ಚುನಾವಣೆಗೆ ಮನಸ್ಸು ಮಾಡಿದ ರಾಜ್ಯ ಸರ್ಕಾರ
ಬಹು ನಿರೀಕ್ಷಿತ ಬಿಬಿಎಂಪಿ ಚುನಾವಣೆ ನಿಗದಿತ ಸಮಯಕ್ಕೆ ನಡೆಯುವುದು ಬಹುತೇಕ ಖಚಿತ. ರಾಜ್ಯ ಸರ್ಕಾರ ಇನ್ನುಮುಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ಕಸರತ್ತು ಬಿಟ್ಟು, ಚುನಾವಣೆಯಲ್ಲಿ ಗೆಲ್ಲುವ ಕಸರತ್ತು ನಡೆಸಲು ತೀರ್ಮಾನಿಸಿದೆ. ಅಂದರೆ ಚುನಾವಣೆ...

ಬೆಂಗಳೂರು: ಬಹು ನಿರೀಕ್ಷಿತ ಬಿಬಿಎಂಪಿ ಚುನಾವಣೆ ನಿಗದಿತ ಸಮಯಕ್ಕೆ ನಡೆಯುವುದು ಬಹುತೇಕ ಖಚಿತ. ರಾಜ್ಯ ಸರ್ಕಾರ ಇನ್ನುಮುಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ಕಸರತ್ತು ಬಿಟ್ಟು, ಚುನಾವಣೆಯಲ್ಲಿ ಗೆಲ್ಲುವ ಕಸರತ್ತು ನಡೆಸಲು ತೀರ್ಮಾನಿಸಿದೆ. ಅಂದರೆ ಚುನಾವಣೆ ಮುಂದೂಡುವ ಕಾನೂನು ಹೋರಾಟಗಳನ್ನು ಕೈಬಿಟ್ಟು ಚುನಾವಣೆಗೆ ಸರ್ಕಾರ ಮನಸ್ಸು ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ದಲ್ಲಿ ನಡೆದ ಸಚಿವ ಸಂಪುಟ ಸಭೆಯು ಬಿಬಿಎಂಪಿ ವಿಭಜನೆ ವಿಧೇಯಕವನ್ನು ರಾಜ್ಯಪಾಲ ವಿ.ಆರ್. ವಾಲಾ ಅವರು ರಾಷ್ಟ್ರಪತಿಯವರಿಗೆ ಕಳುಹಿಸಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಅಂತಿಮವಾಗಿ ಚುನಾ ವಣೆಗೆ ಹೋಗುವುದೇ ಸರಿ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದ ವಿಧೇಯಕಕ್ಕೆ ರಾಜ್ಯಪಾಲರು ಸುಮಾರು 15 ಆಕ್ಷೇಪಣೆಗಳನ್ನು ಎತ್ತಿದ್ದು, ಅದನ್ನೂ ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಿರುವುದರಿಂದ ಅನ್ಯ ದಾರಿಯೇ ಇಲ್ಲದೆ ಚುನಾವಣೆಗೆ ಸಿದ್ಧವಾಗಲು ತೀರ್ಮಾನಿಸಲಾಗಿದೆ. ಏಕೆಂದರೆ, ಈ ಹಂತದಲ್ಲಿ ಯಾವುದೇ ಕಾನೂನು ಹೋರಾಟಗಳು ಫಲ ನೀಡುವುದಿಲ್ಲ. ಇರುವ ಅಲ್ಪ ಸಮಯದಲ್ಲಿ ರಾಷ್ಟ್ರಪತಿ ಕೂಡ ಅಂಕಿತ ಹಾಕುವುದಿಲ್ಲ ಎನ್ನುವುದು ಸ್ಪಷ್ಟ. ಆದ್ದರಿಂದ ಕೂಡಲೇ ಚುನಾವಣಾ ಸಿದಟಛಿತೆಗಳನ್ನು ನಡೆಸುವುದೇ ಉತ್ತಮ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ರಾಜ್ಯಪಾಲ ವಿ.ಆರ್.ವಾಲಾ ಆಕ್ಷೇಪ ವ್ಯಕ್ತಪಡಿಸುವುದಕ್ಕೆ ವಿಧೇಯಕದಲ್ಲಿ ಯಾವುದೇ ನ್ಯೂನತೆಗಳಿಲ್ಲ. ಆದರೂ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸಿ ಆಕ್ಷೇಪಿಸಲಾಗಿದೆ. ಅದೇ ರೀತಿ 15
ವಿಚಾರಗಳನ್ನು ಪಟ್ಟಿ ಮಾಡಲಾಗಿದೆ. ಇನ್ನು ಈ ವಿಚಾರವನ್ನು ರಾಷ್ಟ್ರಪತಿಗಳ ಅವಗಾಹ ನೆಗೆ ಕಳುಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ, ವಿಧೇಯಕಗಳ ಬಗ್ಗೆ ರಾಷ್ಟ್ರಪತಿಗಳ ಸಲಹೆ, ಸೂಚನೆ ಪಡೆಯುವುದು ಸಂವಿಧಾನ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಮಾತ್ರ. ಅಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾನೂನುಗಳು ತೊಡಕಾಗಿ ಪರಿಣಮಿಸಿದಾಗ ಅಥವಾ ಎರಡೂ ಕಾನೂನುಗಳು ವ್ಯತಿರಿಕ್ತವಾದಾಗ ಮಾತ್ರ. ಆದರೆ ರಾಜ್ಯಪಾಲರು ಅನಗತ್ಯವಾಗಿ ವಿಚಾರವನ್ನು ರಾಷ್ಟ್ರಪತಿಗಳ ಅಂಗಳಕ್ಕೆ ನೂಕಿದ್ದಾರೆ ಎಂದು ಸಭೆಯಲ್ಲಿ ಕೆಲವು ಸಚಿವರು ಬೇಸರ ವ್ಯಕ್ತಪಡಿಸಿದರು ಎಂದೂ ಹೇಳಲಾಗಿದೆ.
ರಾಜ್ಯಪಾಲರು ಆಕ್ಷೇಪ ಎತ್ತಿರುವುದರಿಂದ ವಿಧೇಯಕ ಕುರಿತ ಕಡತ ಮತ್ತೆರಾಜ್ಯ ಕಾನೂನು ಇಲಾಖೆಗೇ ಬಂದಿದೆ. ಇದನ್ನು ಸರ್ಕಾರ ನಗರಾಭಿವೃದ್ಧಿ ಇಲಾಖೆ ಜತೆ ಚರ್ಚೆಸಿ ಮತ್ತೆ ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಕಳುಹಿಸಬೇಕು. ನಂತರ ಅದು ಕೇಂದ್ರ ಕಾನೂನು ಇಲಾಖೆಗೆ ಹೋಗಿ ಅಂತಿಮವಾಗಿ ರಾಷ್ಟ್ರಪತಿ ಅವರ ಅಂಕಿತಕ್ಕೆ ಸಲ್ಲಿಕೆಯಾಗಬೇಕು. ಇದೆಲ್ಲದಕ್ಕೂ ಕನಿಷ್ಠ ನಾಲ್ಕೈದು ತಿಂಗಳಾದರೂ ಆಶ್ಚರ್ಯವಿಲ್ಲ. ಆದರೆ ಈಗಾಗಲೇ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿ ಅಧಿಸೂಚನೆ ಹೊರಬೀಳಲು ನಾಲ್ಕೈದು ದಿನಗಳು ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಯಾವುದೇ ಹೋರಾಟ ನಡೆಸಿದರೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಚುನಾವಣೆ ನಡೆಸುವುದೇ ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಸರ್ಕಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


