ಕಳಸಾ ಬಂಡೂರಿ: ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ
ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ, ರೈತ ಹಾಗೂ ವಾಣಿಜ್ಯ ಸಂಘಟನೆಗಳು ಕರೆ ಶನಿವಾರ ನೀಡಿರುವ ಕರ್ನಾಟಕ ಬಂದ್‍ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ...

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ, ರೈತ ಹಾಗೂ ವಾಣಿಜ್ಯ ಸಂಘಟನೆಗಳು ಕರೆ ಶನಿವಾರ ನೀಡಿರುವ ಕರ್ನಾಟಕ ಬಂದ್‍ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ, ಯಾದಗಿರಿ, ಬಳ್ಳಾರಿ, ಕೊಪ್ಪಳ, ಕೋಲಾರ, ಹಾಸನ, ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು ಹೋರಾಟಕ್ಕೆ ಕೈ ಜೋಡಿಸಿವೆ. ಚಾಮರಾಜನಗರದಲ್ಲಿ ತಮಿಳುನಾಡಿನ ವಾಹನಗಳನ್ನು ತಡೆಯಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಬಂದ್ ನಡೆದಿಲ್ಲ. ಶಾಲಾ ಕಾಲೇಜುಗಳು, ಬಸ್ ಸಂಚಾರ ಎಂದಿನಂತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಭಾಗಶಃ ಬಂದ್ ಆಗಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ.
ಬಾದಾಮಿ ಜಿಲ್ಲೆ ಭಾಗಶಃ ಬಂದ್ ಆಗಿದ್ದರೆ, ಇಳಕಲ್ನಲ್ಲಿ ಸಂಪೂರ್ಣ ಬಂದ್ ಆಗಿದೆ. ಕಲಬುರ್ಗಿ ಮತ್ತು ಬೀದರ್ನಲ್ಲಿ ಬಂದ್ ವಿಫಲವಾಗಿದೆ, ಆದರೆ ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಂಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಬಂದ್ ಆರಂಭವಾಗಿದ್ದು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ರೈಲು ಸಂಚಾರವನ್ನು ತಡೆ ಹಿಡಿಯಲಾಗಿದೆ. ಇನ್ನು ಟೌನ್ ಹಾಲ್ ಸಮೀಪ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೋಮ ಹವನ ಮಾಡುವ ಮೂಲಕ ಪ್ರತಿಭಟಿಸಿದರೆ, ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸಿರ್ಸಿ ಸರ್ಕಲ್ನಲ್ಲಿ ಖಾಸಗಿ ಬಸ್ಸಿಗೆ ಕಲ್ಲು ತೂರಿದ ಘಟನೆ ಕೂಡ ಬೆಳಕಿಗೆ ಬಂದಿದೆ.
ಇನ್ನು ಕಳಸಾಬಂಡೂರಿ ನಾಲಾ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ರೈತಪರ ಸಂಘಟನೆಗಳು ನಗರದ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ನಿಂದಾಗಿ ಬಸ್ ಗಳ ಸಂಚಾರವಿಲ್ಲದೆ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರು ನೆರೆದಿದ್ದು, ಬಸ್ ಸೇವೆ ಇಲ್ಲದೆ ಪರದಾಡುವಂತಾಗಿದೆ.
ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ
ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ, ರಾಜ್ಯಾದ್ಯಂತ ನಡೆಯುತ್ತಿರುವ ವಿದ್ಯಮಾನಗಳ ವಿವರ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಹಿರಿಯ ವಕೀಲ ಫಾಲಿ ನಾರಿಮನ್ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಭಾರಿ ಪೊಲೀಸ್ ಬಂದೋಬಸ್ತ್
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕರ್ನಾಟಕ ಬಂದ್‍ಗೆ 1300ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಾರ್ವಜನಿಕ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ತಿಂಗಳ 4ನೇ ಶನಿವಾರ ಆಗಿರುವುದರಿಂದ ಅಧಿಕೃತ ರಜೆ ಇರುವುದರಿಂದ ಬ್ಯಾಂಕ್‍ಗಳೂ ಕಾರ್ಯನಿರ್ವಹಿಸುವುದಿಲ್ಲ. ವಿಶೇಷವಾಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ವಿವಿಧ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ.
ಕನ್ನಡ ಚಳವಳಿ ಸಂಘಟನೆ ನೇತೃತ್ವದಡಿ ಎಲ್ಲಾ ಕನ್ನಡಪರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಜತೆಗೆ ಎಫ್ ಕೆಸಿಸಿಐ, ಚಿತ್ರೋದ್ಯಮ, ಕಾರ್ಮಿಕ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆಗಳು ಬಂದ್ ಯಶಸ್ವಿಗೆ ಪಣತೊಟ್ಟಿವೆ. ಆಟೋರಿಕ್ಷಾ ಚಾಲಕರು ಹೋರಾಟದಲ್ಲಿ ಪಾಲ್ಗೊಳ್ಳುವುದರಿಂದ ಸಂಚಾರಕ್ಕೆ ಸಂಚಕಾರ ಒದಗಲಿದೆ. ಪೆಟ್ರೋಲ್ ಬಂಕ್ ಉದ್ಯಮಿಗಳೂ ಹೋರಾಟ ಬೆಂಬಲಿಸಿ ಬಂಕ್ ಬಂದ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಯಾವುದೇ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸುವುದಿಲ್ಲ. ಚಿತ್ರ ಮಂದಿರಗಳೂ ತೆರೆದಿರುವುದಿಲ್ಲ.
ಲಾರೀ ಮಾಲೀಕರು ಬಂದ್‍ನಲ್ಲಿ ಪಾಲ್ಗೊಳ್ಳುವುದರಿಂದ ಅಗತ್ಯ ವಸ್ತುಗಳ ಸರಬರಾಜು ತುಸು ಕಷ್ಟವಾಗಲಿದೆ. ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಜನ ಜೀವನ ಸ್ತಬಟಛಿವಾಗುವ ಎಲ್ಲಾ ಮುನ್ಸೂಚನೆ ನಿಚ್ಚಳವಾಗಿವೆ. ಬೆಂಗಳೂರಲ್ಲಿ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಎನ್‍ಡಬ್ಲ್ಯೂಕೆಎಸ್‍ಆರ್ ಟಿಸಿ, ಎನ್‍ಇಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ಇರುವುದಿಲ್ಲ. ಎಲ್ಲಾ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ, ಸಂಚಾರ ಇರುವುದಿಲ್ಲ. ಒಂದು ವೇಳೆ ಅಧಿಕಾರಿಗಳು ಒತ್ತಡಕ್ಕೆ ಮಣಿದು ಬಸ್ ಚಾಲನೆ ಮಾಡಿದರೆ ಅಡ್ಡಿ ಪಡಿಸುವ ಸಾಧ್ಯತೆಗಳಿವೆ. ಹಾಗಾಗಿ ಸಂಚಾರ ಸ್ಥಗಿತಗೊಳಿಸಲು ಕಾರ್ಮಿಕರು ನಿರ್ಧರಿಸಿದ್ದಾರೆ.
ಭದ್ರತೆಯ ಹೊಣೆಯನ್ನು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಆಯುಕ್ತರಿಗೆ ವಹಿಸಲಾಗಿದೆ. ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
-ಅಲೋಕ್ ಮೋಹನ್ ಹೆಚ್ಚುವರಿ
ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


