ಗೇಯ್ಲ್ ರನ್ ರಸದೌತಣ
ಒಂದು ಇನಿಂಗ್ಸ್‍ನಲ್ಲಿ ಬರೋಬ್ಬರಿ 15 ಸಿಕ್ಸರ್ ಯಾರಾದ್ರೂ ಹೊಡೆಯಬಲ್ಲರಾ ಅಂತ ಯಾರಾದ್ರೂ ಕ್ರಿಕೆಟ್ ಅಭಿಮಾನಿಗಳನ್ನು ಕೇಳಿದರೆ ಅವರಿಂದ ಮೊದಲು ಬರೋ ಹೆಸರು - ಕ್ರಿಸ್ ಗೇಯ್ಲ್...

ಲಂಡನ್: ಒಂದು ಇನಿಂಗ್ಸ್‍ನಲ್ಲಿ ಬರೋಬ್ಬರಿ 15 ಸಿಕ್ಸರ್ ಯಾರಾದ್ರೂ ಹೊಡೆಯಬಲ್ಲರಾ ಅಂತ ಯಾರಾದ್ರೂ ಕ್ರಿಕೆಟ್ ಅಭಿಮಾನಿಗಳನ್ನು ಕೇಳಿದರೆ ಅವರಿಂದ ಮೊದಲು ಬರೋ ಹೆಸರು - ಕ್ರಿಸ್ ಗೇಯ್ಲ್.
ಹೌದು. ವೆಸ್ಟ್ ಇಂಡೀಸ್‍ನ ಈ ದೈತ್ಯ ಪ್ರತಿಭೆ ಜಾಗತಿಕ ಕ್ರಿಕೆಟ್ ನಲ್ಲಿ ಮೂಡಿಸಿರುವ ಛಾಪು ಅಂಥದ್ದು. ಅಂತಹ ಕ್ರಿಸ್ ಗೇಯ್ಲ್ ದೂರದ ಲಂಡನ್ ನಲ್ಲಿ ಮತ್ತೊಂದು ರನ್ ಗಳ ರಸದೌತಣ
ಉಣಬಡಿಸಿದ್ದಾರೆ. ಟಿ-20 ಬ್ಲಾಸ್ಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಅವರು, ಭಾನುವಾರ ಕೆಂಟ್ ತಂಡದ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಸಮರ್ ಸೆಟ್ ತಂಡದ ಪರ ಗುಡುಗಿದ್ದಾರೆ. ಕೇವಲ 62 ಎಸೆತಗಳಲ್ಲಿ 15 ಸಿಕ್ಸರ್, 10 ಬೌಂಡರಿ ಸೇರಿದಂತೆ ಅಜೇಯ 151 ರನ್ ಚಚ್ಚಿದ್ದಾರೆ ! ಆದರೆ, ಇಲ್ಲಿ ಒಂದು ನಿರಾಸೆಯ ಸಂಗತಿ ಎಂದರೆ ಗೇಯ್ಲ್ ರ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಸಮರ್‍ಸೆಟ್ ತಂಡ ಸೋತಿದೆ.
ಟಾಟನ್ ಕಂಟ್ರಿ ಗ್ರೌಂಡ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಕೆಂಟ್ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಸಮರ್ ಸೆಟ್ ತಂಡದ ಪರ ಕ್ರಿಸ್ ಗೇಯ್ಲ್ ಹಾಗೂ ಟ್ರೆಸ್ಕೋಥಿಕ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಸಮರ್ ಸೆಟ್ ಕೇವಲ 22 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ತಂಡಕ್ಕೆ ಶಕ್ತಿ ತುಂಬಿದ ಕ್ರಿಸ್ ಗೇಯ್ಲ್, ಸಿಕ್ಸರ್, ಬೌಂಡರಿಗಳೊಂದಿಗೆ ಆರ್ಭಟಿಸಿದರು.
ಆದರೆ, ಗೇಯ್ಲ್ ಅವರ ಈ ಆಟ ಹೊಳೆಯಲ್ಲಿ ಹುಣಸೆ ತೊಳೆದಂತಾಯಿತು. ತಂಡದ ಯಾವೊಬ್ಬರಿಂದ ಕ್ರೀಸ್ ನಲ್ಲಿ ಅವರಿಗೆ ಉತ್ತಮ ಸಾಥ್ ಸಿಗದ ಹಿನ್ನಲೆಯಲ್ಲಿ ಸಮರ್‍ಸೆಟ್ 20 ಓವರ್‍ಗಳಲ್ಲಿ 224 ರನ್ ಗಳಿಸಿ, ಕೇವಲ 3 ರನ್‍ಗಳ ಸೋಲು ಅನುಭವಿಸಿತು. 151 ರನ್‍ಗಳೊಂದಿಗೆ ಗೇಯ್ಲ್ ಅಜೇಯರಾಗುಳಿದರು ಹಾಗೂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


