ಭಾರತ ಕ್ವಾರ್ಟರ್ ಫೈನಲ್ಗೆ
ಅತ್ಯುತ್ತಮ ಲಯದಲ್ಲಿರುವ ಭಾರತ ಕಿರಿಯರ ಹಾಕಿ ತಂಡ 8ನೇ ಜೂನಿಯರ್ ಪುರುಷರ ಏಷ್ಯಾ ಕಪ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಸತತ ಮೂರನೇ ಜಯ ದಾಖಲಿಸಿದ್ದು...

Published On :
ಕ್ವಂಟಾನ್: ಅತ್ಯುತ್ತಮ ಲಯದಲ್ಲಿರುವ ಭಾರತ ಕಿರಿಯರ ಹಾಕಿ ತಂಡ 8ನೇ ಜೂನಿಯರ್ ಪುರುಷರ ಏಷ್ಯಾ ಕಪ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಸತತ ಮೂರನೇ ಜಯ ದಾಖಲಿಸಿದ್ದು ಹ್ಯಾಟ್ರಿಕ್ ಸಾಧನೆ ಮಾಡಿ ಕ್ವಾರ್ಟರ್ ಫೈನಲ್ ತಲುಪಿದೆ.
ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ಭಾರತ ತಂಡ ತನ್ನ ಪ್ರತಿಸ್ಪರ್ಧಿ ಚೀನಾ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಜಯಿಸಿದ್ದು, ಆ ಮೂಲಕ ಭಾರತ 'ಎ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಪಂದ್ಯದಲ್ಲಿ ಭಾರತ ತಂಡದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ (16 ನಿ.), ಅಜಿತ್ ಪಾಂಡೆ (37 ನಿ.) ಮತ್ತು ಮನ್ ಪ್ರೀತ್ 52 ಮತ್ತು 67ನೇ ನಿಮಿಷದಲ್ಲಿ ಎರಡು ಗೋಲು ಹೊಡೆದು ಗೆಲುವಿನ ರೂವಾರಿಗಳೆನಿಸಿದರು. ಇನ್ನು ಚೀನಾ ತಂಡದ ಪರ ಹೈಫೆಂಗ್ ಗೌ 43 ನೇ ನಿಮಿಷದಲ್ಲಿ ಏಕಾಂಗಿ ಗೋಲು ದಾಖಲಿಸಿದರು.
ಪಂದ್ಯದ ಆರಂಭದಿಂದಲೇ ಚೀನಾ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಭಾರತ ತಂಡ, ಪಂದ್ಯದ 16ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಅವರ ಚುರುಕಿನ ಆಟದಿಂದ ಗೋಲಿನ ಖಾತೆ ತೆರೆಯಿತು. ನಂತರ 37ನೇ ನಿಮಿಷದಲ್ಲಿ ಅಜಿತ್ ಪಾಂಡೆ ಅವರ ಗೋಲಿನಿಂದ ಭಾರತ 20 ಮುನ್ನಡೆ ಕಂಡಿತು. ಮೇಲಿಂದ ಮೇಲೆ ದಾಖಲಾದ ಎರಡು ಗೋಲುಗಳಿಂದ ಧೃತಿಗೆಟ್ಟ ಚೀನಾ ಕೂಡ ಈ ಹಂತದಲ್ಲಿ ಗೋಲಿಗಾಗಿ ಇನ್ನಿಲ್ಲದಂತೆ ಶ್ರಮಿಸಿತು. ಪ್ರತಿರೋಧ ನೀಡುವ ಪ್ರಯತ್ನ ನಡೆಸಿದ ಚೀನಾ ಪರ ಹೈಫೆಂಗ್ ಗೌ ಗೋಲು ದಾಖಲಿಸಿ ತಂಡದ ಅಂತರವನ್ನು ಕಡಿಮೆ ಮಾಡಿದರು. ಆದರೆ, ಭಾರತದ ವಿರುದ್ಧ ಮೇಲುಗೈ ಸಾಧಿಸಬೇಕೆಂಬ ಅದರ ಆಸೆ ಕೈಗೂಡಲಿಲ್ಲ. ಇದಕ್ಕೆ ಬದಲಾಗಿ ಇನ್ನಷ್ಟು ಆಕ್ರಮಣಕಾರಿ ಹೋರಾಟ ನಡೆಸಿದ ಭಾರತ ಮತ್ತೊಂದು ಗೋಲು ಬಾರಿಸಿ ಪಾರಮ್ಯ ಮೆರೆಯಿತು. ಪಂದ್ಯದ ಅಂತಿಮ ಕ್ವಾರ್ಟರ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಮನ್ಪ್ರೀತ್ ಸಿಂಗ್ ಎರಡು ಆಕರ್ಷಕ ಗೋಲು ದಾಖಲಿಸಿ ತಂಡದ ಜಯವನ್ನು ಖಚಿತಪಡಿಸಿದರು.
ಭಾರತ ತಂಡ 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿರುವ ಹಿನ್ನೆಲೆಯಲ್ಲಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ 'ಬಿ' ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಒಮಾನ್ ವಿರುದ್ಧ ಸೆಣಸಲಿದೆ. ಒಮಾನ್ ತಂಡ ಈವರೆಗೆ ಆಡಿರುವ 4 ಪಂದ್ಯಗಳ ಪೈಕಿ ಒಂದರಲ್ಲೂ ಜಯ ಸಾಧಿಸದೇ ಶೂನ್ಯ ಅಂಕ ಸಂಪಾದಿಸಿದೆ. ಈ ಪಂದ್ಯ ಗುರುವಾರ ನಡೆಯಲಿದ್ದು, ಭಾರತ ತಂಡ ಗೆಲುವು ಸಾಧಿಸುವ ಫೇವರಿಟ್ ಎನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


