ಮೀರ್ ಪುರ್ ನಲ್ಲಿ ಟೀಂ ಇಂಡಿಯಾ ತಾಲೀಮು
ಭಾರತ ಕ್ರಿಕೆಟ್ ತಂಡದ ಆಟಗಾರರು ಆತಿಥೇಯ ಬಾಂಗ್ಲಾ ದೇಶದ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಸೋಮವಾರ ಭರ್ಜರಿ ತಾಲೀಮು ಆರಂಭಿಸಿದ್ದಾರೆ.

ಢಾಕಾ: ಮೀರ್ಪುರ್, ಭಾರತ ಕ್ರಿಕೆಟ್ ತಂಡದ ಆಟಗಾರರು ಆತಿಥೇಯ ಬಾಂಗ್ಲಾ ದೇಶದ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಸೋಮವಾರ ಭರ್ಜರಿ ತಾಲೀಮು ಆರಂಭಿಸಿದ್ದಾರೆ. ಢಾಕಾದಲ್ಲಿರುವ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ ಪಡೆ ವಿವಿಧ ಬಗೆಯ ಕಸರತ್ತುಗಳಿಗೆ ಅಣಿಯಾಯಿತು.
ಕೊಲ್ಕೋತ್ತಾದಿಂದ ಬೆಳಗ್ಗೆ ಪ್ರಯಾಣ ಬೆಳೆಸಿ ನೇರವಾಗಿ ಇಲ್ಲಿಗೆ ಬಂದಿಳಿದಿದ್ದ ಭಾರತದ ಆಟಗಾರರು ಮಧ್ಯಾಹ್ನದ ನಂತರ ನೆಟ್ಸ್ ನಲ್ಲಿ ತೊಡಗಿಕೊಂಡರು. ಫಾತುಲಾದಲ್ಲಿನ ಕ್ರೀಡಾಂಗಣದಲ್ಲಿ ಕಸರತ್ತಿಗೆ ಅಣಿಯಾದರು. ಪಂದ್ಯದ ಮುನ್ನಾ ದಿನವಾದ ಮಂಗಳವಾರ ಸಹ ಅಭ್ಯಾಸ ಮುಂದವರಿಯಲಿದೆ ಎಂದು ತಂಡದ ಆಡಳಿತಾಧಿಕಾರಿ ವ್ಯವಸ್ಥಾಪಕ ವಿಶ್ವರೂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಟಗಾರರೆಲ್ಲರೂ ದೈಹಿಕವಾಗಿ ಫಿಟ್ ಆಗಿದ್ದು, ಕೋಲ್ಕತಾದಲ್ಲಿನ ಅಭ್ಯಾಸದ ಕೊನೆಯ ದಿನ ಎದೆಗೆ ಚೆಂಡು ಬಡಿದು ಗಾಯಗೊಂಡಿದ್ದ ವಿಕೆಟ್ ಕೀಪರ್ ವೃಧಿಮಾನ್ ಸಹಾ ಫಿಟ್ ಆಗಿದ್ದಾರೆ. ಹಾಗಾಗಿ ಯಾವುದೇ ರೀತಿಯ ಸಮಸ್ಯೆ ಸದ್ಯ ತಂಡದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.
ಬೌಲರ್ ಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್, ಮತ್ತು ಹರ್ ಭಜನ್ ಸಿಂಗ್ ಆಡಲು ಕಾತುರದಲ್ಲಿದ್ದಾರೆ. ಆದರೆ ಅಂತಿಮವಾಗಿ ತಂಡ ನಾಲ್ವರು ಅಥವಾ ಐವರು ತಜ್ಞ ಬೌಲರ್ ಗಳನ್ನು ಹೊಂದಬೇಕೆ ಬೇಡವೆ ಎಂಬುದರ ಕುರಿತು ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ನಿರ್ದೇಶಕ ರವಿಶಾಸ್ತ್ರಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಐವರು ದಾಳಿಕೋರರೊಂದಿಗೆ ಕಣಕ್ಕಿಳಿಯಲು ಮನಸ್ಸು ಮಾಡಿದರೆ, ವೇಗಿ ವರುಣ್ ಅರುಣ್ ಮತ್ತು ಲೆಗ್ ಸ್ಪಿನ್ನರ್ ಕರಣ್ ಶರ್ಮಾ ನಡುವೆ ಪೈಪೋಟಿ ನಡೆಯಲಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ವೇಳೆ ಮಹೇಂದ್ರ ಸಿಂಗ್ ಧೋನಿ ದೀರ್ಘಾವಧಿಯ ಪಂದ್ಯಗಳಿಗೆ ನಿವೃತ್ತಿ ಹೇಳಿದ ನಂತರ, ಆ ಸ್ಥಾನ ಅಲಂಕರಿಸಿರುವ ವಿರಾಟ್ ಕೊಹ್ಲಿಗೆ ಇದು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಟೆಸ್ಟ್ ನಾಯ್ಕತ್ವದ ಜವಾಬ್ದಾರಿ ಕಲ್ಪಿಸಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕೈಕ ಟೆಸ್ಟ್ ಪಂದ್ಯ ಫಾತುಲಾದಲ್ಲಿ ಬರುವ ಬುಧವಾರದಿಂದ ಆರಂಭವಾಗುವ ಮೂಲಕ ಸರಣಿಗೆ ಚಾಲನೆ ದೊರೆಯಲಿದೆ.
ಈ ಮುನ್ನ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಪ್ರತಿಭಾನ್ವಿತ ಯುವ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸದಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. 2013 ರ ಮಾರ್ಚ್ ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಹರ್ಭಜನ್ ಗೆ ಆಯ್ಕೆದಾರರು ಮತ್ತೊಂದು ಅವಕಾಶ ನೀಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಭಾರತದ ಪ್ರದರ್ಶನ ಉತ್ತಮವಾಗಿದೆ.ಬಾಂಗ್ಲಾದೇಶ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ 6ರಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಡ್ರಾ ಅಂತ್ಯಗೊಂಡಿತ್ತು. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು 2009-10 ರಲ್ಲಿ ಆಗ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿತ್ತು.
ಇತಿಹಾಸ ನೋಡಿದರೆ ಟೆಸ್ಟ್ ಮತ್ತು ಏಕದಿನ ಸರಣಿಗಳೆರಡರಲ್ಲೂ ಭಾರತ ತನ್ನ ಪ್ರಭುತ್ವ ಮೆರೆಯುವುದರಲ್ಲಿ ಅನುಮಾನವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ತವರಿನಲ್ಲಿ ಬಾಂಗ್ಲಾ ಪಡೆ ಹೆಚ್ಚು ಬಲಿಷ್ಠವಾಗಿರುತ್ತದೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಇತಿಹಾಸದಲ್ಲೇ ಮೊದಲ ಬಾರಿಗೆ ಸರಣಿ ಜಯಿಸಿದ ಸಾಧನೆ ಮಾಡಿರುವ ಆತಿಥೇಯ ತಂಡವನ್ನು ವಿರಾಟ್ ಕೊಹ್ಲಿ ಪಡೆ ಹಗುರವಾಗಿ ಕಾಣುವಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


