ಪ್ರಧಾನ ಸುದ್ದಿ

ಬಂದ್ ಎಫೆಕ್ಟ್: ಐದು ಸಾವಿರ ಕೋಟಿ ವಹಿವಾಟು ಬಂದ್

ಕರ್ನಾಟಕ ಈ ತಿಂಗಳೊಂದರಲ್ಲೇ ಮೂರು ಬಂದ್ ಗಳಿಗೆ ಸಾಕ್ಷಿಯಾಗಿದೆ. ತಿಂಗಳ ಮೊದಲ ವಾರದಲ್ಲಿ ಕಾರ್ಮಿಕ ಸಂಘಟನೆಗಳು, ಕಬ್ಬು ಬೆಳೆಗಾರರು ಮುಷ್ಕರ ನಡೆಸಿದರೆ, ಮಹದಾಯಿ ನೀರಿಗಾಗಿ ರಾಜ್ಯದ...

ಬಂದ್ ಎಫೆಕ್ಟ್: ಐದು ಸಾವಿರ ಕೋಟಿ ವಹಿವಾಟು ಬಂದ್
ಕರ್ನಾಟಕ ಬಂದ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಕರ್ನಾಟಕ ಈ ತಿಂಗಳೊಂದರಲ್ಲೇ ಮೂರು ಬಂದ್ ಗಳಿಗೆ ಸಾಕ್ಷಿಯಾಗಿದೆ. ತಿಂಗಳ ಮೊದಲ ವಾರದಲ್ಲಿ ಕಾರ್ಮಿಕ ಸಂಘಟನೆಗಳು, ಕಬ್ಬು ಬೆಳೆಗಾರರು ಮುಷ್ಕರ ನಡೆಸಿದರೆ,  ಮಹದಾಯಿ ನೀರಿಗಾಗಿ ರಾಜ್ಯದ ಬಹುತೇಕ ಎಲ್ಲ ಸಂಘಟನೆಗಳು ಶನಿವಾರ ಬಂದ್ ಆಚರಿಸಿದವು.

ಈ ಬಂದ್‍ಗಳ ಹಿಂದಿನ ಉದ್ದೇಶ ಒಳ್ಳೆಯದೇ ಆಗಿದ್ದರೂ ಇದು ಒಂದು ಕಡೆ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೆ ಮತ್ತೊಂದು ಕಡೆ ರಾಜ್ಯದಲ್ಲಿ ಕನಿಷ್ಠವೆಂದರೂ ರು.15 ಸಾವಿರ  ಕೋಟಿಗೂ ಹೆಚ್ಚು ವಹಿವಾಟು ನಷ್ಟಕ್ಕೆ ಕಾರಣವಾಗಿದೆ. ಶನಿವಾರ ಒಂದೇ ದಿನ ರು.5 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಸಾರಿಗೆ, ಹೋಟೆಲ್, ಸಣ್ಣ ಮತ್ತು ಬೃಹತ್ ಕೈಗಾರಿಕೆ,  ಚಿತ್ರೋದ್ಯಮ, ಸೇವಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳೂ ಭಾರಿ ನಷ್ಟಕ್ಕೆ ಗುರಿಯಾಗಿವೆ. ಇನ್ನು ವಹಿವಾಟು ನಡೆಯದಿದ್ದಾಗ ರಾಜ್ಯದ ಬೊಕ್ಕಸಕ್ಕೆ ಬರಬೇಕಾದ ತೆರಿಗೆಗೂ ಖೋತಾ  ಬೀಳಲಿದೆ.

ರಾಜ್ಯದಲ್ಲಿನ ಹಲವು ಕ್ಷೇತ್ರಗಳಿಗೆ ಸಂಬಂಧಿಸಿ ಆಗಿರುವ ವಹಿವಾಟು ನಷ್ಟದ ಅಂದಾಜು ಲೆಕ್ಕ ಇಲ್ಲಿದೆ.
ರಾಜ್ಯದಲ್ಲಿನ ಸಣ್ಣ ಕೈಗಾರಿಕೆಗಳ ವಹಿವಾಟು ಮಾತ್ರವೇ ವಾರ್ಷಿಕ ರು.30 ಸಾವಿರ ಕೋಟಿಯಷ್ಟಿದೆ. ಇನ್ನು ಬಿಎಚ್ ಇಎಲ್, ಬಿಇಎಲ್, ಬಿಇಎಂಎಲ್, ಎಂಆರ್‍ಪಿಎಲ್, ಸಿಮೆಂಟ್, ಉಕ್ಕು  ತಯಾರಿಕೆಯಂತಹ ಬೃಹತ್ ಕೈಗಾರಿಕೆಗಳು ಕಾರ್ಯಾಚರಣೆ ನಡೆಸಿಲ್ಲ. ಇಲ್ಲಿ ಒಂದೊಂದು ಕಂಪನಿಯ ವಾರ್ಷಿಕ ವಹಿವಾಟು ಲಕ್ಷಾಂತರ ಕೋಟಿ ಇದೆ. ಬೆಂಗಳೂರು ನಗರದಲ್ಲಿ ಮಾತ್ರವೇ 6   ಸಾವಿರಕ್ಕಿಂತಲೂ ಹೆಚ್ಚು ನೋಂದಾಯಿತ ಹೋಟೆಲ್‍ಗಳಿವೆ. ಇವುಗಳ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾರಿಗೆ ಕ್ಷೇತ್ರ ಅತಿ ಹೆಚ್ಚು ನಷ್ಟಕ್ಕೆ ಗುರಿಯಾಗುವ ಮತ್ತೊಂದು ವಲಯವಾಗಿದೆ.

ನಗರದ ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ ಸಾವಿರಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ. ಬಂದ್ ದಿನ ಯಾವೊಂದು ಕೈಗಾರಿಕೆಯೂ ನಡೆಯುವುದಿಲ್ಲ. ಇಲ್ಲಿನ  ಕೈಗಾರಿಕೆಗಳ ಒಂದು ದಿನದ ವಹಿವಾಟು ರು.100 ಕೋಟಿ. ಇಲ್ಲಿನ ಕಾರ್ಖಾನೆಗಳಿಗೆ ಅಗತ್ಯವಾದ ಉತ್ಪನ್ನಗಳನ್ನು ಸರಬರಾಜು ಮಾಡುವ ಸೇವಾವಲಯವೂ ಇಲ್ಲಿದ್ದು ಅವರೂ ಕೈಕಟ್ಟಿ  ಕೂತಿದ್ದರು. ಇನ್ನು ಗಾರ್ಮೆಂಟ್ಸ್ ಕಂಪನಿಗಳ ನೂರಾರು ಕೋಟಿ ವಹಿವಾಟಿಗೆ ಧಕ್ಕೆಯಾಗಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆ ರೈತರು ಮತ್ತು ವರ್ತಕರ ದೃಷ್ಟಿಯಿಂದ ಅತ್ಯಂತ  ಪ್ರಮುಖವಾದದ್ದು. ಈ ಒಂದು ಮಾರುಕಟ್ಟೆಯಲ್ಲಿ ಮಾತ್ರವೆ ಪ್ರತಿದಿನ ರು.10 ಕೋಟಿ ವಹಿವಾಟು ನಡೆಯುತ್ತದೆ. ಸಾಲು ಸಾಲು ಬಂದ್ ಪರಿಣಾಮ ಇಲ್ಲಿ ನಡೆಯುವ ವಹಿವಾಟಿನ ಮೇಲೂ ಆಗಿದೆ.  ಇದರ ಜೊತೆಗೆ ದಿನಗೂಲಿ ಕಾರ್ಮಿಕರು, ತಮ್ಮ ಫಸಲು ಮಾರಲು ಬರುವ ರೈತರಿಗೂ ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ.

ಚಿತ್ರೋದ್ಯಮಕ್ಕೆ 10 ಕೋಟಿ ನಷ್ಟ
ಬೆಂಗಳೂರು:
ಕರ್ನಾಟಕ ಬಂದ್‍ಗೆ ಶನಿವಾರ ಕನ್ನಡ ಚಿತ್ರೋದ್ಯಮದಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಬೆಳಗ್ಗೆಯಿಂದ ಸಂಜೆವರೆಗೂ  ಚಿತ್ರಮಂದಿರಗಳು ಬಂದ್ ಆಗಿದ್ದವು. ಚಲನಚಿತ್ರ ಕಾರ್ಮಿಕರ ಒಕ್ಕೂಟ ಕೂಡ ಬಂದ್‍ಗೆ ಬೆಂಬಲಿಸಿದ್ದರಿಂದ ಸರಿಸುಮಾರು 25 ಚಿತ್ರಗಳ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ನಿತ್ಯ  ಜನಜಂಗುಳಿಯಿಂದ ತುಂಬಿರುತ್ತಿದ್ದ ನಗರದ ಮೆಜೆಸ್ಟಿಕ್‍ನಲ್ಲಿರುವ ಪ್ರಮುಖ ಚಿತ್ರಮಂದಿರಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಯಾವುದೇ ಮಲ್ಟಿಪ್ಲೆಕ್ಸ್ ಗಳು ಸಿನಿಮಾ ಪ್ರದರ್ಶನ ಮಾಡಲಿಲ್ಲ. ಬಂದ್‍ನಿಂದಾಗಿ ಕನ್ನಡ ಚಿತ್ರೋದ್ಯಮಕ್ಕೆ ಶನಿವಾರ ರು.10 ಕೋಟಿ ನಷ್ಟವಾಗಿದೆ.

ಕೆಲವು ವಲಯಗಳಲ್ಲಿ ಆಗಿರುವ ಅಂದಾಜು ವಹಿವಾಟು ನಷ್ಟ
(ಕೋಟಿ ರು.ಗಳಲ್ಲಿ ಒಂದು ದಿನಕ್ಕೆ ಆಗುವ ನಷ್ಟ)
ಭಾರಿ ಕೈಗಾರಿಕೆ 3,300
ಸಣ್ಣ ಕೈಗಾರಿಕೆ 350
ಕಚ್ಚಾ ಉತ್ಪನ್ನ ಪೂರೈಕೆ ವಲಯ 560
ಸಾರಿಗೆ 15
ಹೋಟೆಲ್(ಬೆಂಗಳೂರು ಮಾತ್ರ) 50
ಚಿತ್ರೋದ್ಯಮ 10
ರಾಜ್ಯ ಬೊಕ್ಕಸಕ್ಕೆ ತೆರಿಗೆ 140

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.