ಲೋಕಾಯುಕ್ತ ಪದಚ್ಯುತಿಗೆ ಕೈಜೋಡಿಸಲಿರುವ ಕಾಂಗ್ರೆಸ್
ಲೋಕಾಯುಕ್ತ ವೈ.ಭಾಸ್ಕರ್ರಾವ್ ಪದಚ್ಯುತಿ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ಕಾಂಗ್ರೆಸ್ ಧ್ವನಿ ಸೇರಿಸಿದ್ದು, ಸೋಮವಾರ ಸ್ಪೀಕರ್ಗೆ ಪದಚ್ಯುತಿ ನಿರ್ಣಯ ಸಲ್ಲಿಸಲಿದೆ...

ಬೆಂಗಳೂರು: ಲೋಕಾಯುಕ್ತ ವೈ.ಭಾಸ್ಕರ್ರಾವ್ ಪದಚ್ಯುತಿ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ಕಾಂಗ್ರೆಸ್ ಧ್ವನಿ ಸೇರಿಸಿದ್ದು, ಸೋಮವಾರ ಸ್ಪೀಕರ್ಗೆ ಪದಚ್ಯುತಿ ನಿರ್ಣಯ ಸಲ್ಲಿಸಲಿದೆ.
ಲೋಕಾಯುಕ್ತ ಪದಚ್ಯುತಿ ವಿಚಾರದಲ್ಲಿ `ಕಟ್ಟೆಯ ಮೇಲೆ ಕುಳಿತ ಬೆಕ್ಕಿನಂತೆ' ವರ್ತಿಸುತ್ತಿದ್ದ ಕಾಂಗ್ರೆಸ್ಗೆ ಈಗ ಸಾರ್ವಜನಿಕ ಟೀಕೆಯ ಬಿಸಿ ಎದುರಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಮುಖಂಡರು ಸೋಮವಾರ ಮತ್ತೊಂದು ನಿರ್ಣಯವನ್ನು ಸ್ಪೀಕರ್ಗೆ ಸಲ್ಲಿಸಲಿದ್ದಾರೆ. ಅಲ್ಲಿಗೆ ನ್ಯಾ. ಭಾಸ್ಕರ್ ರಾವ್ ಅವರನ್ನು ಮನೆಗೆ ಕಳುಹಿಸುವುದಕ್ಕೆ ಮೂರು ಪಕ್ಷಗಳು ಅಧಿಕೃತವಾಗಿ ಅಖಾಡಕ್ಕೆ ಇಳಿದಂತಾಗಿದೆ. ಕಾಂಗ್ರೆಸ್ ಪ್ರತ್ಯೇಕವಾಗಿ ಪದಚ್ಯುತಿ ನಿರ್ಣಯ ಮಂಡಿಸುವ ವಿಚಾರವನ್ನು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸದನದಲ್ಲೇ ಪ್ರಕಟಿಸಿದ್ದಾರೆ.
ಜತೆಗೆ ಸಹಿ ಸಂಗ್ರಹ ಅಭಿಯಾನವೂ ತುರುಸಾಗಿ ನಡೆದಿದ್ದು ಶುಕ್ರವಾರ ಸಂಜೆಯ ವೇಳೆಗೆ ಕಾಂಗ್ರೆಸ್ನ 80 ಶಾಸಕರು ನಿರ್ಣಯದ ಪರ ಸಹಿ ಹಾಕಿದ್ದಾರೆ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ. ಅಲ್ಲಿಗೆ ಲೋಕಾಯುಕ್ತರ ಪದಚ್ಯುತಿ ನಿರ್ಣಯಕ್ಕೆ ಅಗತ್ಯವಾದ ಸದನದ ಮೂರನೇ ಒಂದರಷ್ಟು ಸಂಖ್ಯಾ ಬಲ 72ಕ್ಕಿಂತ 8 ಸದಸ್ಯರು ಹೆಚ್ಚುವರಿಯಾಗಿ ಕಾಂಗ್ರೆಸ್ನಿಂದಲೇ ಸಹಿ ಮಾಡಿದಂತಾಗಿದೆ. ಬಿಜೆಪಿಯ 46 ಹಾಗೂ ಜೆಡಿಎಸ್ನ 36 ಸದಸ್ಯರು ಈಗಾಗಲೇ ಪ್ರತ್ಯೇಕವಾಗಿ ನಿರ್ಣಯ ಸಲ್ಲಿಸಿರುವುದರಿಂದ ಭಾಸ್ಕರ್ ರಾವ್ ಪದಚ್ಯುತಿ ಪ್ರಕರಣಕ್ಕೆ ಈಗ ಒಂದು ಹಂತದ ಬಲ ಬಂದಂತಾಗಿದೆ.
ಶುಕ್ರವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈ ವಿಚಾರ ಪ್ರಸ್ತಾಪಿಸಿದರು. ಆದರೆ, ಕಾಂಗ್ರೆಸ್ ಸದಸ್ಯರೂ ಸಹಿ ಹಾಕಿ ನಿರ್ಣಯ ಕೊಡಲು ನಿರ್ಧರಿಸಿದ್ದಾರೆ. ಹೀಗಾಗಿ ಸೋಮವಾರ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳೋಣ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
ಇದಕ್ಕೆ ಒಪ್ಪಿದ ಪ್ರತಿಪಕ್ಷ ನಾಯಕ ಜಗದೀಶ್ಶೆಟ್ಟರ್, ಈ ಬಗ್ಗೆ ನಾನು ಮೊದಲೇ ಪ್ರಸ್ತಾಪಿಸಿದ್ದೆ. ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಲೋಕಾಯುಕ್ತರ ಪದಚ್ಯುತಿಗೆ ಸಹಕರಿಸಿ ಎಂದು ಮನವಿ ಮಾಡಿದ್ದೆ. ತಡವಾಗಿಯಾದರೂ ಕಾಂಗ್ರೆಸ್ ಬೆಂಬಲ ಸೂಚಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ನಮಗೆ ಸಂತೋಷವಾಗಿದೆ. ಸೋಮವಾರದಿಂದಲೇ ಚರ್ಚೆ ಆರಂಭವಾಗಲಿ ಎಂದರು. ಇದರೊಂದಿಗೆ ಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆಗೆ ಹೆಚ್ಚಿನ ಬಲ ಬಂದಂತಾಗಿದ್ದು, ಸೋಮವಾರ ಒಂದು ಸಾಲಿನ ನಿರ್ಣಯವನ್ನು ಯಾವುದೇ ಚರ್ಚೆ ಇಲ್ಲದೇ ವಿಧಾನಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕುತೂಹಲ ತಂದ ಕಾಂಗ್ರೆಸ್ ನಡೆ: ಇದೆಲ್ಲದರ ಮಧ್ಯೆ ನಿರ್ಣಯದ ಪರವಾಗಿ ಕಾಂಗ್ರೆಸ್ ನಿಂತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತಾವು ಬೆಂಬಲ ನೀಡದೇ ಇದ್ದರೂ ಪ್ರತಿಪಕ್ಷಗಳು ಸಲ್ಲಿಸಿದ ನಿರ್ಣಯವನ್ನು ಸಂಯೋಜಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕಾಗೋಡು ತಿಮ್ಮಪ್ಪ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಬಹುದು ಆಗ ಪಕ್ಷಕ್ಕೆ ಮುಜುಗರವಾಗಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಇದರ ಜತೆಗೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ನಿರ್ಣಯ ಮಂಡಿಸಿದಾಗ ಎಲ್ಲಾದರೂ ಚರ್ಚೆಗೆ ಅವಕಾಶ ನೀಡಿಬಿಟ್ಟರೆ ಆಗ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಭ್ರಷ್ಟ ಲೋಕಾಯುಕ್ತರನ್ನು ರಕ್ಷಿಸಲು ಮುಂದಾಗಿದೆ ಎಂದು ಪ್ರತಿಪಕ್ಷದವರು ಅರೋಪಿಸಿದರೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ ಆರೋಪ ನಿಜವಾಗುತ್ತದೆ. ಸುಮ್ಮನಿದ್ದರೂ ನಿಜ ವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪದಚ್ಯುತಿ ನಿರ್ಣಯಕ್ಕೆ ಸಹಿ ಹಾಕುವುದಕ್ಕೆ ಕಾಂಗ್ರೆಸ್ ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


