ಪುಟಿದ ಕರ್ನಾಟಕ, ಮಂಕಾದ ಮುಂಬೈ
ಭರವಸೆಯ ವೇಗಿಗಳಾದ ವಿನಯ್ ಕುಮಾರ್ ಮತ್ತು ಶ್ರೀನಾಥ್ ಅರವಿಂದ್ ಅವರ ಪರಿಣಾಮಕಾರಿ...

ಮುಂಬೈ: ಭರವಸೆಯ ವೇಗಿಗಳಾದ ವಿನಯ್ ಕುಮಾರ್ ಮತ್ತು ಶ್ರೀನಾಥ್ ಅರವಿಂದ್ ಅವರ ಪರಿಣಾಮಕಾರಿ ಬೌಲಿಂಗ್ ಕೈಚಳಕದ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ, ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ತಂಡದ ಮೊದಲ ಇನಿಂಗ್ಸ್ ಅನ್ನು 436 ರನ್‌ಗಳ ಮೊತ್ತಕ್ಕೆ ಸ್ಥಗಿತಗೊಳಿಸಿತು.
ಶುಕ್ರವಾರದ ಮೊದಲ ದಿನದಾಟದಲ್ಲಿ 179 ರನ್‌ಗಳ ಜೊತೆಯಾಟವಾಡಿ ವಿಜೃಂಭಿಸಿದ್ದ ಮುಂಬೈನ ಸಿದ್ದೇಶ್ ಲಾಡ್ ಮತ್ತು ನಿಖಿಲ್ ಪಾಟೀಲ್ ಶನಿವಾರ ತಮ್ಮ ಶತಕ ಪೂರೈಸಿ ಹೊರನಡೆದರು. ಆದರೆ, ನಂತರ ಬಂದ ಬ್ಯಾಟ್ಸ್ ಮನ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಮುಂಬೈ ಕೇವಲ 79 ರನ್ ಪೇರಿಸುವಷ್ಟರಲ್ಲಿ ಅಂತಿಮ 5 ವಿಕೆಟ್ ಕಳೆದುಕೊಂಡಿದ್ದರಿಂದ ದೊಡ್ಡ ಮೊತ್ತ ಪೇರಿಸುವ ಕನಸಿನಿಂದ ದೂರ ಸರಿಯಿತು. ಆನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ, ಪಂದ್ಯದ ಎರಡನೇ ದಿನವಾದ ಶನಿವಾರ ಆಟ ನಿಂತಾಗ 2 ವಿಕೆಟ್‌ಗೆ 175 ರನ್‌ಗಳಿಸಿ, ಎದುರಾಳಿಗೆ ಉತ್ತಮ ತಿರುಗೇಟು ನೀಡಿತ್ತು.
ವಾಂಖೆಡೆಯಲ್ಲಿ ನಡೆಯುತ್ತಿರುವ 'ಎ' ಗುಂಪಿನ ಪಂದ್ಯದ ಮೊದಲ ದಿನವಾದ ಶುಕ್ರವಾರ ಮಿಂಚಿದ್ದ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಸಿದ್ದೇಶ್ ಲಾಡ್ ಹಾಗೂ ನಿಖಿಲ್ ಪಾಟೀಲ್, ಶನಿವಾರ ತಮ್ಮ ಆರ್ಭಟವನ್ನು ಮತ್ತೆ ಮುಂದುವರಿಸಿದರು. ಶುಕ್ರವಾರ ದಿನಾಂತ್ಯಕ್ಕೆ ಕ್ರಮವಾಗಿ 94 ಮತ್ತು 85 ರನ್ ಗಳಿಸಿದ್ದ ಈ ಇಬ್ಬರೂ ಇಂದು ತಮ್ಮ ಶತಕಗಳನ್ನು ಪೂರೈಸಿಕೊಂಡರು. 6ನೇ ವಿಕೆಟ್‌ಗೆ ಈ ಇಬ್ಬರೂ ನೀಡಿದ ಭರ್ಜರಿ 190 ರನ್‌ಗಳ ಜೊತೆಯಾಟ, ಲಾಡ್ ಅವರು ವಿಕೆಟ್ ಒಪ್ಪಿಸಲುವ ಮೂಲಕ ಅಂತ್ಯಗೊಂಡಿತು. ಆನಂತರ, ಮುಂದೆ 79 ರನ್ ಪೇರಿಸುವಷ್ಟರಲ್ಲಿ ಮುಂಬೈ ಉಳಿದೆಲ್ಲ ವಿಕೆಟ್ ಕಳೆದುಕೊಂಡು 436 ರನ್‌ಗಳಿಗೆ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಗಂಡು ಮೂಟೆ ಕಟ್ಟಿತು.
ಮಿಂಚಿದ ಬೌಲರ್‌ಗಳು
ಮೊದಲ ದಿನ 2 ವಿಕೆಟ್ ಕಬಳಿಸಿದ್ದ ವಿನಯ್ ಎರಡನೇ ದಿನವೂ ಮತ್ತೆರಡು ವಿಕೆಟ್ (ಲಾಡ್, ಹರ್ಮೀತ್) ಉರುಳಿಸಿದರು. ಅದರಲ್ಲೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಲಾಡ್-ಪಾಟೀಲ್ ಜೋಡಿ ಬೇರ್ಪಡಿಸುವ ಮೂಲಕ ಪಂದ್ಯಕ್ಕೆಂ ಹೊಸ ತಿರುವು ತಂದರು. ಇನ್ನು, ಮೊದಲ ದಿನದಾಟದಲ್ಲಿ ವಿಕೆಟ್ ಪಡೆಯದೇ ಇದ್ದ ಅರವಿಂದ್ 2ನೇ ದಿನದಾಟದಲ್ಲಿ 2 ವಿಕೆಟ್ (ಪಾಟೀಲ್, ಗಿರಪ್)ಗಳಿಸಿ ಬೀಗಿದರೆ, ಉದಿತ್ ಪಟೇಲ್ ಸಹ ಒಂದು ವಿಕೆಟ್ ಪಡೆದರು.
ಉತ್ತಮ ಆರಂಭ
ಕರ್ನಾಟಕದ ಪರ ರಾಬಿನ್ ಉತ್ತಪ್ಪ ಹಾಗೂ ಸಮರ್ಥ್ ಉತ್ತಮವಾಗಿ ಇನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ಗೆ 93 ರನ್ ಪೇರಿಸಿದ ಈ ಜೋಡಿ 31ನೇ ಓವರ್‌ನಲ್ಲಿ ಬೇರ್ಪಟ್ಟಿತು. ಹರ್ಮೀತ್ ಸಿಂಗ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ ರಾಬಿನ್ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕ ಗಳಿಸುವುದರಿಂದ ವಂಚಿತರಾದರು.
ಆನಂತರ ಕ್ರೀಸ್‌ಗೆ ಕಾಲಿಟ್ಟ ಕುನಾಲ್ ಕಪೂರ್, ಸಮರ್ಥ್ ಅವರೊಂದಿಗೆ 2ನೇ ವಿಕೆಟ್‌ಗೆ 73 ರನ್ ಸೇರಿಸಿ ಹೊರನಡೆದರು. ಆಗ, ಸಮರ್ಥ್‌ಗೆ ಜೋಡಿಯಾದ ಮನೀಶ್ ಪಾಂಡೆ, ದಿನಾಂತ್ಯದ ಹೊತ್ತಿಗೆ ತಂಡ ಮೊತ್ತವನ್ನು 175 ಕ್ಕೆ ತಂದು ನಿಲ್ಲಿಸಿದರು. ಆಟ ನಿಂತಾಗ ಸಮರ್ಥ್ 8 ಬೌಂಡರಿಗಳಿದ್ದ 85 ರನ್ ಹಾಗೂ ಇನ್ನೂ ಖಾತೆ ತೆರೆಯದ ಪಾಂಡೆ ಕ್ರೀಸ್‌ನಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


