ಕ್ರೀಡೆ

ಟೀಂ ಇಂಡಿಯಾಗೆ ಪ್ರೋತ್ಸಾಹದ ಅಗತ್ಯವಿದೆ: ಕಪಿಲ್ ದೇವ್

ಕಠಿಣ ಅಭ್ಯಾಸ ಮಾಡಿ ಚೆನ್ನಾಗಿ ತಯಾರಿಸಿ ನಡೆಸಿದ ಟೀಂ ಮುಂದೆ ಟೀಂ ಇಂಡಿಯಾ ಪರಾಭವಗೊಂಡಿತು. ಪ್ರಾಥಮಿಕ ಹಂತದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ...

ಟೀಂ ಇಂಡಿಯಾಗೆ ಪ್ರೋತ್ಸಾಹದ ಅಗತ್ಯವಿದೆ: ಕಪಿಲ್ ದೇವ್
ಕಪಿಲ್ ದೇವ್
Published On :

ನಿನ್ನೆ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಪರಾಭವಗೊಂಡಿದ್ದು, ಆಟಗಾರರ ವೈಫಲ್ಯದ ಬಗ್ಗೆ ಎಲ್ಲೆಡೆ ಟೀಕೆ ಕೇಳಿಬರುತ್ತಿದೆ. ಇಂತಿರುವಾಗ ತಂಡದ ಪ್ರದರ್ಶನ ಹಾಗೂ ಟೀಂ ಇಂಡಿಯಾ ಆಟಗಾರರ ಬಗ್ಗೆ ಕಪಿಲ್‌ದೇವ್ ಸುದ್ದಿಮಾಧ್ಯಮವೊಂದಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯ ಹೀಗಿದೆ:

ಕಠಿಣ ಅಭ್ಯಾಸ ಮಾಡಿ ಚೆನ್ನಾಗಿ ತಯಾರಿಸಿ ನಡೆಸಿದ ಟೀಂ ಮುಂದೆ ಟೀಂ ಇಂಡಿಯಾ ಪರಾಭವಗೊಂಡಿತು.  ಪ್ರಾಥಮಿಕ ಹಂತದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ  ಸೋತದ್ದು ಬಿಟ್ಟರೆ ಇನ್ನುಳಿದ ಟೀಂಗಳ ವಿರುದ್ಧ ಆಡುವಾಗ ಆಸ್ಟ್ರೇಲಿಯಾ ಲೆಕ್ಕಾಚಾರದ ಆಟವನ್ನೇ ಆಡಿತ್ತು. ಒಂದೊಂದೇ ಆಟವನ್ನಾಡುವಾಗ ಅವರು ಹೊಸ ಹೊಸ ಪಾಠಗಳನ್ನು ಕಲಿಯುತ್ತಿದ್ದರು. ಭಾರತವೂ ಒಳ್ಳೆಯ ಟೀಂ ಆಗಿತ್ತು. ಚೆನ್ನಾಗಿ ಸ್ಕೋರ್ ಮಾಡಬಲ್ಲ ಬ್ಯಾಟ್ಸ್‌ಮೆನ್‌ಗಳು, ಉತ್ತಮ ಲೈನ್ ಆ್ಯಂಡ್ ಲೆಂಥ್‌ನಲ್ಲಿ ಬೌಲಿಂಗ್ ಮಾಡುವ ಬೌಲರ್‌ಗಳು...ಆದರೆ ನಿರ್ಣಾಯಕ ಪಂದ್ಯದಲ್ಲಿ ಎಲ್ಲರೂ ನಿಸ್ಸಹಾಯಕರಾಗಿಬಿಟ್ಟರು.

ದೊಡ್ಡ ಪಂದ್ಯಗಳಲ್ಲಿ ಬೇಕಾಗಿರುವುದು ಸಂಯಮ. ನಿರ್ಣಾಯಕ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲವನೇ ಉತ್ತಮ ಆಟಗಾರನಾಗುತ್ತಾನೆ. ಆದರೆ ಎಲ್ಲಾ ಸಮಯದಲ್ಲೂ ಇದು ಸಾಧ್ಯವಾಗವುದಿಲ್ಲ. ವಿರಾಟ್ ಕೊಹ್ಲಿ ಔಟಾಗಿದ್ದೇ ಇದಕ್ಕೆ ಉದಾಹರಣೆ.

ಟಾಸ್ ಗೆದ್ದ ಕ್ಷಣವೇ ಆಸ್ಟ್ರೇಲಿಯಾ ಅಧಿಪತ್ಯ ಸ್ಥಾಪಿಸಿತ್ತು. ಇಂಥಾ ಪಿಚ್‌ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಒಳ್ಳೆಯ ಸ್ಕೋರ್ ತಂದುಕೊಡುತ್ತದೆ. ಮೊದಲು ಬ್ಯಾಟಿಂಗ್ ಮಾಡಿದರೆ ಒತ್ತಡವಿಲ್ಲದೆ ಆಡಬಹುದು. ಪಿಚ್‌ನಿಂದ ಏನಾದರೂ ಸಹಾಯ ಸಿಗುವಾಗಲೇ ನಮ್ಮ ಬೌಲರ್‌ಗಳು ಘರ್ಜಿಸುತ್ತಾರೆ ಎಂದು ನನಗೆ ಬಹಳಷ್ಟು ಬಾರಿ ಅನಿಸಿದೆ. ಆದರೆ ಅದು ಸಿಗದೇ ಹೋದಾಗ ಆಟ ನಮ್ಮ ಕೈಜಾರಿ ಹೋಯಿತು.

ಟೆಸ್ಟ್, ಸರಣಿ ಹಾಗೂ ತ್ರಿಕೋನ ಸರಣಿಗಳಲ್ಲಿ ನಮ್ಮನ್ನು ಬಗ್ಗು ಬಡಿದ ಟೀಂ ಮುಂದೆ ಸೆಮಿಫೈನಲ್ ಆಡುವಾಗ ಇಂಡಿಯನ್ ಬೌಲರ್‌ಗಳು ಬಹಳಷ್ಟು ವಿಷಯಗಳನ್ನು ಮರೆತರು. ಹೀಗಿರುವಾಗ ಆತ್ಮವಿಶ್ವಾಸವೂ ಮಂಕಾಯಿತು. ಇತ್ತ ಆಸ್ಟ್ರೇಲಿಯಾ ಚೆನ್ನಾಗಿ ಹೋಂವರ್ಕ್ ಮಾಡಿ ಬಂದಿತ್ತು. ಭಾರತ ಬ್ಯಾಟಿಂಗ್‌ಗೆ ಇಳಿದಾಗ ಆಕ್ರಮಣಕಾರಿಯಾದ ಬೌಲಿಂಗ್ ಮಾತ್ರವಲ್ಲದೆ ಕಟ್ಟುನಿಟ್ಟಾದ ಕ್ಷೇತ್ರರಕ್ಷಣೆಯನ್ನು ಕ್ಲಾರ್ಕ್ ನಿಯೋಜನೆ ಮಾಡಿದ್ದರು.  ವಿರಾಟ್ ಕೊಹ್ಲಿಯ ವಿಕೆಟ್ ಮೇಲೆಯೇ ಅವರ ಕಣ್ಣಿತ್ತು, ಅವರ ಲಕ್ಷ್ಯವೂ ಅದಾಗಿತ್ತು. ವಿರಾಟ್‌ಗೆ ಸ್ಕೋರ್ ಮಾಡಲು ಬಿಡದೆ ಒತ್ತಡ ಹೇರಬೇಕೆಂಬುದು ಅವರ ಯೋಜನೆಯಾಗಿತ್ತು, ಅದರಲ್ಲಿ ಅವರು ಸಫಲತೆಯನ್ನೂ ಕಂಡರು. ನಿನ್ನೆ ಕೊಹ್ಲಿಯ ದಿನವಾಗಿರಲಿಲ್ಲ. ಮಿಚೆಲ್ ಜಾನ್ಸನ್‌ನ ವಿರುದ್ಧದ ಹೋರಾಟದಲ್ಲಿ ಕೊಹ್ಲಿ ಸೋತು ಬಿಟ್ಟರು. ಈ ಸೋಲಿನ ಕಾರಣಗಳನ್ನು ಕೊಹ್ಲಿ ಮನನ ಮಾಡಿಕೊಳ್ಳಲಿ.

ಜಡೇಜಾ ಬಗ್ಗೆ ನಾನು ವ್ಯಾಕುಲನಾಗಿದ್ದೇನೆ. ಧೋನಿ ಉತ್ತಮ ಬೆಂಬಲ ನೀಡಿದ್ದರೂ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬೌಲಿಂಗ್‌ನಲ್ಲೂ ಅವರು ಸೋತರು. ಏಳನೇ ಕ್ರಮಾಂಕದಲ್ಲಿ ಕ್ರೀಸಿಗಿಳಿಯುವ ಬ್ಯಾಟ್ಸ್‌ಮೆನ್ ಬಗ್ಗೆ ನಾಯಕನಿಗೆ ಕೆಲವು ನಿರೀಕ್ಷೆಗಳಿರುತ್ತವೆ. ತನ್ನ ಆಟದ ಬಗ್ಗೆ ಜಡೇಜಾ ಸ್ವಯಂ ವಿಮರ್ಶೆ ಮಾಡಿಕೊಳ್ಳುವುದೊಳಿತು. ಅಶ್ವಿನ್ ಮತ್ತೊಮ್ಮೆ ಒಳ್ಳೆಯ ಪ್ರದರ್ಶನ ನೀಡಿದರು. ಆದರೆ ಅವರೊಬ್ಬರಿಂದ ಏನು ಮಾಡಲು ಸಾಧ್ಯ? ಟೆಸ್ಟ್ ಸರಣಿಗಳಲ್ಲಿ ಕಲಿತ ಪಾಠಗಳನ್ನು ಪೇಸ್ ಬೌಲರ್‌ಗಳು ಮರೆತೇ ಬಿಟ್ಟರು. ಅವರು ಶಾರ್ಟ್ ಬಾಲ್‌ಗಳನ್ನು ಎಸೆಯುತ್ತಲೇ ಇದ್ದರು. ಇದಿಲ್ಲಿ ವರ್ಕೌಟ್ ಆಗುತ್ತಿಲ್ಲ ಎಂದು ಅವರಿಗೆ ಗೊತ್ತೇ ಆಗಿಲಿಲ್ಲ.

ಭಾರತಕ್ಕೆ ಈಗ ಬೇಕಾಗಿರುವುದು ಪ್ರೋತ್ಸಾಹ. ಮುಂದಿನ ವಿಶ್ವಕಪ್ ಆಡಲು ಬಹುನಿರೀಕ್ಷೆಯಿರುವ ಬಹಳಷ್ಟು ಆಟಗಾರರು ಟೀಂನಲ್ಲಿ ಇದ್ದಾರೆ. ಅಕ್ಷರ್ ಪಟೇಲ್ ನಂತ ಯುವ ಆಟಗಾರರು ಟೀಂ ಇಂಡಿಯಾ ಜತೆಗಿದ್ದು ಪಾಠಗಳನ್ನು ಕಲಿತಿರಬಹುದು. ಧವನ್‌ನಿಂದ ಪ್ರಬುದ್ಧತೆಯನ್ನು ನಾನು ನಿರೀಕ್ಷಿಸುತ್ತಿದ್ದೇನೆ. ರೋಹಿತ್‌ಗೆ ಇನ್ನಷ್ಟು ಬೃಹತ್ ಇನ್ನಿಂಗ್ಸ್‌ಗಳು ಸಿಗಲಿ. ರೈನಾಗೆ ಇನ್ನೂ ಸಮಯವಿದೆ. ಅಜಿಂಕ್ಯಾ ರೆಹಾನೆ ಸ್ಥಿರತೆ ಮತ್ತು ಕ್ಷಮತೆಯಿರುವ ಆಟಗಾರ, ಭವಿಷ್ಯತ್ತಿನಲ್ಲಿ ಉತ್ತಮ ಅವಕಾಶಗಳು ಅವರಿಗೆ ಸಿಗಲಿದೆ.  ಭಾರತವನ್ನು ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದವರೆಗೆ ತಲುಪಿಸಿದ ಟೀಂ ಇಂಡಿಯಾಗೆ ಹ್ಯಾಟ್ಸ್ ಆಫ್..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.