ಪ್ರಧಾನ ಸುದ್ದಿ

ಬ್ರೆಕ್ಸಿಟ್ ಜನಮತ; ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ!

ಬಹು ನಿರೀಕ್ಷಿತ ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶ ಹೊರಬೀಳುತ್ತಿದ್ದು, ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಪರವಾಗಿ ಸುಮಾರು ಷೇ.52ರಷ್ಟು ಮತಗಳು ಲಭಿಸಿವೆ ಎಂದು ಮೂಲಗಳು ತಿಳಿಸಿವೆ.

ಬ್ರೆಕ್ಸಿಟ್ ಜನಮತ; ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ!
ನಿಗೆಲ್ ಫರಾಗೆ ಮತ್ತು ಡೇವಿಡ್ ಕೆಮರಾನ್ (ಸಂಗ್ರಹ ಚಿತ್ರ)
Published On :

ಲಂಡನ್: ಬಹು ನಿರೀಕ್ಷಿತ ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶ ಹೊರಬೀಳುತ್ತಿದ್ದು, ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಪರವಾಗಿ ಸುಮಾರು ಷೇ.52ರಷ್ಟು ಮತಗಳು  ಲಭಿಸಿವೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಬ್ರೆಕ್ಸಿಟ್ ಪರ ಮತ ಚಲಾಯಿಸಿದ್ದು, ಸ್ಕಾಟ್ಲೆಂಡ್, ಲಂಡನ್ ಮತ್ತು ಉತ್ತರ ಐರ್ಲೆಂಡ್ ಬ್ರೆಕ್ಸಿಟ್ ಗೆ ವಿರೋಧವಾಗಿ ಮತಚಲಾವಣೆ ಮಾಡಿದೆ ಎಂದು  ಹೇಳಲಾಗುತ್ತಿದೆ. ಬ್ರೆಕ್ಸಿಟ್ ಚುನಾವಣೆಯ ಸಂಪೂರ್ಣ ಫಲಿತಾಂಶದ ವಿವರ ಇನ್ನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಪ್ರಸ್ತುತ ಲಭಿಸಿರುವ ಮಾಹಿತಿಗಳ ಪ್ರಕಾರ  ಐತಿಹಾಸಿಕ ಬ್ರೆಕ್ಸಿಟ್ ಜನಮತ ಸಂಗ್ರಹದಲ್ಲಿ ಶೇ.52ರಷ್ಚು ಮತಗಳು ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಗುಳಿಯುವ ಪರ ನಿರ್ಣಯ ಕೈಗೊಂಡಿದ್ದು, ಶೇ.48ರಷ್ಟು ಮಂದಿ  ಯೂರೋಪಿಯನ್ ಒಕ್ಕೂಟದಲ್ಲೇ ಉಳಿಯುವ ಕುರಿತು ನಿರ್ಣಯ ಕೈಗೊಂಡಿದ್ದಾರೆ.

ಇನ್ನು ಈ ಫಲಿತಾಂಶದ ಕುರಿತಂತೆ ಪ್ರತಿಕ್ರಿಯಿಸಿರುವ ಬ್ರೆಕ್ಸಿಟ್ ಪರ ಬಣ ಇದನ್ನು ಸ್ವಾತಂತ್ರ್ಯ ದಿನ ಎಂದು ಬಣ್ಣಿಸಿದ್ದು, ಬ್ರೆಕ್ಸಿಟ್ ವಿರೋಧಿ ಅಭಿಯಾನ ನಡೆಸಿದ್ದ ಪ್ರಧಾನಿ ಕೆಮರಾನ್ ಪರ ಬಣ ಫಲಿತಾಂಶವನ್ನು ದೊಡ್ಡ ದುರಂತ ಎಂದು ಟೀಕಿಸಿದೆ. ಇಡೀ ವಿಶ್ವದ ಗಮನ ಸೆಳೆದಿದ್ದ ಮತ್ತು ಅಂತಾರಾಷ್ಟ್ರೀಯ ಷೇರುಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಈ ಚುನಾವಣೆಯಲ್ಲಿ ಸುಮಾರು 30 ಮಿಲಿಯನ್ ಮಂದಿ ಮತಚಲಾವಣೆ ಮಾಡಿದ್ದರು.

ಯೂರೋಪಿಯನ್ ಒಕ್ಕೂಟದಿಂದ ಹೊರಗುಳಿಯುತ್ತಿರುವ ಮೊದಲ ದೇಶ ಬ್ರಿಟನ್
28 ರಾಷ್ಟ್ರಗಳನ್ನೊಳಗೊಂಡ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಅಧಿಕೃತವಾಗಿ ಹೊರಗುಳಿಯುತ್ತಿರುವ ಮೊದಲ ದೇಶ ಎಂದು ಹೇಳಲಾಗುತ್ತಿದ್ದು. ಒಕ್ಕೂಟ ಸ್ಥಾಪನೆಯಾದಾಗಿನಿಂದ ಈ ವರೆಗೂ ಯಾವುದೇ ರಾಷ್ಟ್ರ ಒಕ್ಕೂಟದಿಂದ ಹೊರನಡೆದಿರಲಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಒಕ್ಕೂಟ ಸೇರಿದ 43 ವರ್ಷಗಳ ಬಳಿಕ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರ ನಡೆಯುತ್ತಿದೆ.

ಕೆಮರಾನ್ ರಾಜಿನಾಮೆಗೆ ಆಗ್ರಹ
ಇನ್ನು ಬ್ರೆಕ್ಸಿಟ್ ವಿರುದ್ಧವಾಗಿ ಅಭಿಯಾನ ನಡೆಸಿದ್ದ ಬ್ರಿಟನ್ ಪ್ರಧಾನಿ ಕೆಮರಾನ್ ರಾಜಿನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಜನಮತ ಸಂಗ್ರಹದಲ್ಲಿ ಕೆಮರಾನ್ ನಿರ್ಣಯ ತಪ್ಪು ಎಂದು  ಜನತೆ ನಿರ್ಧರಿಸಿದ್ದಾರೆ. ಹೀಗಾಗಿ ಕೆಮರಾನ್ ರಾಜಿನಾಮೆ ನೀಡಬೇಕು ಎಂದು ಬ್ರೆಕ್ಸಿಟ್ ಪರ ಬಣದ ನಾಯಕ ನಿಗೆಲ್ ಫರಾಗೆ ಹೇಳಿದ್ದಾರೆ. ಇನ್ನು ಪ್ರತಿಪಕ್ಷಗಳ ಆಗ್ರಹದ ಹೊರತಾಗಿಯೂ  ಯುನೈಟೆಡ್ ಕಿಂಗ್ ಡಮ್ ಗೆ ಕೆಮರಾನ್ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.