FIFA World Cup 2026 Final: ಜಗತ್ತಿನಾದ್ಯಂತ ಫುಟ್ಬಾಲ್ ವಿಶ್ವಕಪ್ ಜ್ವರ: ಅಮೆರಿಕಕ್ಕೆ ಮಾತ್ರ 1 ಲಕ್ಷ ಕೋಟಿ ರೂ ನಷ್ಟ! ಇದು ದುಬಾರಿ ಪರಿಣಾಮ
ಜಗತ್ತಿನಾದ್ಯಂತ ಫುಟ್ಬಾಲ್ ವಿಶ್ವಕಪ್ ಸಂಭ್ರಮವು ಅಭಿಮಾನಿಗಳನ್ನು ಪರದೆಯ ಮುಂದೆ ಕೂರಿಸಿದರೆ, ಇತ್ತ ಟೂರ್ನಿ ಆತಿಥ್ಯ ವಹಿಸಿರುವ ಅಮೆರಿಕಕ್ಕೆ ಮಾತ್ರ ಈ ಟೂರ್ನಿಯಿಂದಾಗಿ ಆರ್ಥಿಕತೆಗೆ ಭಾರೀ ಹೊಡೆತ ನೀಡಿದೆ.

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಫಿಫಾ ವಿಶ್ವಕಪ್ 2026 ಫುಟ್‌ಬಾಲ್ ಟೂರ್ನಿಗೆ ಇಂದು ಅಧಿಕೃತವಾಗಿ ವಿದ್ಯುಕ್ತ ತೆರೆ ಬೀಳುತ್ತಿದ್ದು, ಜಗತ್ತಿನಾದ್ಯಂತ ಫುಟ್ಬಾಲ್ ಪ್ರೇಮಿಗಳು ಇಂದು ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಜಗತ್ತಿನಾದ್ಯಂತ ಫುಟ್ಬಾಲ್ ವಿಶ್ವಕಪ್ ಸಂಭ್ರಮವು ಅಭಿಮಾನಿಗಳನ್ನು ಪರದೆಯ ಮುಂದೆ ಕೂರಿಸಿದರೆ, ಇತ್ತ ಟೂರ್ನಿ ಆತಿಥ್ಯ ವಹಿಸಿರುವ ಅಮೆರಿಕಕ್ಕೆ ಮಾತ್ರ ಈ ಟೂರ್ನಿಯಿಂದಾಗಿ ಆರ್ಥಿಕತೆಗೆ ಭಾರೀ ಹೊಡೆತ ನೀಡಿದೆ.
ಅಚ್ಚರಿಯಾದರೂ ಇದು ಸತ್ಯ.. ಫಿಫಾ ವಿಶ್ವಕಪ್ ಟೂರ್ನಿಯಿಂದಾಗಿ ಅಮೆರಿಕದ ಉದ್ಯೋಗಸ್ಥ ವಲಯಕ್ಕೆ ಬರೊಬ್ಬರಿ 1ಲಕ್ಷ ಕೋಟಿ ರೂ ನಷ್ಟ ಎನ್ನಲಾಗಿದೆ. ಮಾನವ ಸಂಪನ್ಮೂಲ ಸಾಫ್ಟ್‌ವೇರ್ ಸಂಸ್ಥೆ UKG ಬಿಡುಗಡೆ ಮಾಡಿದ ವರದಿ ಪ್ರಕಾರ, ವಿಶ್ವಕಪ್‌ನಿಂದ ಅಮೆರಿಕದಲ್ಲಿ ಉದ್ಯೋಗಕ್ಷಮತೆ ಕುಸಿತವಾಗಿದ್ದು, ಸುಮಾರು 11.7 ಬಿಲಿಯನ್ ಡಾಲರ್ (ಸುಮಾರು 1 ಲಕ್ಷ ಕೋಟಿ) ನಷ್ಟವಾಗಿದೆ ಎಂದು ಅಂದಾಜಿಸಿದೆ.
ಅಮೆರಿಕ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಈ ಟೂರ್ನಿಯಿಂದ ಸುಮಾರು 17 ಬಿಲಿಯನ್ ಡಾಲರ್ ಉದ್ಯೋಗಕ್ಷಮತೆ ನಷ್ಟವಾಗಿರಬಹುದು ಎಂದು ವರದಿ ಹೇಳಿದೆ.
ಪಂದ್ಯ ನೋಡಲು ಕೆಲಸಕ್ಕೆ ರಜೆ, ತಡವಾಗಿ ಹಾಜರಿ!
ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಅನೇಕ ಉದ್ಯೋಗಿಗಳು ಕೆಲಸದಿಂದ ಬೇಗ ಹೊರಡುವುದು, ತಡವಾಗಿ ಕಚೇರಿಗೆ ಬರುವುದು ಅಥವಾ ಸಂಪೂರ್ಣವಾಗಿ ಕೆಲಸಕ್ಕೆ ಗೈರಾಗುವ ಯೋಜನೆ ರೂಪಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಪರಿಣಾಮ ಈಗಾಗಲೇ ಅಮೆರಿಕದ ಕಚೇರಿಗಳಲ್ಲಿ ಗೋಚರಿಸಿದೆ. ಜುಲೈ 7ರಂದು, ಆತಿಥೇಯ ಅಮೆರಿಕ ತಂಡ ಬೆಲ್ಜಿಯಂ ವಿರುದ್ಧ ಸೋತ ಮರುದಿನ, ಕಚೇರಿಗಳ ಹಾಜರಾತಿ 26% ಕುಸಿತ ಕಂಡಿತು. ಇದು ಸೂಪರ್ ಬೌಲ್ ಬಳಿಕ ದಾಖಲಾಗಿದ್ದ ಕುಸಿತಕ್ಕಿಂತ ಸುಮಾರು 10 ಪಟ್ಟು ಹೆಚ್ಚಾಗಿತ್ತು ಎಂದು ಕಾರ್ಯಸ್ಥಳ ನಿರ್ವಹಣಾ ಸಂಸ್ಥೆ Envoy ತಿಳಿಸಿದೆ.
'ನಾಕ್‌ಔಟ್ ಟ್ಯೂಸ್‌ಡೇ' ಪರಿಣಾಮ
ಕೇವಲ ಸಿಬ್ಬಂದಿಯಷ್ಟೇ ಅಲ್ಲ, ಗ್ರಾಹಕರ ಭೇಟಿಗಳು, ಉದ್ಯೋಗ ಸಂದರ್ಶನಗಳು ಹಾಗೂ ಪೂರೈಕೆದಾರರ ಸಭೆಗಳ ಸಂಖ್ಯೆಯೂ 32% ಇಳಿಕೆಯಾಗಿದ್ದು, ಇದು ಸೂಪರ್ ಬೌಲ್ ನಂತರದ ಕುಸಿತಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಈ ಬೆಳವಣಿಗೆಯನ್ನು Envoy ಸಂಸ್ಥೆ "ನಾಕ್‌ಔಟ್ ಟ್ಯೂಸ್‌ಡೇ" ಎಂದು ಹೆಸರಿಸಿದೆ.
ಅಮೆರಿಕ ತಂಡ ಆಡಿದ ಪಂದ್ಯಗಳ ಸಂದರ್ಭದಲ್ಲೇ ಗೈರುಹಾಜರಿ ಪ್ರಮಾಣ ಗರಿಷ್ಠವಾಗಿತ್ತು. ಆತಿಥೇಯ ತಂಡ ಟೂರ್ನಿಯಿಂದ ಹೊರಬಿದ್ದ ಬಳಿಕ, ವಿಶ್ವಕಪ್ ಇನ್ನಷ್ಟು ರೋಚಕ ಹಂತ ತಲುಪಿದರೂ ಕಚೇರಿ ಹಾಜರಾತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಇದು ಮೊದಲ ಘಟನೆ ಅಲ್ಲ
ಕಾರ್ಮಿಕರ ಗಮನವನ್ನು ದೊಡ್ಡ ಕ್ರೀಡಾ ಹಾಗೂ ಮನರಂಜನಾ ಕಾರ್ಯಕ್ರಮಗಳು ಬೇರೆಡೆ ಸೆಳೆಯುವುದು ಇದೇ ಮೊದಲಲ್ಲ. 2023ರ ಒಲಿಂಪಿಕ್ಸ್ ಕ್ರೀಡಾಕೂಟದ ಸಂದರ್ಭದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ 'ಬಾರ್ಬಿ' ಹಾಗೂ 'ಒಪ್ಪೆನ್‌ಹೈಮರ್' ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲೂ ಅಮೆರಿಕದ ಕಚೇರಿಗಳ ಹಾಜರಾತಿಯಲ್ಲಿ ಇಳಿಕೆ ಕಂಡುಬಂದಿತ್ತು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಉತ್ಪಾದಕತೆ ಉಳಿಸಿಕೊಳ್ಳಲು ಕಂಪನಿಗಳ ಹೊಸ ಕ್ರಮ
ವಿಶ್ವಕಪ್‌ನಿಂದಾಗುವ ಉತ್ಪಾದಕತೆ ಕುಸಿತವನ್ನು ತಗ್ಗಿಸಲು ಕೆಲವು ಪ್ರಮುಖ ಕಂಪನಿಗಳು ವಿಶೇಷ ಕ್ರಮ ಕೈಗೊಂಡಿವೆ. ಪಂದ್ಯ ನಡೆಯುವ ದಿನಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ಉದ್ಯೋಗಿಗಳ ಅನುಕೂಲಕ್ಕಾಗಿ S&P, JPMorgan Chase & Co., ಮತ್ತು Goldman Sachs ಸಂಸ್ಥೆಗಳು ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ (WFH) ಅವಕಾಶ ನೀಡಿದ್ದವು.
ಫೈನಲ್ ನಂತರ ಏನಾಗಲಿದೆ?
Envoy ಅಂದಾಜಿನ ಪ್ರಕಾರ, ಜುಲೈ 19ರಂದು ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ದಿನವೂ ಹಾಜರಾತಿಯಲ್ಲಿ ಸ್ವಲ್ಪ ಇಳಿಕೆ ಕಂಡುಬರಬಹುದು. ಆದರೆ ಈ ಬಾರಿ ಅಮೆರಿಕ ತಂಡ ಫೈನಲ್‌ನಲ್ಲಿ ಇಲ್ಲದ ಕಾರಣ, ಕಚೇರಿ ಹಾಜರಾತಿ ಸಾಮಾನ್ಯ ಸೋಮವಾರಗಳಿಗಿಂತ ಕೇವಲ 1.87% ಮಾತ್ರ ಕಡಿಮೆಯಾಗಲಿದೆ ಎಂದು ಸಂಸ್ಥೆ ಅಂದಾಜಿಸಿದೆ.
ಸ್ಪೇನ್ ವಿರುದ್ಧ ಅರ್ಜೆಂಟೀನಾ ಫೈನಲ್
ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯ ನ್ಯೂಯಾರ್ಕ್–ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ ಸ್ಪೇನ್, ಫ್ರಾನ್ಸ್ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




