ದೆಹಲಿ ಕ್ರಿಕೆಟ್ ಮಂಡಳಿಗೆ ಭ್ರಷ್ಟಾಚಾರದ ಪಿಎಚ್ ಡಿ: ಕೀರ್ತಿ ಅಜಾದ್
ದೆಹಲಿ ಕ್ರಿಕೆಟ್ ಮಂಡಳಿಗೆ ಭ್ರಷ್ಟಾಚಾರದ ಪಿಎಚ್ ಡಿ ಕೊಡಬೇಕು ಎಂದು ಮಾಜಿ ಕ್ರಿಕೆಟಿಗ ಮತ್ತು ಸಂಸದ ಕೀರ್ತಿ ಅಜಾದ್ ಹೇಳಿದ್ದಾರೆ.

ನವದೆಹಲಿ: ದೆಹಲಿ ಕ್ರಿಕೆಟ್ ಮಂಡಳಿಗೆ ಭ್ರಷ್ಟಾಚಾರದ ಪಿಎಚ್ ಡಿ ಕೊಡಬೇಕು ಎಂದು ಮಾಜಿ ಕ್ರಿಕೆಟಿಗ ಮತ್ತು ಸಂಸದ ಕೀರ್ತಿ ಅಜಾದ್ ಹೇಳಿದ್ದಾರೆ.
ದೆಹಲಿ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮೊದಲಿನಿಂದ ಆರೋಪಿಸುತ್ತಾ ಬಂದಿರುವ ಕೀರ್ತಿ ಅಜಾದ್ ಅವರು ಇಂದು ದೆಹಲಿ ಕ್ರಿಕೆಟ್ ಮಂಡಳಿಯ ವಿರುದ್ಧ ವ್ಯಾಪಕ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ಶುಕ್ರವಾರ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಅವರು, "ದೆಹಲಿ ಕ್ರಿಕೆಟ್ ಮಂಡಳಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಬಹುಶಃ ಆಡಳಿತ ಮಂಡಳಿಯ ಸಿಬ್ಬಂದಿಗಳಿಗೆ ಭ್ರಷ್ಟಾಚಾರದ ಪಿಎಚ್ ಡಿ ನೀಡಬಹುದು.ದಶಕಗಳಿಂದಲೂ ಕ್ರಿಕೆಟ್ ಮಂಡಳಿಯಲ್ಲಿ ಭ್ರಷ್ಟಾಚಾರವನ್ನು ಕಾನೂನು ಮಾಡಲಾಗಿದೆ. ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕೇವಲ 15 ವರ್ಷಗಳಲ್ಲಿ ಸುಮಾರು 150 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರು.
ಅಲ್ಲದೆ ಭ್ರಷ್ಟಾಚಾರದ ಕುರಿತು ಮಾಧ್ಯಮಗಳ ವರದಿ ಕುರಿತು ಮಾತನಾಡಿದ ಅವರು, "ಇವೆಲ್ಲವೂ ಕೂಡ ಬಹಿರಂಗ ರಹಸ್ಯಗಳಾಗಿದ್ದು, ವಿವಿಧ ಮ್ಯಾಗಜೀನ್ ಗಳಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ದೊರೆಯುತ್ತದೆ. ನನ್ನ ತಂಡದ ಕೆಲವರು ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಕೂಡಲೇ ಈ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಬೇಕು . ಆ ಮೂಲಕ ಇತರೆ ಕ್ರಿಕೆಟ್ ಮಂಡಳಿಗಳಿಗೆ ಎಚ್ಚರಿಕೆ ನೀಡಬೇಕು. ಸರಣಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪಾಲ್ಗೊಂಡಿರುವವರನ್ನು ಕೂಡಲೇ ಶಿಕ್ಷಿಸಬೇಕು" ಎಂದು ಕೀರ್ತಿ ಅಜಾದ್ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ದೆಹಲಿ ಕ್ರಿಕೆಟ್ ಮಂಡಳಿ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿದ್ದು, ಪ್ರಮುಖವಾಗಿ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಕೀರ್ತಿ ಅಜಾದ್ ಅವರು ಬಹಳ ಗಟ್ಟಿಯಾಗಿ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ದೆಹಲಿ ಕ್ರಿಕೆಟ್ ಮಂಡಳಿ ನೇತೃತ್ವ ವಹಿಸಿದ್ದು, ಅವರ ವಿರುದ್ಧವೇ ಕೀರ್ತಿ ಅಜಾದ್ ಅವರು ಆರೋಪ ಮಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


