ಕ್ರೀಡೆ

ಪ್ರಶಸ್ತಿ ಗೆದ್ದ ಕ್ಯಾರೊಲಿನಾ ನಿರಾಸೆ ತಂದ ಸೈನಾ

ಜಾಗತಿಕ ಬ್ಯಾಡ್ಮಿಂಟನ್ ರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಒಂದು ಮಹಾ ಅವಕಾಶ ಭಾರತದ ಕೈ ತಪ್ಪಿಹೋಗಿದೆ. ಭಾರತದ ಅಗ್ರಶ್ರೇಯಾಂಕಿತೆ ಹಾಗೂ ವಿಶ್ವ ರ್ಯಾಂಕಿಂಗ್ ನಲ್ಲಿ...

ಪ್ರಶಸ್ತಿ ಗೆದ್ದ ಕ್ಯಾರೊಲಿನಾ  ನಿರಾಸೆ ತಂದ ಸೈನಾ
ಪ್ರಶಸ್ತಿ ಗೆದ್ದ ಕ್ಯಾರೊಲಿನಾ
Published On :

ಬರ್ಮಿಂಗ್‍ಹ್ಯಾಮ್: ಜಾಗತಿಕ ಬ್ಯಾಡ್ಮಿಂಟನ್ ರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಒಂದು ಮಹಾ ಅವಕಾಶ ಭಾರತದ ಕೈ ತಪ್ಪಿಹೋಗಿದೆ. ಭಾರತದ ಅಗ್ರಶ್ರೇಯಾಂಕಿತೆ ಹಾಗೂ ವಿಶ್ವ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನಗಳಿಸಿದ ಆಟಗಾರ್ತಿ ಸೈನಾ ನೆಹ್ವಾಲ್ , ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಪರಾಭವ ಹೊಂದುವ ಮೂಲಕ, ಈ ಪಂದ್ಯಾವಳಿ ಗೆದ್ದ ಭಾರತದ ಮೊಟ್ಟಮೊದಲ ಮಹಿಳೆ ಎಂಬ ಚಾರಿತ್ರಿಕ ಸಾಧನೆ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ಅಲ್ಲದೆ, ವಿಶ್ವ ಮಹಿಳಾ ದಿನವಾದ ಭಾನುವಾರದಂದು ಭಾರತೀಯ ಸ್ತ್ರೀಯರು ಹೆಮ್ಮೆ ಪಡುವಂತೆ ಮಾಡಬಹುದಾಗಿದ್ದ ಅವಕಾಶವನ್ನೂ ಅವರು ತಪ್ಪಿಸಿಕೊಂಡಿದ್ದಾರೆ.ಪ್ರಶಸ್ತಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ದ 6ನೇ ಶ್ರೇಯಾಂಕಿತೆ ಸ್ಪೇನ್ ನ ಕ್ಯಾರೋಲಿನಾ ಮರೀನ್ ವಿರುದ್ಧ  21-16, 14-21, 7-21 ಗೇಮ್ ಗಳಿಂದ ಸೋಲನುಭವಿಸಿ ಭಾರತೀಯ ಅಭಿಮಾನಿಗಳನ್ನು ನಿರಾಸೆಯ ಮಡುವಲ್ಲಿ ದೂಡಿದರು.

ಅವಕಾಶ ಕೈಚೆಲ್ಲಿದ ಸೈನಾ
ಬರ್ಕ್ಲೇ ಕಾರ್ಡ್ ಒಳ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ ಎದುರು ಮುಖಾಮುಖಿಯಾಗಿದ್ದ ಸೈನಾ ಅವರಿಗೆ ಈ ಪಂದ್ಯ ಅತಿ ಕಷ್ಟ ಎನ್ನುವಂತಿರಲಿಲ್ಲ. ಈ ಹಿಂದೆ ಉಭಯರು ಮೂರು ಬಾರಿ ಮುಖಾಮುಖಿಯಾಗಿದ್ದಾಗಲೂ ಸೈನಾ ಜಯ ಸಾಧಿಸಿದ್ದರು. ಅದೊಂದೇ ಸಾಕಿತ್ತು ಈ ಪಂದ್ಯದಲ್ಲಿ ಸೈನಾ ಆತ್ಮವಿಶ್ವಾಸದಿಂದ ಆಡಲು. ಎಲ್ಲರ ನಿರೀಕ್ಷೆಯಂತೆ ಅವರೂ ಮೊದಲ ಗೇಮ್ ಗೆದ್ದರು. ಆದರೆ 2ನೇ ಹಾಗೂ 3ನೇ ಗೇಮ್ ಗಳಲ್ಲಿ ಅವರ ದೇಹ ಹಾಗೂ ಮನಸ್ಸು ಲಯ ಕಳೆದಗಕೊಂಡವು. ಇದರ ಲಾಭ ಪಡೆದ ಕ್ಯಾರೋಲಿನಾ ಕೆಲವೇ ಅಂಕಗಳಲ್ಲಿ ಮುಂದಿದ್ದ ಸೈನಾರನ್ನು ಹಿಂದಿಕ್ಕಿ ಆ ಗೇಮ್ ಗೆದ್ದುಬಿಟ್ಟರು.

ಸಾಧನೆಯಿಂದ ದೂರ...
ಭಾರತೀಯರಿಗೆ ಸೈನಾ ಮೇಲೆ ಅದೆಂಧಾ ಭರವಸೆಯಿತ್ತೆಂದರೆ, ಮೂರನೇ ಗೇಮ್ ನಲ್ಲಿ ಸೈನಾ ತಿರುಗಿಬೀಳುವರೆಂದೇ ಎಲ್ಲರೂ ಭಾವಿಸಿದ್ದರು. ಟ್ವಿಟರ್ ಸೇರಿದಂತೆ ಹಲವಾರು ವೆಬ್ ಸೈಟ್ ಗಳಲ್ಲಿ ಪಂದ್ಯ ಲೈವ್ ಸ್ಟ್ರೀಮಿಂಗ್ ನಡೆಯುತ್ತಿದ್ದಾಗ ಹಲವಾರು ಮಂದಿ ಅದಕ್ಕೆ ಪ್ರತಿಕ್ರಿಯಿಸಿ ಸೈನಾ ಗೆಲ್ಲಲಿ ಎಂದೇ ಹಾರೈಸಿದ್ದರು. ಆದರೆ ಅಲ್ಲಿ ಅಂಗಣದಲ್ಲಿ ನಡೆದಿದ್ದೇ ಬೇರೆ.

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಈ ಹಿಂದೆ ಭಾರತಕ್ಕೆ ಎರಡು ಬಾರಿ ಒಲಿದಿತ್ತು. ಆ ಎರಡು ಬಾರಿಯೂ ಪುರುಷರ ವಿಭಾಗದಿಂದ ಸಾಧನೆ ಹೊರಹೊಮ್ಮಿತ್ತು. 1980ರಲ್ಲಿ ಪ್ರಕಾಶ್ ಪಡುಕೋಣೆ, 2001ರಲ್ಲಿ ಪುಲ್ಲೇಲ ಗೋಪಿಚಂದ್ ಇಲ್ಲಿ ತ್ರಿವರ್ಣ ರಂಗು ಚೆಲ್ಲಿದ್ದರು. ಸೈನಾ ಸಹ 2010, 2013ರಲ್ಲಿ ಇಲ್ಲಿ ಸೆಮಿ ಫೈನಲ್ ತಲುಪಲಷ್ಟೇ ಶಕ್ತವಾಗಿದ್ದರು. ಆದರೆ, ಈ ಬಾರಿ ಫೈನಲ್ ಪ್ರವೇಶಿಸುವ ಮೂಲಕ ಪ್ರಶಸ್ತಿ ಹಂತಕ್ಕೆ ಸಾಗಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ, ಈ ಹೆಗ್ಗಳಿಕೆಯನ್ನು ಸಾಧನೆಯನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಮತ್ತಷ್ಟು ನಿರಾಸೆ ಪಡುವ ವಿಚಾರ. ಇನ್ನು 9 ದಿನ ಕಳೆದರೆ ತಮ್ಮ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಸೈನಾ, ತಮ್ಮ ಜನ್ಮದಿನಕ್ಕೆ ತಾವೇ ಪಡೆಯಬಹುದಾಗಿದ್ದ ದೊಡ್ಡ ಗಿಫ್ಟ್ ನಿಂದ ವಂಚಿತರಾಗಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.