ಡೇವಿಸ್ ಕಪ್ ಗೆ ಪೇಸ್ ಅಲಭ್ಯ
ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಿಂದ ಭಾರತದ ಹಿರಿಯ ಆಟಗಾರ ಲಿಯಾಂಡರ್ ಫೇಸ್ ವಿಮುಖಗೊಂಡಿದ್ದಾರೆ.....

ನವದೆಹಲಿ: ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಿಂದ ಭಾರತದ ಹಿರಿಯ ಆಟಗಾರ ಲಿಯಾಂಡರ್ ಫೇಸ್ ವಿಮುಖಗೊಂಡಿದ್ದಾರೆ.
ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಈ ಮುನ್ನ ಫೇಸ್ ಅವರನ್ನು ಆಯ್ಕೆ ಮಾಡಲಾಗಿತ್ತು. ಸಿಂಗಲ್ಸ್ ವಿಭಾಗದ ಸ್ಟಾರ್ ಆಟಗಾರರಾದ ಸೋಮ್ ದೇವ್ ದೇವವರ್ಮನ್ ಹಾಗೂ ಯುಕಿ ಭಾಂಬ್ರಿಯವರುಳ್ಳ ತಂಡದ ನಾಯಕತ್ವವನ್ನು ಪೇಸ್ ಅವರಿಗೆ ನೀಡಲಾಗಿತ್ತು. ಆದರೆ ಅವರು ಟೂರ್ನಿಯಿಂದ ಹೊರಗುಳಿದಿರುವ ಕಾರಣ ಸೋಮ್ ದೇವ್ ಗೆ ನಾಯಕತ್ವಗ ಜವಾಬ್ದಾರಿ ವಹಿಸಲಾಗಿದೆ.
ಪೇಸ್ ಅಲಭ್ಯತೆ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಭಾರತೀಯ ಟೆನಿಸ್ ಸಂಸ್ಥೆಯ ಆಯ್ಕೆ ಸಮಿತಿ ಅಧ್ಯಕ್ಷ ಎಸ್.ಪಿ ಮಿಶ್ರಾ, ಪೇಸ್ ಅವರು ವಯಕ್ತಿಕವಾಗಿ ಇತರ ಕೆಲಕಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಬಾರಿಯ ಡೇವಿಸ್ ಕಪ್ ಟೂರ್ನಿಯಿಂದ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ನಿರ್ಧಿಷ್ಟ ಕಾರಣವನ್ನು ಅವರು ತಿಳಿಸಿಲ್ಲ. ಮುಂದಿನ ಸೆಪ್ಟಂಬರ್ ವೇಳೆಗೆ ಆಯೋಜಿಸಲ್ಪಡುವ ಡೇವಿಸ್ ಕಪ್ ಟೂರ್ನಿಗೆ ಲಭ್ಯವಾಗಬಹುದು ಎಂದು ಹೇಳಿದರು.
ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸರ್ಬಿಯಾ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ಪೇಸ್ ಭಾಗವಹಿಸಿದ್ದರು. ಆಗ ಭಾರತ ತಂಡ 2-3ರ ಅಂತರದಲ್ಲಿ ಆ ಪಂದ್ಯಾವಳಿಯಲ್ಲಿ ಸೋಲನುಭವಿಸಿತ್ತು.
ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಜು.17 ರಿಂದ 19 ರವರೆಗೆ ನಡೆಯಲಿರುವ ಈ ಮುಖಾಮುಖಿಯಲ್ಲಿ ಸೋಮ್ ದೇವ್ ಮತ್ತು ಯುಕಿ ಸಿಂಗಲ್ಸ್ ಗಳಲ್ಲಿ ಆಡಲಿದ್ದಾರೆ. ರೋಹನ್ ಬೋಪಣ್ಣ ಮತ್ತು ಸಾಕೇತ್ ಮೈನಿ ಡಬಲ್ಸ್ ನಲ್ಲಿ ಸೆಣಸಲಿದ್ದಾರೆ. ತಂಡದಲ್ಲಿ ರಾಮ್ ಕುಮಾರ್ ರಾಮನಾಥನ್ ಅವರಿಗೆ ಮೀಸಲು ಆಟಗಾರನ ಸ್ಥಾನ ನೀಡಲಾಗಿದೆ.
ಹವಾಮಾನದ ಚಿಂತೆಯಿಲ್ಲ: ನ್ಯೂಜಿಲೆಂಡ್ ನಲ್ಲಿ ಭಾರಿ ತಂಪು ಹವಾಮಾನ ಇರುವ ಬಗ್ಗೆ ವಿವರಣೆ ನೀಡಿದ ಮಿಶ್ರಾ ಅಲ್ಲಿ ಕೇವಲ 5ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇಂಥ ತಂಪು ಹವಾಮಾನದಲ್ಲಿ ಭಾರತೀಯರ ಆಟಗಾರರು ಆಡಿಲ್ಲ. ಆದರೆ ಡೇವಿಸ್ ಕಪ್ ಟೂರ್ನಿಯು ಅಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವುದರಿಂದ, ಭಾರತೀಯರ ಪ್ರದರ್ಶನಕ್ಕೆ ಹವಾಮಾನ ಅಡ್ಡಿಯಾಗಲಾರದು. ಟೂರ್ನಿ ಆರಂಭಕ್ಕೆ ಒಂದು ವಾರ ಮುಂಚೆಯೇ ಭಾರತ ತಂಡ ಕ್ರೈಸ್ಟ್ ಚರ್ಚ್ ತಲುಪಲಿದೆ ಎಂದು ಅವರು ತಿಳಿಸಿದರು.
ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಪ್ರಮುಖ ಸಿಂಗಲ್ಸ್ ಆಟಗಾರರಿಲ್ಲ ಎಂದ ಅವರು, ಡಬಲ್ಸ್ ಆಟಗಾರರಾದ ರುಬಿನ್ ಸ್ಟಾಥಾಮ್ , ಆರ್ಟೆಮ್ ಸಿಟಾಕ್, ಮೈಕಲ್ ವೀನಸ್ ಹಾಗೂ ಮಾರ್ಕಸ್ ಡೇನಿಯಲ್ ಅವರಿದ್ದಾರೆ ಎಂದು ಹೇಳಿದರು. ಈ ಮೂವರೂ ಡಬಲ್ಸ್ ರ್ಯಾಂಕಿಂಗ್ ನಲ್ಲಿ ಟಾಪ್ 100 ರಲ್ಲಿ ಸ್ಥಾನ ಪಡೆದಿದ್ದಾರೆ. ಸಿಟಾಕ್ ಅವರು 42 ನೇ ರ್ಯಾಂಕ್ ಹೊಂದಿದ್ದರೆ, ವೀನಸ್ ಹಾಗೂ ಮಾರ್ಕಸ್ ಡೇನಿಯಲ್ ಅವರು ಕ್ರಮವಾಗಿ 52 ಹಾಗೂ 78ನೇ ಶ್ರೇಯಾಂಕ ಗಳಿಸಿದ್ದಾರೆ ಎಂದು ತಿಳಿಸಿದರು. ಕಳೆದ ಬಾರಿಯ ನ್ಯೂಜಿಲೆಂಡ್ -ಚೀನಾ ನಡುವಿನ ಡೇವಿಸ್ ಕಪ್ ಮುಖಾಮುಖಿಯಲ್ಲಿ ಇದೇ ಆಟಗಾರರು ಚೀನಿಯರನ್ನು ಪರಭಾವಗೊಳಿಸಿದ್ದರು. ಅದೇ ತಂಡವನ್ನು ಭಾರತದೆದುರು ಕಣಕ್ಕಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


