ಪ್ರೇರಣಾ ಭಾಂಬ್ರಿ ಮತ್ತೆ ಚಾಂಪಿಯನ್
ಶ್ರೇಷ್ಠ ಫಾರ್ಮ್ ನಲ್ಲಿರುವ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪ್ರೇರಣಾ ಭಾಂಬ್ರಿ ಶನಿವಾರವಷ್ಟೇ ಮುಕ್ತಾಯ ಕಂಡ ಆರ್ ಯುಜಿಎಚ್‍ಎಸ್ ಕಲಬುರಗಿ ಓಪನ್ ಐಟಿಎಫ್...

Published On :
ಕಲಬುರಗಿ: ಶ್ರೇಷ್ಠ ಫಾರ್ಮ್ ನಲ್ಲಿರುವ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪ್ರೇರಣಾ ಭಾಂಬ್ರಿ ಶನಿವಾರವಷ್ಟೇ ಮುಕ್ತಾಯ ಕಂಡ ಆರ್ ಯುಜಿಎಚ್‍ಎಸ್ ಕಲಬುರಗಿ ಓಪನ್ ಐಟಿಎಫ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಈ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಪ್ರಶಸ್ತಿಗೆ ಭಾಜನವಾದರು.
ರಾಜೀವ್‍ಗಾಂಧಿ ಯೂನಿವರ್ಸಿಟಿ ಆರೋಗ್ಯ ವಿಜ್ಞಾನ ವಿವಿ ಪ್ರಾಯೋಜಕತ್ವದ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ್ತಿ ನತಾಷಾ ಪಲ್ಹಾ ಎದುರು 6-0, 6-4 ನೇರ ಗೇಮ್ ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ವಾರವೂ ಇಲ್ಲಿ ಪ್ರಶಸ್ತಿ ಜಯಿಸಿದ್ದ ಪ್ರೇರಣಾ ಭಾಂಬ್ರಿ, ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ 2012ರಲ್ಲಿಯೂ ಚಾಂಪಿಯನ್ ಆಗಿದ್ದರು.
ಹೀಗಾಗಿ ಅವರು ಮೂರನೇ ಬಾರಿಗೆ ಆರ್‍ಯುಜಿಎಚ್‍ಎಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇನ್ನು ಅಂತಿಮ ಸುತ್ತಿನ ಪಂದ್ಯದಲ್ಲಿ ತುಸು ಒತ್ತಡಕ್ಕೆ ಸಿಲುಕಿದಂತೆ ಕಂಡುಬಂದ ನತಾಷಾ ಮೊದಲ ಸೆಟ್‍ನಲ್ಲಿ ಯಾವುದೇ ಪ್ರತಿರೋಧವಿಲ್ಲದೆ ಸುಲಭವಾಗಿಯೇ ಪ್ರೇರಣಾಗೆ ಮಣಿದರು. ಇದಕ್ಕೆ ತದ್ವಿರುದ್ಧವಾಗಿ ಅತ್ಯಂತ ಆಕ್ರಮಣಕಾರಿ ಹೋರಾಟ ನಡೆಸಿದ ಪ್ರೇರಣಾ, 1, 3 ಹಾಗೂ 5ನೇ ಗೇಮ್ ಗಳಲ್ಲಿ ನತಾಷ ಅವರ ಸರ್ವ್ ಅನ್ನು ತುಂಡರಿಸಿ ಪ್ರಭುತ್ವ ಮೆರೆದರು.
ಇನ್ನು ಎರಡನೇ ಸೆಟ್‍ನಲ್ಲಾದರೂ ತಿರುಗೇಟು ನೀಡಬಹುದು ಎಂಬ ಪ್ರೇರಣಾ ಊಹೆ ನಿಜವಾಯಿತು. ಆರನೇ ಗೇಮ್ ವರೆಗೂ ದಿಟ್ಟ ಪೈಪೋಟಿ ನೀಡಿದ ನತಾಷಾ ಸೆಟ್ ಗೆಲ್ಲುವ ಭರವಸೆಯಲ್ಲಿದ್ದರು. ಆದರೆ, ಒಡನೆಯೇ ಎಚ್ಚೆತ್ತುಕೊಂಡ ಪ್ರೇರಣಾ, ಮೂರನೇ ಗೇಮ್ ನಲ್ಲಿ ಪಲ್ಹಾ ಸರ್ವ್ ಅನ್ನು ಮುರಿದರೆ, ನಾಲ್ಕನೇ ಗೇಮ್ ನಲ್ಲಿ ನತಾಷಾ ಪುನಃ ಮೇಲುಗೈ ಸಾಧಿಸಿದರು. ಬಳಿಕ ನಡೆದ ಜಿದ್ದಾಜಿದ್ದಿನ ಕಾದಾಟದಲ್ಲಿ ಕೊನೆಗೂ ನತಾಷಾ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಪ್ರೇರಣಾ ಸಫಲವಾದರು.
ನತಾಷಾ 8ನೇ ಗೇಮ್ ನಲ್ಲಿ 3 ಬ್ರೇಕ್ ಪಾಯಿಂಟ್ಸ್ಗಳನ್ನು ಕಲೆಹಾಕಿದರೂ, ಈ ಹಂತದಲ್ಲಿ ಇನ್ನಷ್ಟು ಸವಾಲಿನಿಂದ ಸೆಣಸಿದ ಪ್ರೇರಣಾ ಸರ್ವ್ ಕಾಪಾಡಿಕೊಂಡು ಅಂತಿಮವಾಗಿ ಒಂದು ತಾಸು ಹದಿನಾಲ್ಕು ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಚಾಂಪಿಯನ್ ಎನಿಸಿದರು. ಈ ಗೆಲುವಿನಿಂದ ಪ್ರೇರಣಾ 1568 ಯುಎಸ್ ಡಾಲರ್ ಮತ್ತು 12 ಐಟಿಎಫ್ ಪಾಯಿಂಟ್ಸ್‍ಗಳನ್ನು ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


