು ಹಾಗೂ ಧ್ಯಾನ ಮತ್ತು ಯೋಗಕ್ಕೆ ವಿಶೇಷ ಜಾಗದ ಮಂಜೂರು ಮಾಡಬೇಕು ಎಂಬ ಬೇಡಿಕೆ ಇಟ್ಟರು. ಆದರೆ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು  ನ್ಯಾಯಾಧೀಶರು ನಿರಾಕರಿಸಿದರಾದರೂ, ಎ ಕ್ಲಾಸ್ ಸೆಲ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ನೀವು ಜೈಲಾಧಿಕಾರಿಗಳನ್ನೇ ಕೇಳಿ ಎಂದು ನ್ಯಾಯಾಧೀಶರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.